Advertisement

ಒತ್ತುವರಿ ಉದ್ದೇಶದ ಮೇಲೂ ಕಣ್ಣು

11:53 AM Nov 22, 2017 | Team Udayavani |

ಸುವರ್ಣಸೌಧ, ಬೆಳಗಾವಿ: ಕೆರೆ ಒತ್ತುವರಿ ವಿಚಾರವನ್ನು ತೀರಾ ಗಂಭೀರವಾಗಿ ಪರಿಗಣಿಸಿರುವ ಕೆರೆ ಒತ್ತುವರಿ ಅಧ್ಯಯನ ಸಮಿತಿ ಯಾವ ಉದ್ದೇಶಕ್ಕಾಗಿ ಕೆರೆ ಒತ್ತುವರಿ ಮಾಡಿಕೊಂಡಿದ್ದರೆ ಏನು ಮಾಡಬೇಕು ಎಂಬ ಬಗ್ಗೆಯೂ ವರದಿಯಲ್ಲಿ ಸವಿವರವಾಗಿ ಹೇಳಿದೆ. 

Advertisement

ಅಂದರೆ, ಸರ್ಕಾರದ ಕಡೆಯಿಂದಲೇ ಸಾರ್ವಜನಿಕ ಉದ್ದೇಶಕ್ಕಾಗಿ ಒತ್ತುವರಿ ಮಾಡಿಕೊಂಡಿದ್ದರೆ ಇಂಥವು ಗಳನ್ನು ಸಕ್ರಮ ಮಾಡಬಹುದು ಎಂದೂ ಈ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದಲ್ಲದೆ ಕೆರೆಗಳನ್ನು ಉಳಿಸುವ ಸಲುವಾಗಿ ಮುಂದೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಸೂಚಿಸಲಾಗಿದೆ. 

ವಾಣಿಜ್ಯ ಕಟ್ಟಡ: ಜಲಮೂಲಗಳಲ್ಲಿ ಒತ್ತುವರಿ ಮಾಡಿ ನಿರ್ಮಿಸಲಾದ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಬೇಕು, ಇಲ್ಲವೇ ನೆಲಸಮಗೊಳಿಸಬೇಕು, ಇಲ್ಲವೇ ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು. ಒಂದೊಮ್ಮೆ ನೆಲಸಮ ಮಾಡುವುದು ವ್ಯರ್ಥ ಎಂದಾದರೆ ಸರ್ಕಾರವೇ ವಾಣಿಜ್ಯ ಕಟ್ಟಡಗಳ ನಿರ್ವಹಣೆ ಮಾಡಬೇಕು. ಅದಕ್ಕಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸ್ವತಂತ್ರ ಅಧಿಕಾರಿಗಳುಳ್ಳ ಪ್ರಾಧಿಕಾರ ರಚಿಸಬೇಕು. 

ರಾಜಕಾಲುವೆ: ಅಭಿವೃದ್ಧಿ ಪೂರ್ವದ ನೀರುಗಾಲುವೆಗಳು ಪ್ರಸ್ತುತದಲ್ಲಿಯೂ ಅಸ್ತಿತ್ವದಲ್ಲಿದ್ದು, ಅಂತಹ ನೀರುಗಾಲುವೆಗಳಲ್ಲಿ ಮಾಡಿರುವ ಒತ್ತುವರಿಗಳನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಯಾವುದೇ ವ್ಯಕ್ತಿಯು ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸಿದ್ದರೂ ಸಾಮಾಜಿಕ ಕಳಕಳಿಯಿಂದ ಈ ಒತ್ತುವರಿ ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಿ ನೀರುಗಾಲುವೆ ವ್ಯವಸ್ಥೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. 

ನಿರ್ಜಿವ ಕೆರೆ: ಯಾವುದೇ ಕೆರೆ ನಿರ್ಜಿವ ಎಂದು ಘೋಷಿಸಬೇಕಾದಲ್ಲಿ ಅದರ ಜಲಾನಯನ ಪ್ರದೇಶದಿಂದ ಕೆರೆಗೆ ಹರಿದು ಬರುವ ಮಳೆ ನೀರು ಮತ್ತು ಅದರ ಹಿಂದಿನ ಕೆರೆಯಿಂದ ಬರುವ ಕೋಡಿ ನೀರು ಕೆರೆಗೆ ತಲುಪದಂತೆ ಬದಲಿಸಲಾಗಿದ್ದಲ್ಲಿ ಮಾತ್ರ ಕೆರೆ ನಿರ್ಜಿವವಾಗತೊಡಗುತ್ತದೆ. ಇದು ನೈಜತೆಗೆ ವಿರುದ್ಧವಾದ ಅಂಶ.

Advertisement

ಪ್ರಸ್ತುತದಲ್ಲಿ ಈ ಪರಿಸ್ಥಿತಿ ಇರುವ ಕೆರೆಗಳ ಬಗ್ಗೆ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ಕೆರೆ ಅಭಿವೃದ್ಧಿ ಪ್ರಾಧಿಕಾರಗಳು ಸಮಗ್ರ ಅಧ್ಯಯನ ನಡೆಸಿ ಕೆರೆ ಪುನಶ್ಚೇತನಗೊಳಿಸಲು ಅಥವಾ ಜೀವಂತಗೊಳಿಸಲು ಯಾವುದೇ ಸಾಧ್ಯತೆ ಇಲ್ಲ ಎಂದು ವರದಿ ನೀಡಿದರೆ ಪರಿಗಣಿಸಬಹುದು. 

ವಿಧಾನಮಂಡಲ ತೀರ್ಮಾನ ಅಗತ್ಯ: ಸರ್ಕಾರಿ ಸಂಸ್ಥೆಗಳು ಮೂಲಸೌಕರ್ಯಗಳಿಗಾಗಿ ಕೆರೆ ಜಾಗ ಬಳಕೆ ಮಾಡಿದ್ದರೆ ಕೆರೆಗಳನ್ನು ನಿರ್ಜಿವ ಎಂದು ಘೊಷಿಸಲು ಮತ್ತು ಅದರಂತೆ ದಾಖಲೆಗಳನ್ನು ತಿದುಪಡಿ ಮಾಡಲು ತೀರ್ಮಾನ ಕೈಗೊಳ್ಳಲು ವಿಧಾನಮಂಡಲಕ್ಕಷ್ಟೇ ಅಧಿಕಾರ ಇರುತ್ತದೆ. ಸರ್ಕಾರಿ ಸಂಸ್ಥೆಗಳು ಕೆರೆ/ಕಟ್ಟೆಗಳನ್ನು ಜಲಮೂಲಗಳನ್ನು ಒತ್ತುವರಿ ಮಾಡಿಕೊಂಡಿದ್ದಲ್ಲಿ ಐದು ವರ್ಷದೊಳಗೆ ಸ್ಥಳಾಂತರರಕ್ಕೆ ಅವಕಾಶ ನೀಡಬೇಕು. 

ಶುದ್ಧಿಕರಣ ಘಟಕ: ಒಳಚರಂಡಿ ವ್ಯವಸ್ಥೆಯಲ್ಲಿ ಕೊಳಚೆ ನೀರು ಸಮರ್ಪಕವಾಗಿ ಶುದ್ಧಿಕರಣ ವಾಗುತ್ತಿಲ್ಲ. ಆದ್ದರಿಂದ ಪ್ರತಿ ಹತ್ತು ಸಾವಿರ ಜನ ಸಂಖ್ಯೆಗೆ ಒಂದು ಶುದ್ಧಿಕರಣ ಘಟಕ ಸ್ಥಾಪಿಸಬೇಕು. ಹಾಲಿ ಕೆರೆ ಸಂರಕ್ಷಣೆ: ಐದು ಎಕೆರೆಗಿಂತ ಮೇಲ್ಪಟ್ಟ ಪ್ರದೇಶ ಉಳಿದಿರುವ ಎಲ್ಲ ಕೆರೆಗಳ ಸುತ್ತಲೂ ರಸ್ತೆ ನಿರ್ಮಿಸುವುದು. ಸಾಧ್ಯವಾದರೆ ಸಾರ್ವಜನಿಕರಿಗೆ ವಾಕಿಂಗ್‌ ಟ್ರಾÂಕ್‌ ನಿರ್ಮಿಸುವುದು. ಐದು ಎಕೆರೆಗಿಂತ ಕಡಿಮೆ ವಿಸ್ತಿರ್ಣ ಉಳಿದಿರುವ ಕೆರೆಗಳ ಸುತ್ತ ಸಣ್ಣದಾದ ಕಟ್ಟೆಯ ಕುಂಟೆ ನಿರ್ಮಿಸಿ ಸುತ್ತಲೂ ಹಸಿರು ವಲಯ ನಿರ್ಮಿಸುವುದು.

ಕೆರೆ ನಿರ್ವಹಣೆಗೆ ನೇಮಿಸಲು ಪ್ರಸ್ತಾಪಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಪ್ರಾಧಿಕಾರಕ್ಕೆ ಈ ಕೆಲಸ ಮಾಡುವ ಅಧಿಕಾರ ನೀಡಬೇಕು. ಈ ಪ್ರಾಧಿಕಾರವು ಬ್ಲೂ ಜೋನ್‌ ನಿರ್ಮಿಸಬೇಕು. ಸಿಎಸ್‌ಆರ್‌ ಫಂಡ್‌ನ‌ಲ್ಲಿ ಶೇ. ಇಂತಿಷ್ಟು ಹಣ ಕಡ್ಡಾಯವಾಗಿ ಪ್ರಾಧಿಕಾರಕ್ಕೆ ಸಲ್ಲಿಸಲು ಕಾನೂನು ರೂಪಿಸಬೇಕು. ಖಾಸಗಿ ಸಂಸ್ಥೆಗಳಿಗೆ ಸಿಎಸ್‌ಆರ್‌ ಫಂಡ್‌ನ‌ಡಿ ಕೆರೆ ಅಭಿವೃದ್ಧಿಪಡಿಸಲು ದತ್ತು ನೀಡಬಾರದು. ಸ್ವಂತ ಹಣದಲ್ಲಿ ಅಭಿವೃದ್ಧಿ ಪಡಿಸಲು ಮುಂದಾದರೆ ಪರಿಗಣಿಸಬಹುದು. 

ನಿಬಂಧನೆ: ಯಾವುದೇ ಆಸ್ತಿ/ಕಟ್ಟಡಕ್ಕೆ ವಿದ್ಯುತ್‌ ನೀರು ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರೆ ಕಟ್ಟಡ ಆರಂಭಿಸಲು ನೀಡಿರುವ ಅನುಮತಿ ಪತ್ರ ಹಾಜರುಪಡಿಸುವ ನಿಯಮ ಜಾರಿ ಮಾಡಬೇಕು. ಖಾಲಿ ಇರುವ ಪ್ರದೇಶಗಳ ಮಾರಾಟ ಸಂದರ್ಭದಲ್ಲಿ ಅಧಿಕೃತ ಅಧಿಕಾರಿಗಳಿಂದ ಸ್ಥಳ ಗುರುತಿಸಿ ನಕ್ಷೆ ಹಾಜರುಪಡಿಸಿಕೊಂಡೇ ನೋಂದಣಿ ಮಾಡುವ ನಿಯಮ ಜಾರಿಗೊಳಿಸಬೇಕು. 

ಬಫರ್‌ ಜೋನ್‌ ಒತ್ತುವರಿ: ರಾಜ್ಯದ ಟೌನ್‌ ಮತ್ತು ಕಂಟ್ರಿ ಪ್ಲಾನಿಂಗ್‌ ಅಧಿನಿಯಮಗಳಲ್ಲಿ ಜಲಮೂಲಗಳ ಸುತ್ತಲೂ ನಿರ್ಧಿಷ್ಟವಾಗಿ ಇಷ್ಟು ವ್ಯಾಪ್ತಿಯನ್ನು ಬಫರ್‌ ಝೋನ್‌ ಆಗಿ ಕಾಪಾಡಿಕೊಂಡು ಬರಬೇಕು. ಈ ನಿಯಮ ಕೆರೆ ಮತ್ತು ರಾಜಕಾಲುವೆಗಳಿಗೂ ಅನ್ವಯಿಸುತ್ತವೆ. ಬಫರ್‌ ಝೋನ್‌ಗಳ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿರುವ ಆದೇಶ ಸುಪ್ರಿಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಬಗ್ಗೆ ನ್ಯಾಯಾಲಯ ನೀಡುವ ಆದೇಶ ಯಥಾವತ್ತಾಗಿ ಅನುಷ್ಟಾನಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.  

158 ಕೆರೆ ಮಾತ್ರ ಒತ್ತುವರಿಯಿಲ್ಲ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು 1547 ಕೆರೆಗಳಿದ್ದು, ಒತ್ತುವರಿಯಾಗದ ಕೆರೆಗಳ ಸಂಖ್ಯೆ ಕೇವಲ 158 ಮಾತ್ರ. ಒಟ್ಟಾರೆ ಕೆರೆಗಳ  ಜಾಗದಲ್ಲಿ ಶೇ.25ರಷ್ಟು ಒತ್ತುವರಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 27,899.29 ಎಕೆರೆ ವಿಸ್ತಿರ್ಣ ಹೊಂದಿರುವ 837 ಕೆರೆಗಳಿದ್ದು, 4533.16 ಎಕೆರೆ ಒತ್ತುವರಿಯಾಗಿ 22810.36 ಎಕೆರೆ ಉಳಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30032.37 ಎಕೆರೆ ವಿಸ್ತಿರ್ಣದ  710 ಕೆರೆಗಳಿದ್ದು,   6252.19 ಎಕೆರೆ ಒತ್ತುವರಿಯಾಗಿ 23479.2 ಎಕೆರೆ ಉಳಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೆರೆ ಒತ್ತುವರಿ ಎಲ್ಲಿ, ಯಾರು, ಎಷ್ಟು?
-ಕೆ.ಆರ್‌.ಪುರದ ವಿಭೂತಿಪುರ- ಸರೋಜ ಅಪಾರ್ಟ್‌ಮೆಂಟ್‌: ಸರ್ವೆ ಸಂಖ್ಯೆ 175ರಲ್ಲಿ 45.18 ಎಕರೆ.
-ಕೆ.ಆರ್‌.ಪುರದ ಕಗ್ಗದಾಸಪುರ- ಗಾರ್ಡನ್‌ ವ್ಯೂ ಅಪಾರ್ಟ್‌ಮೆಂಟ್‌: ಸರ್ವೆ ಸಂಖ್ಯೆ 141ರಲ್ಲಿ 32.16 ಎಕರೆ.
-ವರ್ತೂರಿನ ಹರಳೂರು- ಪ್ರಸ್ಟೀಜ್‌ ಗ್ರೂಪ್‌: ಸರ್ವೆ ಸಂಖ್ಯೆ 32ರಲ್ಲಿ 33.18 ಎಕರೆ.
-ವರ್ತೂರಿನ ಹಾಲನಾಯಕನಹಳ್ಳಿ- ಆದರ್ಶ ಡೆವಲಪರ್ಸ್‌: ಸರ್ವೆ ಸಂಖ್ಯೆ 67ರಲ್ಲಿ 42.33 ಎಕರೆ.
-ಬಿದರಹಳ್ಳಿಯ ದೊಡ್ಡಗುಬ್ಬಿ: ಡಿಎಸ್‌ ಮ್ಯಾಕ್ಸ್‌ ಅಪಾರ್ಟ್‌ಮೆಂಟ್‌: ಸರ್ವೆ ಸಂಖ್ಯೆ 38ರಲ್ಲಿ 105.18 ಎಕರೆ.
-ಬಿದರಹಳ್ಳಿಯ ಹುಸ್ಕೂರು: ಬ್ರಿಗೇಡ್‌ ಡೆವಲಪರ್ಸ್‌: ಸರ್ವೆ ಸಂಖ್ಯೆ 52ರಲ್ಲಿ 13.11 ಎಕರೆ.
-ಬೇಗೂರಿನ ಇಬ್ಬಲೂರು- ಶೋಭ ಪಾರ್ಟ್‌ಮೆಂಟ್‌: ಸರ್ವೆ ಸಂಖ್ಯೆ 36ರಲ್ಲಿ 18.6 ಎಕರೆ.
-ಉತ್ತರಹಳ್ಳಿಯ ಕದಿರೇನಹಳ್ಳಿ- ಜಯನಗರ ಕೋ ಆಪರೇಟಿವ್‌ ಸೊಸೈಟಿ: ಸರ್ವೆ ಸಂಖ್ಯೆ 55ರಲ್ಲಿ 3.13 ಎಕರೆ.
-ಕೆಂಗೇರಿಯ ರಾಮಸಂದ್ರ- ನೈಸ್‌ ಕಂಪನಿ: ಸರ್ವೆ ಸಂಖ್ಯೆ 6ರಲ್ಲಿ 7.6 ಎಕರೆ. 
-ಕಸಬಾ ಹೋಬಳಿ ಕಾಚರಕನಹಳ್ಳಿ- ಚಂದ್ರಿಕಾ ಸೋಪ್‌ ಫ್ಯಾಕ್ಟರಿ: ಸರ್ವೆ ಸಂಖ್ಯೆ 153ರಲ್ಲಿ 57.26 ಎಕರೆ.
-ಕಸಬಾ ಹೋಬಳಿ ದಂಡು ಉಪ್ಪಾರಹಳ್ಳಿ- ಮೌಂಟ್‌ ಕಾರ್ಮಲ್‌ ಕಾಲೇಜು: ಸರ್ವೆ ಸಂಖ್ಯೆ 20ರಲ್ಲಿ 13.2 ಎಕರೆ.
-ಯಶವಂತಪುರ- ಆರ್‌ಎನ್‌ಎಸ್‌ ಸ್ಪರ್ಶ್‌ ಆಸ್ಪತ್ರೆ ಅಪಾರ್ಟ್‌ಮೆಂಟ್‌: ಸರ್ವೆ ಸಂಖ್ಯೆ 70ರಲ್ಲಿ 3.2 ಎಕರೆ.
-ಕುಂದಾಣ ಹೋಬಳಿ ಕಾರಳ್ಳಿ ಅಮಾನಿ ಕೆರೆ- ಪ್ರಸ್ಟಿಜ್‌ ಗ್ರೂಫ್‌: ಸರ್ವೆ ಸಂಖ್ಯೆ 1ರಲ್ಲಿ 62.04 ಎಕರೆ.
-ಕುಂದಾಣ ಹೋಬಳಿ ತೈಲಗೆರೆ- ಪ್ರಸ್ಟಿಜ್‌ ಗ್ರೂಫ್‌: ಸರ್ವೆ ಸಂಖ್ಯೆ 62ರಲ್ಲಿ7.30 ಎಕರೆ.

Advertisement

Udayavani is now on Telegram. Click here to join our channel and stay updated with the latest news.

Next