ಪಡುಬಿದ್ರಿ:ಪಡುಬಿದ್ರಿ ಪಟ್ಟಣವಾಗಿ ಬೆಳೆಯುತ್ತಿರುವ ಕಾಪು ತಾಲೂಕಿನ ಎರಡನೇ ಬಲು ದೊಡ್ಡ ಪಂಚಾಯತ್ ಆಗಿದೆ. ತ್ಯಾಜ್ಯ ವಿಲೇವಾರಿಗೆ ಹರ ಸಾಹಸ ಪಡುತ್ತಿದ್ದ ಗ್ರಾ. ಪಂ. ತನ್ನ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಬೇರೆಲ್ಲೂ ಮಾಡಲಾಗದೆ ನಿರ್ಮಾಣ ಹಂತದ ತನ್ನ ನೂತನ ಗ್ರಾ. ಪಂ. ಕಟ್ಟಡದ ಎದುರೇ ಎಸ್‌ಎಲ್‌ಆರ್‌ಎಂ ಘಟಕವನ್ನು ಆರಂಭಿಸಿದೆ. ಅಮೂಲ್ಯ ಬೆಲೆಬಾಳುವ ಪಟ್ಟಣದ ಮಧ್ಯಭಾಗದ ಈ ಪ್ರದೇಶವನ್ನು ಕಸ ವಿಲೇವಾರಿಗಾಗಿ ಬಳಸಿಕೊಳ್ಳಲಾಗಿದೆ. ಆದರೆ ಇನ್ನೂ ಪಡುಬಿದ್ರಿಗೆ ಕಸವೇ ಶಾಪವಾಗಿ ಪರಿಣಮಿಸಿದೆ. ಕಸ ವಿಲೇವಾರಿ ಘಟಕಕ್ಕೂ ಅತೀತವಾಗಿ, ಶೀಘ್ರ ವಿಲೇ ಮಾಡಬೇಕಾದ ತ್ಯಾಜ್ಯದ ರಾಶಿಯು ಎಸ್‌ಆರ್‌ಎಂ ಘಟಕದ ಹೊರ ಬದಿಯಲ್ಲಿ ಶೇಖರಿಸಿ ಇಡಲಾಗಿದೆ. ಇದು ಮತ್ತೆ ಪರಿಸರದಲ್ಲಿ ದುರ್ನಾತವನ್ನೂ ಬೀರತೊಡಗಿದೆ.
ಪಡುಬಿದ್ರಿ ತನ್ನ ಹೃದಯಭಾಗದಲ್ಲೇ ತ್ಯಾಜ್ಯವನ್ನು ಹೊತ್ತು ನಿಂತಿರುವ ಬೃಹತ್ ಪಂಚಾಯತ್ ಆಗಿ ಬಿಂಬಿತವಾಗಿದೆ. ಇಂತಹಾ ತ್ಯಾಜ್ಯಗಳನ್ನು ಗುಂಡಿ ತೋಡಿ ಹೂತು ಬಿಡುವ ಪರಮ ಪಾಪಿ ಕಾರ್ಯಕ್ಕೂ ಪಂಚಾಯತ್ ಈಗಾಗಲೇ ಅನುವು ಮಾಡಿಕೊಟ್ಟಿದೆ. ಈಗಾಗಲೇ ಎರಡು ಮೂರು ಬಾರಿ ಎಸ್‌ಎಲ್‌ಆರ್‌ಎಂ ಘಟಕದ ಪಕ್ಕದ ಭೂಮಿಯಲ್ಲೇ ಕೊಳೆತು ನಾರುವ ತ್ಯಾಜ್ಯಗಳನ್ನು ಜೆಸಿಬಿ ಸಹಾಯದಿಂದ ಗುಂಡಿ ತೋಡಿ ಹೂಳಲಾಗಿದೆ. ಫಲವತ್ತಾದ ಭೂಮಿಯನ್ನು ಶಾಶ್ವತವಾಗಿ ಮರಣ ಕೂಪವನ್ನಾಗಿಸಲಾಗಿದೆ. ಹಸಿ ಕಸ, ಒಣ ಕಸಗಳ ಜತೆಗೇ ಮೀನು, ಕೋಳಿ ಸಾಂಬಾರ್‌ಗಳ ತಾಜ್ಯವನ್ನೂ ಎಸ್‌ಎಲ್‌ಆರ್‌ಎಂ ಘಟಕಕ್ಕೆ ನೀಡಲಾಗುತ್ತಿದ್ದು ಇವುಗಳ ವಿಲೇವಾರಿಗೆ ಮತ್ತೆ ಘಟಕದ ಗುತ್ತಿಗೆದಾರರು ಈಗಿನ ಪರಿಸ್ಥಿತಿಯಲ್ಲಿ ಕಾದಿರುವಂತಿದೆ.
ಪಡುಬಿದ್ರಿಯಲ್ಲಿ 3 – 4ಟನ್ ತ್ಯಾಜ್ಯವನ್ನು ದಿನಂಪ್ರತಿ ಸಂಗ್ರಹಿಸಲಾಗುತ್ತಿದೆ. ಹಸಿ ಕಸ 1ಟನ್ ಇರುತ್ತದೆ. 2.5ಟನ್ ತ್ಯಾಜ್ಯವನ್ನು ಘಟಕದಲ್ಲಿ ವಿಂಗಡಿಸಲಾಗುತ್ತಿದೆ. ಕೊನೆಯಲ್ಲಿ 20 – 30 ಕೆಜಿಗಳಷ್ಟು ವಿಲೇವಾರಿ ಮಾಡಲಾಗದ ಸುಮಾರು 1ಗೋಣಿಗಳಷ್ಟು ಕಸವಿರುತ್ತದೆ. ನಾವೂ ಇದನ್ನು ನಿಯಮಿತವಾಗಿ ಹೂಳಬೇಕಾಗುತ್ತದೆ. ಇಲ್ಲಿ ನಾವು ಅದನ್ನೇ ಮಾಡುತ್ತಿದ್ದೇವೆ. ಮತ್ತೆ 3 – 4 ತಿಂಗಳುಗಳಲ್ಲಿ ಗೊಬ್ಬರವಾದ ಬಳಿಕ ತೆಗೆಯುವಂತಾದ್ದು ಪರಿಪೂರ್ಣ ಕ್ರಮವಾಗಿದೆ. ಹಾಗಾಗಿ ಕೊನೆ ಕ್ಷಣದ ಕಸ ಮತ್ತು ಒದ್ದೆ ಕಸಗಳನ್ನು ಇಲ್ಲವಾಗಿಸಲು ಸುಮಾರು 40ಲಕ್ಷ ರೂ. ಗಳ ಹೂಡಿಕೆಯೊಂದಿಗೆ ಇನ್ಸಿನ್‌ರೇಟರ್ ಹಾಗೂ ಇನ್ನೊಂದು ಮೆಷಿನ್‌ಗಳನ್ನು ಸ್ಥಾಪಿಸಬೇಕಿದೆ. ಪಂಚಾಯತ್ ನಿರ್ಮಾಣ ಹಂತದ ಕಟ್ಟಡದ ಎದುರು ಪ್ಲಾಸ್ಟಿಕ್ ಕಸಗಳನ್ನು ತೂಕ ಮಾಡಿ ಇಟ್ಟಿರುವುದಾಗಿದೆ. ಅದು ಒಂದೆರಡು ದಿನಗಳಲ್ಲಿ ಇಲ್ಲವಾಗುತ್ತದೆ .
– ರಮೀಝ್ ಹುಸೈನ್, ಎಸ್‌ಎಲ್ ಆರ್‌ಎಂ ಘಟಕದ ಗುತ್ತಿಗೆದಾರ
“ಉದಯವಾಣಿ’ ಮಾತನಾಡಿಸಿದಾಗ ನಮಗೆ ಜಾಗದ ಕೊರತೆ ಇದೆ. ಈ ಘಟಕಕ್ಕೆ ಈಗಾಗಲೇ 1, 29ಮನೆಗಳು) ಮತ್ತು 8ನೇ ವಾರ್ಡ್(ಪೇಟೆ, ಸಂತೆಕಟ್ಟೆ, ಅಂಗಡಿ, ಮನೆಗಳು)ನ ತ್ಯಾಜ್ಯಗಳನ್ನು ತರಲಾಗುತ್ತಿದೆ. ವಿಲೇವಾರಿ ಮಾಡಲಾಗದ ತ್ಯಾಜ್ಯಗಳನ್ನು ಗ್ರಾಮಸ್ಥರು ನೀಡುತ್ತಿರುವುದೂ ಪರಿಹರಿಸಲಾರದ ತ್ಯಾಜ್ಯ ಸಮಸ್ಯೆಗೆ ಮುಖ್ಯ ಕಾರಣವೆನಿಸಿದೆ. ಹಿಂದಿನ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಈ ಘಟಕವನ್ನು ಸ್ಥಾಪಿಸಲಾಗಿದ್ದು ಇಡಿಯ ಗ್ರಾಮದ ತ್ಯಾಜ್ಯ ವಿಲೇವಾರಿಗೆ ಮತ್ತಷ್ಟು ಎಸ್‌ಎಲ್‌ಆರ್‌ಎಂ ಘಟಕಗಳ ಅವಶ್ಯಕತೆ ಪಡುಬಿದ್ರಿಗಿದೆ. ನೂತನ ಜಿಲ್ಲಾಧಿಕಾರಿ ಅವರನ್ನು ಈ ಕೂಡಲೇ ಕ್ಷೇತ್ರ ಶಾಸಕರ ಮತ್ತು ಪಿಡಿಒ ಜತೆ ಹೋಗಿ ಕಾಣುತ್ತೇವೆ. ಸಮಸ್ಯೆಯ ಪರಿಹಾರಕ್ಕೆ ಚಿಂತಿಸಲಾಗುತ್ತದೆ .
– ದಮಯಂತಿ ವಿ. ಅಮೀನ್ , ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ