Advertisement

ವಾಹನ ವಿಮಾ ಕಂತು ಪಾವತಿ ಅವಧಿ ವಿಸ್ತರಿಸಿ

05:47 PM Sep 07, 2020 | Suhan S |

ಸಾಗರ: ಕೋವಿಡ್ ಹಿನ್ನೆಲೆಯಲ್ಲಿ ಸಾರಿಗೆ ಉದ್ಯಮ ಹೆಚ್ಚಿನ ಸಂಕಷ್ಟ ಅನುಭವಿಸುವಂತಾಗಿದೆ. ಅದನ್ನು ಸರಿದೂಗಿಸುವ ತಾಕತ್ತು ಇನ್ನೂ ಬಂದಿಲ್ಲ. ಪ್ರತಿ ವಾಹನಕ್ಕೆ 40ರಿಂದ 45 ಸಾವಿರ ರೂ.ಗಳ ವಿಮೆ ಕಟ್ಟಬೇಕಾಗುತ್ತಿದೆ. ಕೊನೆಪಕ್ಷ ಈ ವಿಮೆಯ ಅವಧಿಯನ್ನು ನಾಲ್ಕಾರು ತಿಂಗಳ ಕಾಲ ಸ್ಥಗಿತ ಘೋಷಿಸಿ ಮುಂದಿನ ಅವಧಿಗೆ ಹೊಂದಾಣಿಕೆ ಮಾಡಿಕೊಡಬೇಕು ಎಂದು ಲಘು ಸಾರಿಗೆ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಐ.ವಿ. ಹೆಗಡೆ ಆಗ್ರಹಿಸಿದರು.

Advertisement

ಇಲ್ಲಿನ ಉಪ ವಿಭಾಗಾಧಿ ಕಾರಿಗಳ ಕಚೇರಿ ಎದುರುತಮ್ಮ ಸಂಘದ ವತಿಯಿಂದ ಲಘು ವಾಹನಗಳಿಗೆ ತೆರಿಗೆ ವಿನಾಯಿತಿ, ಬಡ್ಡಿ ಹಾಗೂ ಇಎಂಐ ಕಂತು ಪಾವತಿ ಅವಧಿ ವಿಸ್ತರಿಸುವಂತೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಾಲಸೋಲ ಮಾಡಿ ಲಘುವಾಹನ ಖರೀದಿ ಮಾಡಿದ ಮಾಲೀಕರು ಈಗ ಸಾಲ ಕಟ್ಟಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಟ್ಟಿದ ತೆರಿಗೆ, ವಿಮೆ ಎಲ್ಲವೂ ಕರಗಿ ಹೋಗುತ್ತಿದೆ. ವಾಹನ ದಿನದಲ್ಲಿ ಒಂದಿಂಚು ಚಲಿಸದಿದ್ದರೂ 500 ರೂ. ವೆಚ್ಚವಾಗುತ್ತದೆ. ದುಡಿಮೆ ಇಲ್ಲದೆ ಇರುವುದರಿಂದ ಬ್ಯಾಂಕ್‌ನಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ಜಾಸ್ತಿಯಾಗುತ್ತಿದೆ. ಚಾಲಕರಿಗೆ ಸಂಬಳ ಕೊಡಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ರಾಜ್ಯದಾದ್ಯಂತ ಲಾರಿ ಮಾಲೀಕರು ಮುಷ್ಕರ ರೂಪದಲ್ಲಿ ಪ್ರತಿಭಟನೆ ಮಾಡಿ ಹಕ್ಕೊತ್ತಾಯ ಮಾಡಲಾಗಿದೆ. ಆದರೆ ಸರ್ಕಾರ ಸಮಸ್ಯೆಗೆ ಸ್ಪಂದಿಸದೆ ಇರುವುದು ದುರದೃಷ್ಟಕರ. ಬಾಡಿಗೆ ಇಲ್ಲದೆ ಇರುವುದರಿಂದ ವಿಮೆ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕನಿಷ್ಟ 6 ತಿಂಗಳು ತೆರಿಗೆ ಪಾವತಿಗೆ ವಿನಾಯಿತಿ ನೀಡಬೇಕು. ಬಡ್ಡಿ ಮತ್ತು ಇಎಂಐ ಕಂತು ಪಾವತಿ ಅವಧಿಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

ಪ್ರಶಾಂತ್‌, ಶಿವಣ್ಣ, ಗೋಪಾಲ್‌, ಅಶೋಕ್‌, ಮರಿಸ್ವಾಮಿ, ಶಂಕರಪ್ಪ, ಸುರೇಶ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next