Advertisement

ಇ-ಪಾವತಿ ವ್ಯವಸ್ಥೆಗೆ ವ್ಯಾಪಕ ವಿರೋಧ

11:49 AM Jul 28, 2017 | Team Udayavani |

ಹುಬ್ಬಳ್ಳಿ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜಾರಿಗೊಳಿಸಲಾದ ಇ-ಪಾವತಿ ವ್ಯವಸ್ಥೆ ವಿರೋಧಿಸಿ ಗುರುವಾರ ನಗರದ ಎಪಿಎಂಸಿ ಯಾರ್ಡ್‌ನ ಶ್ರೀ ಜಗಜ್ಯೋತಿ ಬಸವೇಶ್ವರ ಮಾರುಕಟ್ಟೆಯ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್‌ ಮಾಡಿ, ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. 

Advertisement

ಮಾಜಿ ಶಾಸಕ, ಬ್ಯಾಡಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ನೇತೃತ್ವದಲ್ಲಿ ವ್ಯಾಪಾರಸ್ಥರ ಸಂಘದ ಕಚೇರಿಯಿಂದ ಎಪಿಎಂಸಿ ಆಡಳಿತ ಮಂಡಳಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವ್ಯಾಪಾರಸ್ಥರು, ರಾಜ್ಯ ಸರಕಾರವು ಇ-ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಹುಬ್ಬಳ್ಳಿ ಹಾಗೂ ಗದಗ ಜಿಲ್ಲೆಯ ಐದು ಎಪಿಎಂಸಿಯಲ್ಲಿ ಮಾತ್ರ ಜಾರಿಗೊಳಿಸಿರುವುದು ಖಂಡನೀಯ.

ಇದರಿಂದ ದಲ್ಲಾಳರು, ಖರೀದಿದಾರರಿಗೆ, ಹಮಾಲರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಮಾರುಕಟ್ಟೆಯಲ್ಲಿನ ಎಲ್ಲರ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ಕುರಿತ ಸಾಧಕ-ಬಾಧಕಗಳ ಬಗ್ಗೆ ವಿಚಾರ ವಿನಿಮಯ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಈ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. 

ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ, ಸದಸ್ಯ ಜಗದೀಶಗೌಡ ಪಾಟೀಲ ಮಾತನಾಡಿ, ಸರಕಾರ ಇ-ಪಾವತಿ ಜಾರಿಗೊಳಿಸುವ ಮುನ್ನ ವ್ಯಾಪಾರಸ್ಥರು, ರೈತರೊಂದಿಗೆ ಚರ್ಚಿಸದೆ ಹಾಗೂ ಇದರ ಸಾಧಕ-ಬಾಧಕ ಕುರಿತು ವಿಚಾರಿಸದೆ ಒಮ್ಮೆಲೇ ಜಾರಿಗೊಳಿಸಿದೆ.

ಇ-ಟೆಂಡರ್‌ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಸಚಿವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಈಗ ಸರಕಾರ ಜಾರಿಗೊಳಿಸಿರುವ ಇ-ಪಾವತಿ ವ್ಯವಸ್ಥೆ ರದ್ದುಪಡಿಸಬೇಕು. ಇದು ಈಡೇರುವವರೆಗೂ ಸಂಘದಿಂದ ಅನಿರ್ದಿಷ್ಟಾವಧಿ ವರೆಗೆ ಹೋರಾಟ ನಡೆಸಲಾಗುವುದು.

Advertisement

ಇದಕ್ಕೂ ಸರಕಾರ ಕಿವಿಗೊಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು. ನಂತರ ಎಪಿಎಂಸಿ ಅಧ್ಯಕ್ಷ ಮತ್ತು ಪ್ರಭಾರಿ ಕಾರ್ಯದರ್ಶಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಈಶ್ವರ ಕಿತ್ತೂರ, ಸರಕಾರಿ ಆದೇಶವನ್ನು ಆಡಳಿತ ಮಂಡಳಿ ಪಾಲನೆ ಮಾಡಬೇಕಾಗುತ್ತದೆ.

ಎಲ್ಲರೂ ಕಾನೂನಿಗೆ ಪೂರಕವಾಗಿ ನಡೆದುಕೊಳ್ಳಬೇಕು. ರೈತರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸೋಣ. ಸಾಧಕ-ಬಾಧಕಗಳಿದ್ದರೆ ಸಮಕ್ಷಮ ಎಲ್ಲರೂ ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದರು. ಪ್ರಭಾರಿ ಕಾರ್ಯದರ್ಶಿ ಕೆ.ಎಚ್‌. ಗುರುಪ್ರಸಾದ ಮಾತನಾಡಿ, ಸರಕಾರ ಇ-ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಹುಬ್ಬಳ್ಳಿ ಮತ್ತು ಗದಗ ಜಿಲ್ಲೆಯ ಐದು ತಾಲೂಕುಗಳಲ್ಲಿ ಜಾರಿಗೊಳಿಸಿದೆ. ಹೊಸ ಯೋಜನೆ ಜಾರಿಯಾದಾಗ ಓರೆ-ಕೋರೆಗಳು ಬರುವುದು ಸಹಜ.

ಆ ಕುರಿತು ಚರ್ಚಿಸಿ ಸಮಸ್ಯೆಗಳ ಕುರಿತು ಸಂಬಂಧಪಟ್ಟವರಿಗೆ ಹಾಗೂ ಸರಕಾರಕ್ಕೆ ತಿಳಿಸಲಾಗುವುದು ಎಂದರು. ಪ್ರತಿಭಟನೆಗೆ ಕಾಯಿಪಲ್ಲೆ, ಕಿರಾಣಿ ಸೇರಿದಂತೆ ಅಕ್ಕಿಹೊಂಡದ ಎಲ್ಲ ವ್ಯಾಪಾರಸ್ಥರು ಬೆಂಬಲ ನೀಡಿ ಅಂಗಡಿಗಳನ್ನು ಬಂದ್‌ ಮಾಡಿ ಪಾಲ್ಗೊಂಡಿದ್ದರು. ಅಲ್ಲದೆ ಎಪಿಎಂಸಿಯ ವ್ಯಾಪಾರಸ್ಥರು ಇ-ಪಾವತಿ ಸಮಸ್ಯೆ ಬಗೆಹರಿಯುವವರೆಗೂ ಇಂದಿನಿಂದ ಮಾರುಕಟ್ಟೆಯ ಎಲ್ಲ ವ್ಯಾಪಾರ-ವಹಿವಾಟು ಅನಿರ್ದಿಷ್ಟ ಅವಧಿವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next