ವಾಷಿಂಗ್ಟನ್ : ಅಮೆರಿಕ ಉತ್ಪಾದಿತ ಎಫ್ 16 ಫೈಟರ್ ಜೆಟ್ ವಿಮಾನವನ್ನು ಪಾಕಿಸ್ಥಾನ, ಭಾರತದ ವಿರುದ್ಧ ಬಳಕೆ ಮಾಡುವ ಮೂಲಕ ಎಂಡ್-ಯೂಸರ್ ಅಗ್ರಿಮೆಂಟ್ ಉಲ್ಲಂಘನೆ ಮಾಡಿದೆ; ಇದನ್ನು ಅಮೆರಿಕ ಗಂಭೀರವಾಗಿ ಪರಿಗಣಿಗಸಿದೆ; ಅಂತೆಯೇ ಈ ಬಗ್ಗೆ ಪಾಕಿಸ್ಥಾನದಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮುಂದಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.
ಪಾಕಿಸ್ಥಾನದ ಭಾರತದ ಮೇಲೆ ದಾಳಿ ಮಾಡುವಲ್ಲಿ ಎಫ್ 16 ಯುದ್ಧ ವಿಮಾನವನ್ನು ಬಳಸಿತ್ತು. ಭಾರತೀಯ ವಾಯು ಪಡೆಯ ಮಿಗ್ 21 ವಿಮಾನಗಳ ಪೈಕಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಚಲಾಯಿಸುತ್ತಿದ್ದ ವಿಮಾನದ ಮೂಲಕ ಮಿಸೈಲ್ ಉಡಾಯಿಸಿ ಪಾಕ್ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು.
ಪಾಕ್ ಬಳಸಿದ್ದ ಎಫ್ 16 ಯುದ್ಧ ವಿಮಾನದ ಅವಶೇಷಗಳು ಪಿಓಕೆ ಪ್ರದೇಶದಲ್ಲಿ ಬಿದ್ದಿತ್ತು. ಭಾರತ ಅದರ ಇಲೆಕ್ಟ್ರಾನಿಕ್ ಸಿಗ್ನೇಚರ್ ಮೊದಲಾದ ಸಾಕ್ಷ್ಯಗಳನ್ನು ಸಂಗ್ರಹಿಸಿ ಬಹಿರಂಗ ಮಾಡಿತ್ತು. ಆದರೆ ಪಾಕಿಸ್ಥಾನ ತಾನು ಎಫ್ 16 ಯುದ್ಧ ವಿಮಾನವನ್ನು ಬಳಸಿಯೇ ಇಲ್ಲ ಎಂಬ ಮೊಂಡು ವಾದವನ್ನು ಮಂಡಿಸಿತ್ತು.
ಇದೀಗ ಅಮೆರಿಕಕ್ಕೆ ಭಾರತದಿಂದ ದೊರಕಿರುವ ಸಾಕ್ಷ್ಯಗಳ ಪ್ರಕಾರ ಪಾಕಿಸ್ಥಾನ ಎಫ್ 16 ಯುದ್ಧ ವಿಮಾನ ಬಳಸಿರುವುದು ಸಾಬೀತಾಗಿದೆ. ಅಂತೆಯೇ ಅಮೆರಿಕ, ಎಫ್ 16 ಯುದ್ಧ ವಿಮಾನದ ಎಂಡ್ ಯೂಸರ್ ಒಪ್ಪಂದ ಉಲ್ಲಂಘನೆ ಮಾಡಿರುವ ಪಾಕ್ ವಿರುದ್ಧ ಕ್ರಮಕ್ಕೆ ಮುಂದಾಗಿರುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.
ಎಫ್ 16 ಯುದ್ಧ ವಿಮಾನ ಪೂರೈಕೆದಾರನಾಗಿ ತಾನು ಪಾಕ್ ಜತೆಗೆ, ಅದರ ಬಳಕೆ ಕುರಿತಾದ ಮಾಹಿತಿ-ಬಹಿರಂಗ ಮಾಡದ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ, ಎಂಡ್ ಯೂಸರ್ ಒಪ್ಪಂದದ ಅಂಶಗಳನ್ನು ಬಹಿರಂಗಪಡಿಸಲಾರೆ; ಆದರೆ ಪಾಕಿಸ್ಥಾನವು ಒಪ್ಪಂದವನ್ನು ಮೇಲ್ನೋಟಕ್ಕೇ ಉಲ್ಲಂಘನೆ ಮಾಡಿರುವುದು ನಮಗೆ ವರದಿಗಳು ಮತ್ತು ಸಾಕ್ಷ್ಯಗಳಿಂದ ಗೊತ್ತಾಗಿದೆ. ಹಾಗಾಗಿ ನಾವು ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಾಕಿಸ್ಥಾನದಿಂದ ಕೇಳಿದ್ದೇವೆ ಎದು ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರ ಲೆ| ಕ| ಕೋನ್ ಫಾಕ್ನರ್ ಮಾಧ್ಯಮದೊಂದಿಗೆ ಮಾತಾಡುತ್ತಾ ಹೇಳಿದರು.