Advertisement
ಆತ ಎನ್‌ಸಿಸಿ ಆರ್ಮಿಯ ಜೂನಿಯರ್ ಅಂಡರ್ ಆಫೀಸರ್ ಆಗಿದ್ದವನು. ಈಗ ಸೀನಿಯರ್ ಅಂಡರ್ ಆಫೀಸರ್. ಕಾಲೇಜಿನಲ್ಲಿ ವಾರದ ತರಬೇತಿ ಅವನ ನಿಯಂತ್ರಣದಲ್ಲೇ ನಡೆಯುತ್ತದೆ. ಅವನ ತೀಕ್ಷ್ಣ ಕಣ್ಣುಗಳಲ್ಲಿ ಮಹತ್ವಾಕಾಂಕ್ಷೆ ತುಳುಕುತ್ತದೆ.
Related Articles
Advertisement
ಈ ರೀತಿಯ ಉದಾಹರಣೆಗಳು ಅಸಂಖ್ಯ. ಪಠ್ಯೇತರ ಚಟುವಟಿಕೆಗಳೂ ಅಷ್ಟೆ. ಒಂದು ಹೆಚ್ಚು, ಒಂದು ಕಡಿಮೆ ಎನ್ನಲಾಗದು. ತಮಗೆ ಯಾವುದು ಇಷ್ಟವೋ ಅದನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ಒದಗಿಸಿಕೊಡುತ್ತವೆ. ಕೆಲವು ಕಡೆ ಇರುವುದರಲ್ಲಿ ಯಾವುದಾದರೊಂದನ್ನು ಆರಿಸಿಕೊಳ್ಳಬೇಕಿರುತ್ತದೆ. ಯಾವುದನ್ನೇ ಆರಿಸಿ ಕೊಂಡರೂ ಒಂದಲ್ಲ ಒಂದು ವಿಧದಲ್ಲಿ ಅವು ನೆರವಿಗೆ ಬರುತ್ತವೆ ಎಂಬುದಂತೂ ದಿಟ.
ಪಠ್ಯೇತರ ಚಟುವಟಿಕೆ ಎಂದರೇನು?ರೆಗ್ಯುಲರ್ ಕರಿಕ್ಯುಲಂನಿಂದ ಹೊರಗಿರುವುದು. ಈ ಚಟುವಟಿಕೆಗಳಿಗೂ ಪಠ್ಯಕ್ಕೂ ನೇರ ಸಂಬಂಧವಿರುವುದಿಲ್ಲ. ಸಾಮಾನ್ಯವಾಗಿ ಅವು ತರಗತಿಯ ಹೊರಗಡೆಯೇ ನಡೆಯುತ್ತವೆ. ಕೆಲವು ಒಳಗಡೆ ನಡೆದರೂ ವ್ಯಾಪ್ತಿ ವಿಶಾಲ. ಇಂದು ದೇಶಾದ್ಯಂತ ಸುಮಾರು 41,442 ಎನ್ನೆಸ್ಸೆಸ್ ಘಟಕಗಳಲ್ಲಿ ಸುಮಾರು 3.86 ಮಿಲಿಯನ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಇದೆ. 17 ನಿರ್ದೇಶನಾಲಯಗಳ (ಡೈರೆಕ್ಟರೇಟ್ಸ್) ಸುಮಾರು 814 ಎನ್‌ಸಿಸಿ ಘಟಕಗಳಲ್ಲಿ (684 ಆರ್ಮಿ, 69 ನೇವಿ, 61 ಏರ್‌ಫೋರ್ಸ್) ಲಕ್ಷಾಂತರ ವಿದ್ಯಾರ್ಥಿಗಳಿದ್ದಾರೆ. (2015ರ ವೇಳೆಗೆ 13 ಲಕ್ಷ ಕೆಡೆಟ್‌ಗಳಿದ್ದರು). 2017ರ ವೇಳೆಗೆ ಸ್ಕೌಟ್ಸ್ ಗೈಡ್ಸ್ (ರೋವರ್ ರೇಂಜರ್ ಸೇರಿ) ಸಂಖ್ಯೆ ಸುಮಾರು 4.5 ಲಕ್ಷ. ಸಾಮಾನ್ಯವಾಗಿ ಈ ಮೂರು ಸಂಸ್ಥೆಗಳ ಘಟಕಗಳು ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ಇದ್ದು, ವಿದ್ಯಾರ್ಥಿಗಳ ಭಾಗಿಯಾಗುವಿಕೆ ಹೆಚ್ಚಾಗಿದೆ ಎನ್ನಬಹುದು. ಬಳಿಕ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯೂ ಸಾಕಷ್ಟು ಮಂದಿ ವಿದ್ಯಾರ್ಥಿ ಸದಸ್ಯರನ್ನು ಹೊಂದಿದೆ. ಈ ಚಟುವಟಿಕೆಗಳಲ್ಲಿ ಬಾಹ್ಯ ಸಂಪರ್ಕ ಹೆಚ್ಚು. (ಅಂದರೆ, ಶಿಬಿರಗಳು, ತರಬೇತಿ ಹೊರಗಡೆ ನಡೆಯುತ್ತವೆ. ಸರಕಾರಿ ಸಂಸ್ಥೆಗಳ ಅಧಿಕಾರಿ ಗಳು ಉನ್ನತಾಧಿಕಾರ ಹೊಂದಿರುತ್ತಾರೆ. ಅವರಿಗೆ ಸಹಾಯಕರಾಗಿ ಶಾಲೆ, ಕಾಲೇಜುಗಳ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ.) ಉಳಿದಂತೆ ಕ್ರೀಡೆ, ಕಲ್ಚರಲ್ ಕಮಿಟಿ, ನಾಟಕ, ಎಚ್‌ಆರ್ ಸೆಲ್, ಕರಾಟೆ, ಇಕೋ ಕ್ಲಬ್.. ಹೀಗೆ ಸಾಕಷ್ಟಿವೆ. ಇವುಗಳು ಶಿಕ್ಷಣ ಸಂಸ್ಥೆಗಳ ನೇರ ನಿಯಂತ್ರಣದಲ್ಲಿರುತ್ತವೆ. ಸಾಧನೆಗಳು ಬಾಹ್ಯ ಅವಕಾಶಗಳನ್ನು ತೆರೆದಿಡುತ್ತವೆ. ಧೈರ್ಯ, ಆತ್ಮಗೌರವ
ಸಾಮಾಜಿಕವಾಗಿ ಬೆರೆಯುವುದರಿಂದ ಹೊಸ ವ್ಯಕ್ತಿ, ಸಂದರ್ಭಗಳ ಮುಖಾಮುಖೀ, ವಾಸ್ತವದ ಅರಿವು ಉಂಟಾಗುತ್ತದೆ. ತನ್ನನ್ನು ತಾನು ಕಂಡುಕೊಂಡು, ತನ್ನ ಶಕ್ತಿ, ಸಾಮರ್ಥ್ಯ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ವ್ಯಕ್ತಿತ್ವ ವಿಕಸನವಾಗುತ್ತದೆ. ಆತ್ಮಗೌರವವೂ ಹೆಚ್ಚುತ್ತದೆ. ಧೈರ್ಯ, ಸ್ಥೈರ್ಯ ಲಭಿಸಿದಾಗ ಆತ್ಮವಿಶ್ವಾಸ ತಾನಾಗಿಯೇ ಬರುತ್ತದೆ. ಆತ್ಮವಿಶ್ವಾಸವೆಂಬ ಅಸ್ತ್ರ ಸಿಕ್ಕ ಮೇಲೆ ಸಾಧನೆಗೆ ಮಿತಿಯಿಲ್ಲ ಅಲ್ಲವೆ? ಸಂಶೋಧನೆಗಳ ಪ್ರಕಾರ
ನ್ಯಾಷನಲ್ ಲಾಂಗಿಟ್ಯೂಡಿನಲ್ ಸ್ಟಡಿ ಆಫ್ ಅಡಾಲಸೆಂಟ್ ಹೆಲ್ತ್ ಸಂಸ್ಥೆಯ ಅಧ್ಯಯನವೊಂದರ ಪ್ರಕಾರ, 70 ಪ್ರತಿಶತದಷ್ಟು ಹದಿಹರೆಯದವರು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆಲವು ಅಧ್ಯಯನಗಳು, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಶಾಲಾ ವಿದ್ಯಾರ್ಥಿಗಳು ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸುವ ಸಾಧ್ಯತೆಗಳು ಕಡಿಮೆ ಎಂದೂ, ಕಾಲೇಜು ವಿದ್ಯಾರ್ಥಿಗಳು ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಗಳು ಕಡಿಮೆ ಎಂದೂ, ಸಂವಹನ, ಸಂಬಂಧಗಳನ್ನು ಉತ್ತಮಪಡಿಸಿಕೊಂಡು ಸಾಧನೆ ಮಾಡುತ್ತಾರೆ ಎಂದೂ ತಿಳಿಸುತ್ತವೆ. ಕುದ್ಯಾಡಿ ಸಂದೇಶ್ ಸಾಲ್ಯಾನ್