Advertisement

ಉಗ್ರವಾದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ಬೇಡ-ಕೆನಡಾ ಸರ್ಕಾರಕ್ಕೆ ಭಾರತ ತರಾಟೆ

09:28 PM Jul 06, 2023 | Team Udayavani |

ನವದೆಹಲಿ/ಒಟ್ಟಾವ/ಲಂಡನ್‌: ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌, ಕೆನಡಾಗಳಲ್ಲಿ ಭಾರತದ ರಾಯಭಾರ, ದೂತಾವಾಸ ಕಚೇರಿಗಳನ್ನು ಗುರಿಯಾಗಿಸಿ ಖಲಿಸ್ತಾನ ಉಗ್ರರು ನಡೆಸುತ್ತಿರುವ ದಾಳಿಯನ್ನು ಕೇಂದ್ರ ಸರ್ಕಾರ ಅತ್ಯುಗ್ರವಾಗಿ ಖಂಡಿಸಿದೆ.

Advertisement

ನವದೆಹಲಿಯಲ್ಲಿ ಗುರುವಾರ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ, ನಮ್ಮ ದೇಶದ ರಾಜತಾಂತ್ರಿಕರ, ಕಚೇರಿಗಳ ವಿರುದ್ಧ ನಡೆಸಲಾಗಿರುವ ದಾಳಿ, ಪೋಸ್ಟರ್‌ಗಳಲ್ಲಿ ಅವರನ್ನು ಅತ್ಯಂತ ಕೀಳಾಗಿ ಚಿತ್ರಿಸಿರುವ ಅಂಶ ಖಂಡನೀಯ. ರಾಜತಾಂತ್ರಿಕ ವಿಚಾರಗಳಲ್ಲಿ ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆಗೆ ಯಾವತ್ತೂ ಅವಕಾಶವಿರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಭಯೋತ್ಪಾದನೆಗೆ ಅನುವು ಮಾಡಿಕೊಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕೆನಡಾ ಸರ್ಕಾರ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಬೇಕು ಎಂದು ಕಟುಶಬ್ದಗಳಲ್ಲಿ ಹೇಳಿದರು.

ಹೊಸ ವಿವಾದ ಏನು?
ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್‌ ಸಂಜಯ ಕುಮಾರ್‌ ವರ್ಮಾ ಮತ್ತು ಟೊರಾಂಟೊದಲ್ಲಿ ಇರುವ ಭಾರತದ ದೂತಾವಾಸದ ಹಿರಿಯ ಅಧಿಕಾರಿ ಅಪೂರ್ವ ಶ್ರೀವಾಸ್ತವ ಅವರನ್ನು “ಕೊಲೆಗಡುಕರು” ಎಂದು ಚಿತ್ರಿಸಿರುವ ಪೋಸ್ಟರ್‌ಗಳನ್ನು ಖಲಿಸ್ತಾನ ಉಗ್ರರು ಹಾಕಿದ್ದಾರೆ. ಸಂಘಟನೆಯ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಎಂಬ ಉಗ್ರನ ಸಾವಿಗೆ ಪ್ರತಿಕಾರವಾಗಿ ಈ ಪೋಸ್ಟರ್‌ಗಳನ್ನು ಹಾಕಲಾಗಿದೆ.

ಗಂಭೀರವಾಗಿ ಪರಿಗಣನೆ:
ಕೆನಡಾದ ನೆಲದಲ್ಲಿ ಭಾರತ ವಿರೋಧಿ ನಿಲುವುಗಳಿಗೆ, ಖಲಿಸ್ತಾನಿ ಉಗ್ರರ ದುಷ್ಕೃತ್ಯಕ್ಕೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪಗಳನ್ನು ಆ ದೇಶದ ಪ್ರಧಾನಿ ಜಸ್ಟಿನ್‌ ಟ್ರಾಡ್ನೂ ಅಲ್ಲಗಳೆದಿದ್ದಾರೆ. “ಪ್ರತ್ಯೇಕತಾವಾದ, ಹಿಂಸಾಕೃತ್ಯಗಳು, ಬೆದರಿಕೆ ಮುಂತಾದವುಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಭಯೋತ್ಪಾದನಾ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಅಂಥ ಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮ ದೇಶದಲ್ಲಿ ಖಲಿಸ್ತಾನ ಪರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ ಎಂಬ ಆರೋಪಗಳು ಸುಳ್ಳು” ಎಂದಿದ್ದಾರೆ.

ಸೋಮವಾರ ನಡೆದಿದ್ದ ಬೆಳವಣಿಗೆಯಲ್ಲಿ ನವದೆಹಲಿಯಲ್ಲಿ ವಿದೇಶಾಂಗ ಸಚಿವಾಲಯ ಕೆನಡಾ ಹೈಕಮಿಷನ್‌ನ ಹಿರಿಯ ಅಧಿಕಾರಿಯನ್ನು ಕರೆಯಿಸಿಕೊಂಡು ಭಾರತ ವಿರೋಧಿ ಚಟುವಟಿಕೆಗಳ ವಿರುದ್ಧ ಪ್ರತಿಭಟನೆ ಸಲ್ಲಿಸಿತ್ತು.

Advertisement

ದಾಳಿಗೆ ಬೆಂಬಲ ಇಲ್ಲವೇ ಇಲ್ಲ: ಯುಕೆ ಸರ್ಕಾರ
ಲಂಡನ್‌ನಲ್ಲಿನ ಭಾರತದ ಹೈಕಮಿಷನ್‌ ಕಚೇರಿ ಮೇಲಿನ ದಾಳಿಗೆ ಯಾವುದೇ ರೀತಿಯಲ್ಲಿ ಬೆಂಬಲ ನೀಡುವುದಿಲ್ಲ ಎಂದು ಬ್ರಿಟನ್‌ ಸರ್ಕಾರ ಗುರುವಾರ ಹೇಳಿದೆ. ಈ ಬಗ್ಗೆ ಟ್ವೀಟ್‌ ಮಾಡಿದ ವಿದೇಶಾಂಗ ಸಚಿವ ಜೇಮ್ಸ್‌ ಕ್ಲೆವರ್ಲೆ “ನಮ್ಮ ದೇಶದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿಯ ಅಧಿಕಾರಿಗಳ ರಕ್ಷಣೆ ನಮ್ಮ ಹೊಣೆ. ಇಂಥ ದಾಳಿಗಳಿಗೆ ನಮ್ಮ ಬೆಂಬಲವಿಲ್ಲ ಎಂದು ಹೈಕಮಿಷನರ್‌ ವಿಕ್ರಂ ದೊರೆಸ್ವಾಮಿ ಮತ್ತು ಭಾರತ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಸೋಮವಾರ ಮಾತನಾಡಿದ್ದ ವಿದೇಶಾಂಗ ಸಚಿವ ಜೈಶಂಕರ್‌, ಖಲಿಸ್ತಾನ ಸಿದ್ಧಾಂತ ನಮ್ಮ ದೇಶದ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವ ಯಾವುದೇ ದೇಶಕ್ಕೂ ಒಳ್ಳೆಯದಲ್ಲ ಎಂದು ಹೇಳಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next