ಬೆಂಗಳೂರು: 2019-20ನೇ ಸಾಲಿನ ವಾರ್ಷಿಕ “ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ-2019′ ಇದಕ್ಕೆ ಪೂರಕವಾಗಿ ಹಮ್ಮಿಕೊಳ್ಳಲಾಗಿದ್ದ “ಮತದಾರ ಪರಿಶೀಲನೆ ಕಾರ್ಯಕ್ರಮ’ (ಇವಿಪಿ) ಇದರ ಅವಧಿಯನ್ನು ನ.18ರವರೆಗೆ ಕೇಂದ್ರ ಚುನಾವಣಾ ಆಯೋಗ ವಿಸ್ತರಿಸಿದೆ.
ಪ್ರತಿಯೊಬ್ಬ ಮತದಾರನು ಮತದಾರರ ಪಟ್ಟಿಯಲ್ಲಿ ನಮೂದು ಆಗಿರುವ ತನ್ನ ಹಾಗೂ ಕುಟುಂಬದ ಸದಸ್ಯರ ವೈಯಕ್ತಿಕ ಮಾಹಿತಿಗಳನ್ನು ಪರಿಶೀಲಿಸಿ, ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಸೆ.1ರಿಂದ ಅ.15ರವರೆಗೆ ದೇಶಾದ್ಯಂತ “ಮತದಾರ ಪರಿಶೀಲನೆ ಕಾರ್ಯಕ್ರಮ’ (ಇವಿಪಿ) ಹಮ್ಮಿಕೊಂಡಿತ್ತು.
ಅದರಂತೆ, ರಾಜ್ಯದಲ್ಲೂ ಇವಿಪಿ ಗೆ ಚಾಲನೆ ನೀಡಲಾಗಿತ್ತು. ಆದರೆ, ಇವಿಪಿ ಪ್ರಗತಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಇನ್ನೂ ಮತದಾರರು ತಮ್ಮ ವೈಯಕ್ತಿಕ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕಿದೆ. ಅದಕ್ಕಾಗಿ, ಮತದಾರರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಇವಿಪಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ನ.18ರವರೆಗೆ ಇವಿಪಿ ಗೆ ಅವಕಾಶ ಮಾಡಿಕೊಡಲಾಗಿದೆ. ನ.25ಕ್ಕೆ ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದೆ. ನಂತರ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನ.25ರಿಂದ ಡಿ.24ರವರೆಗೆ ಅವಕಾಶ ಇರಲಿದೆ. ಜ.10ರೊಳಗೆ ಎಲ್ಲ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ಜ.27ಕ್ಕೆ ಪೂರಕ ಸಿದ್ಧತೆ ಮಾಡಿಕೊಂಡು ಜ.20ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಆಯೋಗದ ಮನವಿ: ಹೆಚ್ಚಿನ ಮತದಾರರಿಗೆ ಅನುಕೂಲವಾಗಲಿ, ಯಾವೊಬ್ಬ ಮತದಾರರೂ ಪಟ್ಟಿಯಿಂದ ಹೊರಗಡೆ ಉಳಿಯದಿರಲಿ ಎಂಬ ಉದ್ದೇಶದಿಂದ ಇವಿಪಿ ಅವಧಿ ವಿಸ್ತರಿಸಲಾಗಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಇದರ ಉಪಯೋಗ ಬಳಸಿಕೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮನವಿ ಮಾಡಿದ್ದಾರೆ.