Advertisement
ಬೈಪರ್‌ಜಾಯ್ ಮಂಗಳವಾರ “ಅತ್ಯಂತ ತೀವ್ರತೆ”ಯಿಂದ “ಅತಿ ತೀವ್ರತೆ”ಯ ಚಂಡಮಾರುತವಾಗಿ ಮಾರ್ಪಾಡಾಗಿದೆ. ಜೂ.15ರ ಸಂಜೆ ಗಂಟೆಗೆ 125-150 ಕಿ.ಮೀ. ವೇಗದೊಂದಿಗೆ ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಮತ್ತು ಕಛ್ ಹಾಗೂ ಪಾಕಿಸ್ತಾನದ ಕರಾಚಿ ಕರಾವಳಿಯನ್ನು ಹಾದು ಹೋಗಲಿದೆ. ಗುಜರಾತ್‌ನ ಜಖೌ ಬಂದರಿನ ಸಮೀಪವೇ ಇದು ಅಪ್ಪಳಿಸಲಿದೆ. ಕಳವಳಕಾರಿ ಸಂಗತಿಯೆಂದರೆ, ಈ ಚಂಡಮಾರುತವು ಭಾರೀ ಪ್ರಮಾಣದಲ್ಲಿ ಹಾನಿ ಉಂಟುಮಾಡಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
Related Articles
Advertisement
ಕರಾವಳಿ ಪ್ರದೇಶಗಳ 10 ಕಿ.ಮೀ. ವ್ಯಾಪ್ತಿಯಲ್ಲಿನ ಜನರನ್ನು ಸ್ಥಳಾಂತರಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಅದರಂತೆ, ಈಗಾಗಲೇ ಒಟ್ಟು 21 ಸಾವಿರ ಮಂದಿಯನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯಾದ್ಯಂತ ಬಿರುಗಾಳಿಯಿಂದ ಕೂಡಿದ ಮಳೆಯಾಗುತ್ತಿದ್ದು, ಸೋಮವಾರ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಕರಾವಳಿ ರಕ್ಷಕ ಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ ಮತ್ತು ಶೂರ್ ನೌಕೆಯ ಮೂಲಕ ಸೋಮವಾರ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ “ಕೀ ಸಿಂಗಾಪುರ’ ಎಂಬ ತೈಲ ಬಾವಿಯೊಳಗೆ ಕೆಲಸ ಮಾಡುತ್ತಿದ್ದ 50 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಚಂಡಮಾರುತದಿಂದ ಯಾವುದೇ ಪ್ರಾಣಹಾನಿ ಆಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಜಖೌ ಬಂದರು ಸ್ತಬ್ಧ
ಪ್ರತಿದಿನವೂ ಜನಸಂದಣಿಯಿಂದ ತುಂಬಿ ತುಳುಕುತ್ತಿದ್ದ ಗುಜರಾತ್‌ನ ಜಖೌ ಬಂದರು ಮಂಗಳವಾರ ಬಿಕೋ ಎನ್ನುತ್ತಿತ್ತು. ಪ್ರಬಲ ಚಂಡಮಾರುತವು ಈ ಬಂದರಿನ ಸಮೀಪವೇ ಅಪ್ಪಳಿಸಲಿರುವ ಕಾರಣ, ಇಲ್ಲಿರುವ ಬಹುತೇಕ ಮಂದಿಯನ್ನು ಸೋಮವಾರವೇ ಸ್ಥಳಾಂತರಿಸಲಾಗಿದೆ. ಕರ್ತವ್ಯದಲ್ಲಿರುವ ಬೆರಳೆಣಿಕೆಯ ಸಿಬ್ಬಂದಿ ಹೊರತುಪಡಿಸಿ ಎಲ್ಲರೂ ಇಲ್ಲಿಂದ ನಿರ್ಗಮಿಸಿದ್ದಾರೆ. ಹೀಗಾಗಿ, ಅಬ್ಬರಿಸುತ್ತಿರುವ ಕಡಲು, ಭೋರ್ಗರೆಯುತ್ತಿರುವ ಮಳೆಯ ಸದ್ದು ಬಿಟ್ಟರೆ, ಬಂದರಿನಲ್ಲಿ ಎಂದಿನ ಗೌಜುಗದ್ದಲ ಇಲ್ಲ. ನೂರಾರು ಮೀನುಗಾರಿಕಾ ದೋಣಿಗಳನ್ನು ದಡಕ್ಕೆ ತಂದು ಸಾಲಾಗಿ ನಿಲ್ಲಿಸಲಾಗಿದೆ. ಕರಾವಳಿ ರಕ್ಷಕ ಪಡೆ ಮತ್ತು ಬಿಎಸ್‌ಎಫ್ ಸಿಬ್ಬಂದಿ ಹೊರತುಪಡಿಸಿ ಎಲ್ಲರಿಗೂ ಬಂದರಿನೊಳಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.
25 ವರ್ಷಗಳಲ್ಲಿ ಮೊದಲು
ಕುತೂಹಲದ ವಿಚಾರವೆಂದರೆ 25 ವರ್ಷಗಳಲ್ಲಿ ಮೊದಲ ಬಾರಿಗೆ ಜೂನ್‌ನಲ್ಲಿ ಗುಜರಾತ್ ಅನ್ನು ಹಾದು ಹೋಗಲಿರುವ ಮೊದಲ ಚಂಡಮಾರುತ ಬೈಪರ್‌ಜಾಯ್. ಅದು ಪ್ರತಿ ಗಂಟೆಗೆ 48ರಿಂದ 63 ಕಿಮೀ ವೇಗದಲ್ಲಿ ಗಾಳಿಯನ್ನೂ ಹೊಂದಿರಲಿದೆ. 1891ರ ಬಳಿಕ ಅತ್ಯಂತ ತೀವ್ರ ಗತಿಯ ಚಂಡಮಾರುತ ಜೂನ್‌ನಲ್ಲಿ ಗುಜರಾತ್ ಕರಾವಳಿಯನ್ನು ಅಪ್ಪಳಿಸಿದ್ದವು. 1920, 1961, 1964, 1996 ಮತ್ತು 1998ರಲ್ಲಿ ಇಂಥ ಘಟನೆ ನಡೆದಿದ್ದವು. ಅರಬ್ಬೀ ಸಮುದ್ರದಲ್ಲಿ 1965ರ ಬಳಿಕ ಎದ್ದ ಅತ್ಯಂತ ಗಂಭೀರ ಪರಿಣಾಮ ಉಂಟುಮಾಡುವ ಚಂಡಮಾರುತ ಬೈಪರ್‌ಜಾಯ್ ಆಗಿದೆ ಎಂದು ಐಎಂಡಿ ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ.
ರೈಲುಗಳ ಸಂಚಾರ ವ್ಯತ್ಯಯ
ಪ್ರಬಲ ಚಂಡಮಾರುತವು ಗುಜರಾತ್ ಕರಾವಳಿಯತ್ತ ಆಗಮಿಸುತ್ತಿರುವಂತೆಯೇ ಪಶ್ಚಿಮ ರೈಲ್ವೆಯು ಗುಜರಾತ್‌ನ ಕರಾವಳಿ ಪ್ರದೇಶಗಳಿಗೆ ಸಂಚರಿಸುವ 50ಕ್ಕೂ ಅಧಿಕ ರೈಲುಗಳನ್ನು ಅಲ್ಪಾವಧಿಗೆ ಸ್ಥಗಿತಗೊಳಿಸಿದೆ. ಮುಂದಿನ 3 ದಿನಗಳಲ್ಲಿ ಮತ್ತಷ್ಟು ರೈಲುಗಳ ಸಂಚಾರವನ್ನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ ಎಂದೂ ತಿಳಿಸಿದೆ. ಇದಲ್ಲದೇ, ವಿಪತ್ತು ನಿರ್ವಹಣಾ ಕೊಠಡಿಗಳು, ಸಹಾಯವಾಣಿ, ಪರಿಹಾರ ಮತ್ತು ರಕ್ಷಣಾ ರೈಲುಗಳ ಸನ್ನದ್ಧತೆ ಸೇರಿದಂತೆ ಇತರೆ ಸಿದ್ಧತಾ ಕಾರ್ಯಗಳನ್ನೂ ಪಶ್ಚಿಮ ರೈಲ್ವೆ ಕೈಗೊಂಡಿದೆ.
ಪಾಕ್‌ನಲ್ಲೂ ಸಿದ್ಧತೆ
ಬೈಪರ್‌ಜಾಯ್ ಚಂಡಮಾರುತವು ಪಾಕಿಸ್ತಾನದ ವಾಣಿಜ್ಯ ಹಬ್ ಕರಾಚಿ ಕರಾವಳಿಯನ್ನು ಹಾದುಹೋಗಲಿರುವ ಕಾರಣ ಪಾಕ್ ಸರ್ಕಾರ ಕೂಡ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ. ತೀರದ ಸಮೀಪದಲ್ಲಿ ನೆಲೆಸಿರುವ ಸುಮಾರು 80 ಸಾವಿರ ಮಂದಿಯನ್ನು ಸ್ಥಳಾಂತರಿಸಲು ಸೇನೆ ಮತ್ತು ನೌಕಾಪಡೆಯ ನೆರವು ಪಡೆಯಲಾಗಿದೆ. ದಕ್ಷಿಣ ಸಿಂಧ್ ಪ್ರಾಂತ್ಯದಲ್ಲೇ ಅತಿ ಹೆಚ್ಚು ಮಂದಿಯ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.