ಚಿತ್ರದುರ್ಗ: ವಿಚಾರವಾದಿ, ಚಿಂತಕಿ, ಪತ್ರಕರ್ತೆ ಗೌರಿಲಂಕೇಶ್ ಅವರ ಹತ್ಯೆಗೆ ಜನ ಸಾಮಾನ್ಯರು, ವಿವಿಧ ಸಂಘ ಸಂಸ್ಥೆಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಬುಧವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು, ಚಿಂತಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಟಿ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿ ಹಂತಕರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಕುಂ. ವೀರಭದ್ರಪ್ಪ, ಜನಪರ ಕಾಳಜಿಯೊಂದಿಗೆ ಜೀವನ ಪೂರ್ತಿ 24×7 ರೀತಿಯಲ್ಲಿ ಹೋರಾಟಕ್ಕೆ ಮೀಸಲಿಟ್ಟಿದ್ದ ಗೌರಿಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿರುವುದು ದಿಗ್ಭ್ರಮೆ ಮೂಡಿಸಿದೆ. ಕೂಡಲೇ ಹಂತಕರನ್ನು ಬಂಧಿಸಬೇಕೆಂದು
ಒತ್ತಾಯಿಸಿದರು. ಗೌರಿಲಂಕೇಶ್ ಸಾವು ಅತ್ಯಂತ ಕ್ರೌರ್ಯದಿಂದ ಕೂಡಿದೆ. ಪ್ರಜ್ಞಾವಂತ ಸಮಾಜ ಸಾಮೂಹಿಕವಾಗಿ ಖಂಡಿಸಬೇಕು. ಗೌರಿಲಂಕೇಶ್ ಹತ್ಯೆಯಾಗಿಲ್ಲ. ಅವರು ಹುತಾತ್ಮರಾಗಿದ್ದಾರೆ. ವಿಚಾರವಾದಿಗಳನ್ನು ಕೊಲ್ಲಬಹುದು. ಆದರೆ, ವಿಚಾರವಾದಗಳನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತ ಸ್ವಾತಂತ್ರ ಕಿತ್ತುಕೊಳ್ಳುವ ಹುನ್ನಾರ ಮಾಡಲಾಗಿದೆ. ಈ ಕೊಲೆ ಭಯೋತ್ಪಾದನೆಗಿಂತ ಕಡಿಮೆಯಿಲ್ಲ, ಕೊಲೆಗೆಡುಕರನ್ನು ಪತ್ತೆ ಮಾಡಿ ಶಿಕ್ಷಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಡಾ| ಎಂ.ಎಂ.ಕಲಬುರಗಿ ಅವರ ತನಿಖೆ ಕುರಿತ ಶ್ವೇತ ಪತ್ರವನ್ನು ಹೊರಡಿಸಬೇಕು. ಕಲಬುರಗಿ ಹತ್ಯೆ ಹಂತಕರನ್ನು ಪತ್ತೆ ಮಾಡಿದ್ದರೆ ಗೌರಿ ಲಂಕೇಶ್ ಹತ್ಯೆ ಆಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಡಿನ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ್ದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು ಖಂಡನೀಯ. ಒಂದು ಹೆಣ್ಣಿನ ಹತ್ಯೆ ಮಾಡಿರುವುದು ಮತ್ತೂಷ್ಟು ಖಂಡನೀಯ. ವೈಚಾರಿಕ ಮನಸ್ಸುಗಳಿಗೆ ಪೊಲೀಸರು ರಕ್ಷಣೆ ನೀಡಲು ಸಾಧ್ಯವಿಲ್ಲ. ಸಮಾಜವೇವೈಚಾರಿಕ ಮನಸ್ಸುಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳಿದರು.
ರಾಜ್ಯ ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ ಮಾತನಾಡಿ, ಇದೊಂದು ಹಿಂಸೆ ಹುಟ್ಟಿಸುವ ಪೈಶಾಚಿಕ ಕೃತ್ಯ. ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯಾಗಿದೆ. ಗೌರಿ ಲಂಕೇಶ್ ಅವರ ಹತ್ಯೆ ಇಡೀ ರಾಜ್ಯದ ಜನತೆಯನ್ನು ತೀವ್ರ ಆಘಾತಕ್ಕೆ ದೂಡಿದೆ. ಪರ ಧರ್ಮ, ಪರ ವಿಚಾರಕ್ಕೆ ಮನ್ನಣೆ ನೀಡಬೇಕಿದೆ. ಹಿಂಸೆ ಬಹಳ ಕೆಟ್ಟದ್ದು. ಜನ ಸಾಮಾನ್ಯರನ್ನು ಹಿಂಸೆ ಬಲಿ ತೆಗೆದುಕೊಳ್ಳಲಿದೆ. ಸಹಭಾಳ್ವೆ, ಶಾಂತಿ, ಸೌಹಾರ್ದತೆಯಿಂದ ಕೂಡಿಬಾಳಬೇಕಿದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಎಂ. ಶಂಕರಪ್ಪ ಮಾತನಾಡಿ, ರಾಜ್ಯ ಪೊಲೀಸ್ ಗುಪ್ತಚಾರ ಇಲಾಖೆ ವೈಫಲ್ಯದಿಂದಾಗಿ ಗೌರಿ ಲಂಕೇಶ್ ಹತ್ಯೆಯಾಗಿದೆ. ಸರ್ಕಾರದ ಅಂಗಸಂಸ್ಥೆ ನಡೆಸುವ ಬೇಹುಗಾರಿಕೆ ವೈಫಲ್ಯ ಎದ್ದು ಕಾಣುತ್ತಿದೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಶೀಘ್ರವೇ ಹಂತಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಚಂದ್ರಶೇಖರ ತಾಳ್ಯ ಮಾತನಾಡಿ, ಗೌರಿ ಲಂಕೇಶ್ ಅವರಿಗೆ ರಾತ್ರೋ ರಾತ್ರಿ ಸಮಾಜವನ್ನು ತಿದ್ದುವ ದಿಟ್ಟತನವಿತ್ತು. ಅವರ ಹತ್ಯೆಯಿಂದಾಗಿ ನಾಡು ತಲ್ಲಣಗೊಂಡಿದೆ. ದಿಟ್ಟ ಪತ್ರಕರ್ತೆಯಾಗಿದ್ದರು. ಅವರ ಹತ್ಯೆಯ ಹೊಣೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ಹೊರಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್, ಮಾಜಿ ಕೂಡಾ ಅಧ್ಯಕ್ಷ ಬಿ.ಟಿ.ಜಗದೀಶ್, ಎಐಡಿವೈಓ ರವಿಕುಮಾರ್ ಮಾತನಾಡಿದರು. ವಿಚಾರ ವೇದಿಕೆ ಮಲ್ಲಪ್ಪನಹಳ್ಳಿ ಮಹಲಿಂಗಪ್ಪ, ರೈತ ಸಂಘದ ಕೆ.ಪಿ. ಭೂತಯ್ಯ, ಸುರೇಶ್ ಬಾಬು, ಮೋûಾ, ಲಲಿತಾ ಕೃಷ್ಣಮೂರ್ತಿ, ಹೋರಾಟಗಾರ ಆರ್. ಶೇಷಣ್ಣಕುಮಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.