ಮುಂಬಯಿ: ಪ್ರಧಾನಿ ಮೋದಿ ಅವರು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆಎ) ವಿಸ್ತರಣೆಯ ಘೋಷಣೆಯನ್ನು ಮುಂಬರುವ ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಬಾಳಾಸಾಹೇಬ್ ಥೋರಟ್ ಅವರು ಹೇಳಿದ್ದಾರೆ.
ಲಡಾಕ್‌ನಲ್ಲಿ ಚೀನದೊಂದಿಗಿನ ಘರ್ಷಣೆಯ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ಏನೂ ಹೇಳಿಲ್ಲ ಎಂದು ರಾಜ್ಯ ಕಂದಾಯ ಸಚಿವ ಥೋರಟ್ ಅವರು ದೂರಿದ್ದಾರೆ. ಪ್ರಧಾನಿಯವರ ಭಾಷಣ ನಿರಾಶಾದಾಯಕವಾಗಿತ್ತು. ಅವರು ಚೀನಕ್ಕೆ ಯಾವುದೇ ಕಠಿನ ಸಂದೇಶವನ್ನು ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಕೊರೊನಾ ಹಿನ್ನೆಲೆ ಬಡವರಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಒದಗಿಸಲು ಉಚಿತ ಆಹಾರ ಧಾನ್ಯಗಳ ಯೋಜನೆಯನ್ನು ಪ್ರಾರಂಭಿಸಲಾಯಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಯೋಜನೆಯನ್ನು ಸೆಪ್ಟಂಬರ್ ವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿದ್ದರು. ಅಸ್ತಿತ್ವದಲ್ಲಿರುವ ಯೋಜನೆಯ ವಿಸ್ತರಣೆಯು ಆಡಳಿತಾತ್ಮಕ ನಿರ್ಧಾರವಾಗಿದ್ದು, ಇದನ್ನು ರಾಷ್ಟ್ರೀಯ ಭಾಷಣದ ಮೂಲಕ ಉಲ್ಲೇಖೀಸುವ ಅಗತ್ಯವಿರಲಿಲ್ಲ. ಆದರೆ ಪ್ರಧಾನಿ ಅವರು ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಯ ವಿಸ್ತರಣೆಯನ್ನು ಘೋಷಿಸಿದ್ದಾರೆ. ಬಡವರಿಗೆ ಆಹಾರದ ಹೊರತಾಗಿ ಇತರ ಅಗತ್ಯಗಳಿವೆ. 5 ಕೆಜಿ ಅಕ್ಕಿ, ಗೋಧಿ ಮತ್ತು ಕಡಲೆ ಬೇಳೆ ಅಲ್ಪ ಸಹಾಯವಾಗಿದ್ದು, ಇದು ಒಂದು ತಿಂಗಳು ಕೂಡ ಉಳಿಯುವುದಿಲ್ಲ ಎಂದು ಥೋರಟ್ ನುಡಿದಿದ್ದಾರೆ.
ಬಡವರ ಬ್ಯಾಂಕ್ ಖಾತೆಗಳಲ್ಲಿ ಪ್ರತಿ ತಿಂಗಳು 7,500 ರೂ. ನಗದು ಜಮೆ ಮಾಡಬೇಕು ಎಂದು ಥೋರಟ್ ಅವರು ಒತ್ತಾಯಿಸಿದ್ದಾರೆ. ಪ್ರಧಾನಿ ಯವರು ತಮ್ಮ ಭಾಷಣದ ಮೂಲಕ ಸೋಂಕು ನವೆಂಬರ್ ವರೆಗೆ ಇರುತ್ತದೆ ಎಂಬ ಸಂಕೇತವನ್ನು ನೀಡಿದ್ದಾರೆ ಎಂದು ಥೋರಟ್ ದೂರಿದ್ದಾರೆ.