Advertisement

ಲಿಂಗಾಯತ ಹೋರಾಟಗಾರರ ಮೇಲೆ ಕಣ್ಣು

09:24 AM Aug 31, 2017 | |

ಬೆಂಗಳೂರು: ಸಂಶೋಧಕ ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆಗೈದಂತೆಯೇ ಮನುವಾದಿಗಳು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರ ಮೇಲೂ ಕಣ್ಣಿಟ್ಟಿರಬಹುದು ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ನಡೆಸುತ್ತಿರುವ ಸ್ವಾಮೀಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರಿನ ಬಸವ ಭವನದಲ್ಲಿ ಜನ ಸಾಮಾನ್ಯರ ವೇದಿಕೆ ಏರ್ಪಡಿಸಿದ್ದ ಲಿಂಗಾಯತ ಸ್ವತಂತ್ರ ಧರ್ಮ ನಿರ್ಣಾಯಕ ಸಭೆಯಲ್ಲಿ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹಾಗೂ ಕೂಡಲ ಸಂಗ ಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಈ ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲ ಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಮಾತನಾಡಿ, “ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ದೊರೆತರೆ ಮನುವಾದಿಗಳಿಗೆ ಉಳಿಗಾಲವಿಲ್ಲ. ಮನುವಾದಿಗಳು ಸಂಶೋಧಕ ಎಂ.ಎಂ. ಕಲಬುರ್ಗಿಯನ್ನು ಕೊಂದಂತೆ ಲಿಂಗಾಯತ ಹೋರಾಟಗಾರರನ್ನು ಗುರಿ ಮಾಡಬಹುದು’ ಎಂದರು. ಬೈಲಹೊಂಗಲದ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, “ಲಿಂಗಾ ಯತ ಪ್ರತ್ಯೇಕ ಧರ್ಮದ ಹೋರಾಟ ಕಾಂಗ್ರೆಸ್‌ ಪರವೂ ಅಲ್ಲ. ಬಿಜೆಪಿ ವಿರುದ್ಧವೂ ಅಲ್ಲ’ ಎಂದರು. 

ವೀರಶೈವ ಮಹಾಸಭೆಗೆ ಎಚ್ಚರ: ವೀರಶೈವ ಮಹಾ ಸಭೆಯವರು ಮನುವಾದಿಗಳ ಜೊತೆ ಸೇರಿಕೊಂಡು ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದರೆ ಲಿಂಗಾಯತರ ಶಾಪಕ್ಕೆ ಗುರಿಯಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು. ಐದಾರು ಸ್ವಾಮೀಜಿಗಳಿಗಾಗಿ ವೀರಶೈವ ಮಹಾಸಭೆ ಲಿಂಗಾಯತ ಧರ್ಮವನ್ನು ಬಲಿಕೊಡುತ್ತಿದೆ. ವೀರಶೈವರು ಸ್ಥಿತಿವಂತರಿದ್ದೀರಿ, ಸಮಾಜದಲ್ಲಿರುವ ಕಂಬಾರರು, ಕುಂಬಾರ, ಮಡಿವಾಳ ಸಮಾಜದವರನ್ನೂ ಸಮಾನ ದೃಷ್ಠಿಯಿಂದ ನೋಡಬೇಕು ಎಂದು ಸ್ವಾಮೀಜಿ ಹೇಳಿದರು.

ಯಡಿಯೂರಪ್ಪ ಮಾಜಿ ದಲಿತ: ಮಾಜಿ ಸಿಎಂ
ಬಿ.ಎಸ್‌.ಯಡಿಯೂರಪ್ಪ ಕೂಡ ಮಾಜಿ ದಲಿತ. ಬಸವಣ್ಣ ಬರುವ ಮೊದಲು ಲಿಂಗಾಯತ ಸಮು ದಾಯದಲ್ಲಿರುವ ಎಲ್ಲರೂ ಶೂದ್ರರೇ ಆಗಿದ್ದರು. ಬಸವಣ್ಣ ಬಂದ ಮೇಲೆ ಲಿಂಗ ಕಟ್ಟಿಕೊಂಡು ಎಲ್ಲರೂ ಲಿಂಗಾಯತರಾಗಿದ್ದಾರೆ. ಈಗ ಮನುವಾದಿಗಳೊಂದಿಗೆ ಸೇರಿಕೊಂಡು ಯಡಿಯೂರಪ್ಪ ದಲಿತರನ್ನು ಮನೆಗೆ ಕರೆದು ಊಟ ಹಾಕುತ್ತಿದ್ದಾರೆ. ದಲಿತರಿಗೆ ಕರೆದು ಊಟ ಹಾಕಿದರೆ ಅವರು ಉದ್ಧಾರ ಆಗುವುದಿಲ್ಲ. ಲಿಂಗಾಯತರೆಲ್ಲರೂ ದಲಿತರೇ ಎಂದರೆ ಮಾತ್ರ ನಮ್ಮ ಹೋರಾಟ ಯಶಸ್ವಿಯಾಗಲಿದೆ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು.

ರಾಜಕೀಯವಾಗಿ ದುರುಪಯೋಗ: ರಾಜ್ಯದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ (ಜೆಸಿಬಿ) ಬಸವಣ್ಣನನ್ನು ರಾಜಕೀಯವಾಗಿ ದುರುಪಯೋಗ
ಪಡೆಸಿಕೊಂಡಿವೆ. ಬಿ.ಎಸ್‌.ಯಡಿಯೂರಪ್ಪ ಅವರು ಲಿಂಗಾಯತರ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ 300
ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಟ ಚೇತನ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಚೇತನ್‌ ವಾಗ್ಧಾಳಿಯನ್ನು ಸಹಿಸದ ಯಡಿಯೂರಪ್ಪ ಅಭಿಮಾನಿ ಶಿವಕುಮಾರ್‌ ಎನ್ನುವವರು, ಚೇತನ್‌ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ “ಬರೀ ಯಡಿ ಯೂರಪ್ಪನ ವಿರುದ್ಧ ಯಾಕೆ ಮಾತನಾಡುತ್ತೀರಿ? ಸಿದ್ದರಾಮಯ್ಯ ಏನು ಲೂಟಿ ಮಾಡಿಲ್ವಾ?’ ಎಂದು ಸಭೆಯಲ್ಲಿಯೇ ಎದ್ದು ಪ್ರಶ್ನೆ ಮಾಡಿದರು. ತಕ್ಷಣ ಪೊಲಿಸರು ಅವರನ್ನು ಸಭೆಯಿಂದ ಹೊರಗಡೆ ಕರೆದುಕೊಂಡು ಹೋದರು.  

ಬಸವಣ್ಣ ಆತ್ಮ ನಿರೀಕ್ಷೆ ಮಾಡಿಕೊಂಡು ಕಾಯಕದ ಶರಣರಲ್ಲಿ ಭಕ್ತಿ ಹುಡುಕುತ್ತ ಬಂದರು. ಎಲ್ಲ ಮತಗಳಲ್ಲಿ ಒಬ್ಬರು ಬೋಧನೆ ಮಾಡಿ ಎಲ್ಲರೂ ಕೇಳುತ್ತಾರೆ. ಲಿಂಗಾಯತ ಧರ್ಮದಲ್ಲಿ ಎಲ್ಲರಿಗೂ ಸಮಾನತೆ ಇದೆ. ಲಿಂಗಾಯತ ಧರ್ಮ ಜೇನುತುಪ್ಪ ಇದ್ದ ಹಾಗೆ. ಎಲ್ಲರೂ ಸವಿಯುವಂತಹುದು.
ಶಿವರುದ್ರ ಮಹಾಸ್ವಾಮಿ ಬೇಲಿಮಠ, ಬೆಂಗಳೂರು 

ಲಿಂಗಾಯತ ಧರ್ಮದ ಭಾಷೆ ಕನ್ನಡ. ತೆಲುಗಿನ ಕವಿ ಬಾಲ್ಕುರ್ಕಿ ಸೋಮನಾಥ ಬಸವ ಪುರಾಣದಲ್ಲಿ ವೀರಶೈವ ಪದ ಬಳಕೆ ಮಾಡಿದ್ದಾರೆ. ರಾಜಕಾರಣಿಗಳು ಲಿಂಗಾಯತರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಕಾಯಕ ಮಾಡುವವರನ್ನೇ ಜಾತಿಗಳಾಗಿ ಒಡೆದು ಆಳುತ್ತಿದ್ದಾರೆ.
ಸಿದ್ದರಾಮೇಶ್ವರ ಸ್ವಾಮೀಜಿ, ರುದ್ರಾಕ್ಷಿ ಮಠ, ನಾಗನೂರು ಬೆಳಗಾವಿ

ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಅಸ್ಪೃಶ್ಯತೆ ಅನುಭವಿಸಿರುವ ದಲಿತರಿಗೆ ಮರಭೂಮಿಯಲ್ಲಿ ನೀರು ಸಿಕ್ಕಂತಾಗಿದೆ. ಬಸವಣ್ಣನ ಅನುಯಾಯಿ ಲಿಂಗಾಯತರು ಜಾಗೃತರಾಗುತ್ತಿದ್ದಾರೆ. ಸಮಾನತೆಯ ಲಿಂಗಾಯತ ಧರ್ಮಕ್ಕೆ ಶೋಷಣೆ ಅನುಭವಿಸಿರುವ ದಲಿತರ ಬೆಂಬಲ ಇದೆ.
ಎನ್‌. ಮಹೇಶ್‌ ಬಿಎಸ್‌ಪಿ ಅಧ್ಯಕ್ಷ
 
ಹಿಂದೂ ಧರ್ಮ ತಲೆಯ ಬಗ್ಗೆ ಯೋಚನೆ ಮಾಡುತ್ತದೆ. ಲಿಂಗಾಯತ ಧರ್ಮ ಪಾದದ ಬಗ್ಗೆ ಯೋಚನೆ ಮಾಡುತ್ತದೆ. ದಲಿತರ ಮನೆಯಲ್ಲಿ ಊಟ ಮಾಡಿದ ಕಾರಣಕ್ಕೆ ಆಸ್ಥಾನದ ಹೊರಗಡೆ ವಿಚಾರಣೆ ಎದುರಿಸಿದ ದೇಶದ ಏಕೈಕ ಪ್ರಧಾನಿ ಬಸವಣ್ಣ. ನಾವು ಬಸವಣ್ಣನ ಕಲ್ಯಾಣ ಕರ್ನಾಟಕ ಕಟ್ಟೇ ಕಟ್ಟುತ್ತೇವೆ. 
ಅಕ್ಕ ಅನ್ನಪೂರ್ಣ ಬಸವ ಕೇಂದ್ರ ಬೀದರ್‌ 

Advertisement

Udayavani is now on Telegram. Click here to join our channel and stay updated with the latest news.

Next