Advertisement

ಉಕ್ತಲೇಖನ ಮತ್ತು ಶೂನ್ಯಸಂಪಾದನೆ 

03:45 AM May 28, 2017 | Harsha Rao |

ಲಾರ್ಡ್‌ ಮೆಕಾಲೆಯ ಮೇಲೆ ಒಂದು ಆಪಾದನೆಯಿದೆ: ಅವನು ಭಾರತದಲ್ಲಿ ಪ್ರಚುರ ಪಡಿಸಿದ್ದು ಕಾರಕೂನರನ್ನು ತಯಾರಿಸಲು ಅನುಕೂಲವಾಗುವ ಶಿಕ್ಷಣಪದ್ಧತಿಯನ್ನು ಎಂಬುದಾಗಿ; ಯಾಕೆಂದರೆ ಇಂಗ್ಲಿಷರಿಗೆ ಭಾರತವನ್ನು ಆಳುವುದಕ್ಕೆ ಇಲ್ಲೇ ತಯಾರಾದ ಲಕ್ಷಗಟ್ಟಳೆ ಅಗ್ಗದ ಕಾರಕೂನರು ಬೇಕಾಗಿದ್ದರು. ಇರಬಹುದು. ಆದರೆ, ಭಾರತೀಯ ವಿದ್ಯಾರ್ಥಿಗಳನ್ನು ನಕಲು ತೆಗೆಯುವ ಗುಮಾಸ್ತರ ತರ ಮಾಡಿದ್ದರಲ್ಲಿ ನಮ್ಮದೇ ಅಧ್ಯಾಪಕರ ಪಾತ್ರ ಎಷ್ಟಿತ್ತು ಎಂಬುದರ ಬಗ್ಗೆ ಕೂಡ ನಾವು ಕೆಲವೊಮ್ಮೆಯಾದರೂ ಯೋಚಿಸಬೇಕಾಗುತ್ತದೆ. ಹೌದು, ಇದರಲ್ಲಿ ನಮ್ಮವರ ಪಾತ್ರ ಬಹಳಷ್ಟು ಇತ್ತು. ಶಿಕ್ಷಣ ವಿಧಾನಗಳ ಕುರಿತು ಹತ್ತೂಂಬತ್ತನೆಯ ಶತಮಾನದ ಬ್ರಿಟಿಷ್‌ ಚಿಂತಕ ಜೆ. ಎಸ್‌. ಮಿಲ್‌ (A System of Logic, On Liberty ಮುಂತಾದ ಕೃತಿಗಳ ರಚಯಿತ) ಒಂದೆಡೆ ಹೇಳುತ್ತಾನೆ: ಜ್ಞಾನ ಸಂಪಾದನೆ ಮತ್ತು ಜ್ಞಾನೋತ್ಪಾದನೆ ಎಂಬ ಎರಡು ವಿಧಾನಗಳಿವೆ, ಶಿಕ್ಷಣದ ಉದ್ದೇಶ ಜ್ಞಾನೋತ್ಪಾದನೆ ಆಗಿರಬೇಕೇ ಹೊರತು ಜ್ಞಾನ ಸಂಪಾದನೆ ಮಾತ್ರವೇ ಆಗಿರಬಾರದು ಎಂಬುದಾಗಿ. ಜ್ಞಾನೋತ್ಪಾದನೆ ತಾನಾಗಿಯೇ ಜ್ಞಾನ ಸಂಪಾದನೆಯನ್ನು ಒಳಗೊಳ್ಳುತ್ತದೆ, ಅದರೆ ಜ್ಞಾನ ಸಂಪಾದನೆ ತಾನಾಗಿ ಜ್ಞಾನೋತ್ಪಾದನೆಯನ್ನು ಒಳಗೊಳ್ಳುವುದಿಲ್ಲ. ಇದನ್ನು ನೋಡಿದರೆ, ಭಾರತದಲ್ಲಿ ನಾವು ಇರಿಸಿಕೊಂಡ ಆದರ್ಶ ಮತ್ತು ಅನುಸರಿಸಿಕೊಂಡು ಬಂದ ವಿಧಾನ ಜ್ಞಾನ ಸಂಪಾದನೆ (ಜ್ಞಾನಾರ್ಜನೆ) ಮಾತ್ರ: ತಿಳಿದವರಿಂದ ಅರ್ಥಾತ್‌ ಜ್ಞಾನ ಉಳ್ಳವರಿಂದ (ಗುರುಗಳಿಂದ ಮತ್ತು ಪುಸ್ತಕಗಳಿಂದ) ಜ್ಞಾನ ಇಲ್ಲದವರು (ವಿದ್ಯಾರ್ಥಿಗಳು) ಜ್ಞಾನ ಪಡೆದುಕೊಳ್ಳುವುದು ನಮ್ಮ ಪ್ರಕಾರ ಶಿಕ್ಷಣವೆನಿಸುತ್ತದೆ. ಇದು ಓದುವುದನ್ನು, ಅರ್ಥ ಮಾಡಿಕೊಳ್ಳುವುದನ್ನು ಮತ್ತು ಅದರ ಪುನರಾವರ್ತನೆಯನ್ನು ಪ್ರೋತ್ಸಾಹಿಸುತ್ತದೆ. ನಮಗೆ ಬೇಕಾದ ಜ್ಞಾನವೆಲ್ಲ ಹಿಂದಿನವರು ಸಂಪಾದಿಸಿ ಗ್ರಂಥಗಳಲ್ಲಿ ಇರಿಸಿ¨ªಾರೆ, ಅವುಗಳನ್ನು ಓದಿಕೊಂಡರೆ ಸಾಕು ಎಂಬೊಂದು ಮನೋಭಾವ ಇದರಲ್ಲಿದೆ. ಆದರೆ ನಿಜಕ್ಕೂ, ಜ್ಞಾನೋತ್ಪಾದನೆ ಪ್ರಶ್ನೆಗಳನ್ನು ಎತ್ತುವುದರಿಂದ ಮಾತ್ರವೇ ಸಾಧ್ಯ: ಪ್ರಶ್ನಿಸುವುದು, ಪರಿಶೀಲಿಸುವುದು, ಊಹಿಸುವುದು, ವಿಶ್ಲೇಷಿಸುವುದು, ಮೇರೆಗಳನ್ನು ಮೀರುವುದು ಜ್ಞಾನೋತ್ಪಾದನೆಯ ವಿಧಾನ. ನಮ್ಮ ಹಿಂದಣವರಾದರೂ ಜ್ಞಾನೋತ್ಪಾದನೆ ಮಾಡಿದುದು ಇಂಥ ಜಿಜ್ಞಾಸೆಯಿಂದ ಮಾತ್ರವೇ. ನನಗೆ ಮೀನು ಕೊಡಬೇಡಿ, ಮೀನು ಹಿಡಿಯುವುದನ್ನು ಕಲಿಸಿಕೊಡಿ ಎನ್ನುವ ಮಾತಿನ ಹಿಂದೆ ಇರುವ ಮರ್ಮ ಇದುವೇ. ಜಿಜ್ಞಾಸೆಯ ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಕಲಿಕೆಯ ಉದ್ದೇಶ. ನಮ್ಮ ಶಿಕ್ಷಣವಿಧಾನ ತೀರ ಇತ್ತೀಚಿನವರೆಗೂ ಜ್ಞಾನ ಸಂಪಾದನೆಯಲ್ಲಿ, ನಿಜ ಹೇಳಬೇಕೆಂದರೆ, ಅದಕ್ಕಿಂತಲೂ ಕೆಳ ಹಂತದ ಗಿಳಿಪಾಠದಲ್ಲಿ, ನಿರತವಾಗಿತ್ತೇ ವಿನಾ ಜ್ಞಾನೋತ್ಪಾದನೆಯ ಮಾರ್ಗವನ್ನು ತೋರಿಸಿಕೊಡುವುದರಲ್ಲಿ ಅಲ್ಲ.

Advertisement

ಸರಿಯಾದ ವಿದ್ಯಾಭ್ಯಾಸ ನೀಡಿದರೆ ಎಲ್ಲ ವಿದ್ಯಾರ್ಥಿಗಳೂ ದೊಡ್ಡ ವಿಜ್ಞಾನಿಗಳ್ಳೋ ಶಾಸ್ತ್ರಜ್ಞರೋ ಕಲಾವಿದರೋ ತತ್ವಜ್ಞಾನಿಗಳ್ಳೋ ಆಗುತ್ತಾರೆ ಎಂದು ಅಭಿಪ್ರಾಯವಲ್ಲ; ಕೆಲವರು ಆಗಬಹುದು, ಹಲವರು ಆಗದೇ ಇರಬಹುದು. ಇಲ್ಲಿ ಉದ್ದೇಶಿಸುವ ಜ್ಞಾನೋತ್ಪಾದನೆ ಎಂದರೆ ಕನಿಷ್ಠ ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಜ್ಞಾನವನ್ನು ವಿದ್ಯಾರ್ಥಿಗಳು ಸರಿಯಾಗಿ ಮನನ ಮಾಡಿ ತಮ್ಮದಾಗಿ ಮಾಡಿಕೊಳ್ಳುವುದು, ಉರು ಹೊಡೆದು ಒಪ್ಪಿಸುವುದಲ್ಲ. ಯಾಕೆ, ಏನು, ಹೇಗೆ ಎಂದು ಮುಂತಾಗಿ ಪರಾಮರ್ಶಿಸಿ ಅದನ್ನು ವಿದ್ಯಾರ್ಥಿಗಳು ತಮ್ಮದೇ ಅನುಭವವಾಗಿ ಮಾಡಿಕೊಳ್ಳುವುದಕ್ಕೆ ತರಬೇತಿ ಕೊಡುವುದು ನಿಜವಾದ ಶಿಕ್ಷಣ.  

ಇಂದು ನಾವು ಹೇಳುತ್ತೇವೆ; ಹಿಂದಿನ ಪಾಠಕ್ರಮ ಅಧ್ಯಾಪಕ ಕೇಂದ್ರಿತವಾಗಿತ್ತು, ಇಂದಿನದು ವಿದ್ಯಾರ್ಥಿ ಕೇಂದ್ರಿತ ಎಂಬುದಾಗಿ. ನನ್ನ ಕೇಳಿದರೆ ಹಿಂದಿನ ಕ್ರಮ ಅಧ್ಯಾಪಕ ಕೇಂದ್ರಿತ ಎನ್ನುವದಕ್ಕಿಂತಲೂ ಹೆಚ್ಚು ಪರೀûಾಕೇಂದ್ರಿತವಾಗಿತ್ತು ಎನ್ನುವುದೇ ಸರಿ. ಪರೀಕ್ಷೆ ಬರೆದು ಪಾಸಾಗುವುದೇ ಶಿಕ್ಷಣದ ಗುರಿಯಾಗಿತ್ತು, ಹಾಗೂ ಕ್ಲಾಸಿನಲ್ಲಿ ನಡೆಯುತ್ತಿದ್ದ ಪಾಠಕ್ರಮ ಇದನ್ನೇ ಧ್ಯೇಯವಾಗಿ ಇಟ್ಟುಕೊಂಡಿತ್ತು. ನಾನಿಲ್ಲಿ ಕೆಲವು ದಶಕಗಳ ಹಿಂದಣ ಪದ್ಧತಿಯ ಬಗ್ಗೆ ಹೇಳುತ್ತಿದ್ದೇನೆ. ಈ ಕ್ರಮದಲ್ಲಿ ಬಹುಮುಖ್ಯ ಭಾಗವಾಗಿದ್ದುದು ಅಧ್ಯಾಪಕರು ಕ್ಲಾಸಿನಲ್ಲಿ ನೀಡುತ್ತಿದ್ದ ಉಕ್ತಲೇಖನ, ಇಂಗ್ಲಿಷ್‌ನಲ್ಲಿ ಹೇಳುವುದಿದ್ದರೆ ನೋಟ್ಸ್‌ ಡಿಕ್ಟೇಶನ್‌. ಇದೊಂದು ತರದ ಸ್ಪೂನ್‌ಫೀಡಿಂಗ್‌ ಅರ್ಥಾತ್‌ ಬಾಯಿತುತ್ತು. ವಿದ್ಯಾರ್ಥಿಗಳನ್ನು ಕಾರಕೂನರನ್ನಾಗಿ ಮಾಡುತ್ತಿದ್ದುದು ಈ ಡಿಕ್ಟೇಶನ್ನೇ. ಅಧ್ಯಾಪಕರು ತಮ್ಮದೇ ಹಳೆಕಾಲದ ನೋಟ್‌ಬುಕ್ಕುಗಳಿಂದ ಗಟ್ಟಿಯಾಗಿ ಓದಿ ಹೇಳುತ್ತಿದ್ದ ನೋಟ್ಸುಗಳನ್ನು ವಿದ್ಯಾರ್ಥಿಗಳು ತಂತಮ್ಮ ನೋಟ್‌ ಬುಕ್ಕುಗಳಲ್ಲಿ ಬರೆದುಕೊಳ್ಳಬೇಕಿತ್ತು. ಕೆಲವು ಅಧ್ಯಾಪಕರು ಆಶುಭಾಷಣದಂತೆ ನೋಟ್ಸ್‌ ಹೇಳುತ್ತಿದ್ದರು ನಿಜ; ಅವರ ಕುರಿತು ವಿದ್ಯಾರ್ಥಿಗಳಿಗೆ ಹೆಚ್ಚಿನ ಗೌರವವಿತ್ತು ಎನಿಸುತ್ತದೆ! ಈ ಅಧ್ಯಾಪಕರು ಕೂಡ ತಮ್ಮ ಕಾಲದಲ್ಲಿ ಇದೇ ಪದ್ಧತಿಯಲ್ಲಿ ಕಲಿತವರಾಗಿದ್ದರು. ಹೀಗೆ ಈ ಕಾರಕೂನ ಪದ್ಧತಿ ಹಲವು ಕಾಲದಿಂದ ಸಕ್ಯುìಲೇಟ್‌ ಆಗುತ್ತಲೇ ಇತ್ತು.

ಈ ನೋಟ್ಸುಗಳಾದರೂ ಎಂಥವೆಂದರೆ ಪಬ್ಲಿಕ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಗಮನದಲ್ಲಿ ಇರಿಸಿಕೊಂಡಂಥವು. ಮೂರು ಗಂಟೆ ಹೊತ್ತು ಬರೆಯುವ ಪೇಪರ್‌ಗೆ ಎರಡು-ಮೂರು ತರದ ಪ್ರಶ್ನೆಗಳಿದ್ದವು: ಒಂದೆರಡು ದೊಡ್ಡ ಪ್ರಶ್ನೆಗಳು, ನಂತರ ಸಣ್ಣ ಪ್ರಶ್ನೆಗಳು. ಈ ದೊಡ್ಡ ಪ್ರಶ್ನೆಗಳು ಜನರಲ್‌ ಆಗಿದ್ದರೆ, ಸಣ್ಣ ಪ್ರಶ್ನೆಗಳು ನೇರವಾಗಿ ಪಠ್ಯಗಳನ್ನು ಉದ್ದೇಶಿಸಿ ಇರುತ್ತಿದ್ದವು. ಉದಾಹರಣೆಗೆ, ಹ್ಯಾಮ್ಲೆಟ್‌ನ ಪಾತ್ರವನ್ನು ಚರ್ಚಿಸಿ, ಅಥವಾ ಇಯಾಗೋನ ಪಾತ್ರ ಪರಿಚಯ ನೀಡಿ ಎನ್ನುವುದು ದೊಡ್ಡ ಪ್ರಶ್ನೆ; ಇನ್ನು ಆಯಾ ಪಠ್ಯಗಳಲ್ಲಿನ ಕೆಲವು ಸಾಲುಗಳ ಮೇಲೆ ಸಂದರ್ಭಸಹಿತ ಟಿಪ್ಟಣಿ ಬರೆಯಿರಿ ಎನ್ನುವುದು ಸಣ್ಣ ಪ್ರಶ್ನೆಗಳು. ಯಾರೋ ಪ್ರಸಿದ್ಧ ವಿಮರ್ಶಕರು ಹ್ಯಾಮ್ಲೆಟ್‌ ಅಥವಾ ಇಯಾಗೋ ಬಗ್ಗೆ ಹೇಳಿದ ಮಾತನ್ನು ಕೊಟ್ಟು ಅದನ್ನು ಸಮರ್ಥಿಸಿ ಎನ್ನುವುದೂ ದೊಡ್ಡ ಪ್ರಶ್ನೆಯ ಅಡಿಯಲ್ಲಿ ಬರಬಹುದಾಗಿತ್ತು. ಅಂತೂ ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸುವುದು ಶಿಕ್ಷಣದ ಉದ್ದೇಶವಾಗಿತ್ತು ಅನಿಸುತ್ತದೆ. ಅಧ್ಯಾಪಕರು ನೀಡುವ ಉಕ್ತಲೇಖನಗಳು ಇಂಥ ಪ್ರಶ್ನೆಗಳ ಮಾದರಿ ಉತ್ತರಗಳಾಗಿದ್ದವು. ಕಲಿಯುವುದೆಂದರೆ ವಿದ್ಯಾರ್ಥಿಗಳು ಇವನ್ನು ಕಂಠಪಾಠ ಮಾಡಿಕೊಳ್ಳುವುದು.

ಎÇÉಾ ಅಧ್ಯಾಪಕರೂ ಡಿಕ್ಟೇಟರುಗಳೇ ಆಗಿದ್ದ ಕಾಲ ಅದು; ಯಾವನೇ ಅಧ್ಯಾಪಕ ಇದಕ್ಕೆ ಒಪ್ಪದೆ ಇದ್ದರೆ ವಿದ್ಯಾರ್ಥಿಗಳು ಆತನ ಮೇಲೆ ಒತ್ತಡ ಹಾಕುತ್ತಿದ್ದರು. Be a Roman when in Rome!  

Advertisement

    ಪ್ರತಿಯೊಂದು ಪೇಪರಿನಲ್ಲಿಯೂ ನಿರೀಕ್ಷಿತ ಪ್ರಶ್ನೆಗಳು ಎಂಬ ಪರಿಕಲ್ಪನೆಯೊಂದು ಕೆಲಸ ಮಾಡುತ್ತಿತ್ತು: ಎಂದರೆ ಪರೀಕ್ಷೆಗೆ ಇಂತಿಂಥ ಪ್ರಶ್ನೆಗಳು ಬರುತ್ತವೆ ಎನ್ನುವ ನಿರೀಕ್ಷೆ. ಹ್ಯಾಮ್ಲೆಟ್‌ ನಾಟಕ ಪಠ್ಯವಾಗಿದ್ದರೆ ನಾಯಕನಾದ ಹ್ಯಾಮ್ಲೆಟ್‌ನ ಪಾತ್ರದ ವಿಚಾರವಾಗಿ ಪ್ರಶ್ನೆ ಬಂದೇ ಬರುತ್ತದೆ! ಪ್ರಶ್ನೆ ನೇರವಾಗಿ ಬರಲಿಲ್ಲ ಎಂದಾದರೆ ವಿದ್ಯಾರ್ಥಿಗಳ ದೂರು ಪ್ರಶ್ನೆ ಟ್ವಿಸ್ಟೆಡ್‌ ಆಗಿತ್ತು ಎಂಬುದಾಗಿ. ಆದರೆ ಪ್ರಶ್ನೆಯ ರೂಪ ಹೇಗೇ ಆಗಿದ್ದರೂ, ಬರೆಯುವ ಉತ್ತರ ಮಾತ್ರ ಒಂದೇ ಆಗಿತ್ತು! ಅಂಥ ಕಡೆ ಆ ಕ್ಷಣದಲ್ಲಿ ಯೋಚಿಸಿ ಪ್ರಶ್ನೆಗೆ ತಕ್ಕಂತೆ ಉತ್ತರಿಸುವುದು ಎನ್ನುವ ಪ್ರಮೇಯವೇ ಇರಲಿಲ್ಲ.

ಇನ್ನು ನಿರೀಕ್ಷಿತ ಪ್ರಶ್ನೆಗಳು, ನೇರವಾಗಿ ಆಗಲಿ, ಓರೆಯಾಗಿ ಆಗಲಿ, ಬಾರದೇ ಇದ್ದರೆ ವಿದ್ಯಾರ್ಥಿಗಳು ಹುಯ್ಯಲಿಡುತ್ತಿದ್ದರು ಹಾಗೂ ಉತ್ತರ ಪತ್ರಿಕೆಗಳನ್ನು ತಿದ್ದುವವರು (ಅದಕ್ಕೆ ಸಂಬಂಧಿಸಿದ ಸಮಿತಿ) ಗ್ರೇಸ್‌ ಮಾರ್ಕುಗಳನ್ನು ನೀಡಲೇಬೇಕಾಗುತ್ತಿತ್ತು; ಅದಲ್ಲದಿದ್ದರೆ ಕಳಂಕ ಬರುವುದು ಶಿಕ್ಷಕರಿಗೆ ಅವರ ಸಂಸ್ಥೆಗಳಿಗೇ ತಾನೆ? ಪಾಸು-ಫೇಲುಗಳ ಮಧ್ಯೆ ಒಂದು ತರದ ಪರಂಪರಾಗತ ಅನುಪಾತವನ್ನು ಕಾಪಾಡಿಕೊಳ್ಳುವುದು ಎಲ್ಲರ ಹಿತದೃಷ್ಟಿಯಿಂದ ಅಗತ್ಯವಾಗಿತ್ತು. 

 ಈ ಉಕ್ತಲೇಖನಕ್ಕೆ ಸಮಾನಾಂತರವಾಗಿ ಬಝಾರ್‌ ಗೈಡುಗಳೂ ದೊರಕುತ್ತಿದ್ದವು. ಕೆಲವು ಅಧ್ಯಾಪಕರು ಸ್ವತಃ ಇಂಥ ಗೈಡುಗಳ ಆಶ್ರಯ ಪಡೆಯುತ್ತಿದ್ದರು, ಯಾಕೆಂದರೆ ಇವು ಸಿದ್ಧ ಪ್ರಶ್ನೆ ಮತ್ತು ಸಿದ್ಧ ಉತ್ತರಗಳನ್ನು ಕೊಡುತ್ತಿದ್ದ ಕಾರಣ ಯಾರೂ ಹೆಚ್ಚು ತಲೆ ಕೆರೆದುಕೊಳ್ಳುವ ಅಗತ್ಯವಿರಲಿಲ್ಲ. ಇವುಗಳಲ್ಲಿ ಕೆಲವು ಗೈಡುಗಳು ಅತ್ಯಂತ ಪ್ರಸಿದ್ಧವಾಗಿದ್ದವು; ಮಿನರ್ವಾ ಹೆಸರು ನೆನಪಾಗುತ್ತದೆ. ಆಯಾ ವರ್ಷ ಪಾಠಪಟ್ಟಿ ಪ್ರಕಟವಾದ ಕೆಲವೇ ದಿನಗಳಲ್ಲಿ ಈ ಗೈಡುಗಳೂ ಮಾರುಕಟ್ಟೆಗೆ ಬಂದುಬಿಡುತ್ತಿದ್ದವು. ಪುಸ್ತಕದಂಗಡಿಗಳಲ್ಲಿ ಮೂಲ ಪಠ್ಯಗಳು ಸಿಗುತ್ತಿದ್ದುದು ಅಪರೂಪ, ಆದರೆ ಗೈಡುಗಳಂತೂ ಧಾರಾಳ ಸಿಗುತ್ತಿದ್ದವು. ಎಪ್ಲೆ„ ಗ್ರಶಾಮ್ಸ್‌ ಲಾ! ಪಠ್ಯಗಳು ಇಲ್ಲದಿದ್ದರೂ ನಡೆಯುತ್ತದೆ! ಈ ಗೈಡುಗಳನ್ನು ಬರೆಯುತ್ತಿದ್ದವರು ಹೆಸರಾಂತ ಪ್ರೊಫೆಸರುಗಳೇ ಎನ್ನುವುದು ಈ ಪದ್ಧತಿಗೆ ಸಾಧುತ್ವವನ್ನೇನೂ ಕೊಡುವುದಿಲ್ಲ, ಯಾಕೆಂದರೆ ಗೈಡುಗಳು ನೀಡುವ ಉತ್ತರಗಳು ಅವುಗಳನ್ನು ಬರೆದ ಲೇಖಕರದೇ ವಿನಾ ವಿದ್ಯಾರ್ಥಿಗಳದ್ದಲ್ಲ. ಶಿಕ್ಷಣದಲ್ಲಿ ಮಾದರಿ ಉತ್ತರ ಎನ್ನುವ ಕಲ್ಪನೆಯೇ ಅಸಂಗತ. ಈ ಉಕ್ತಲೇಖನ ಮತ್ತು ನಿರೀಕ್ಷಿತ ಪ್ರಶ್ನಾ ಕೇಂದ್ರಿತ ಪಾಠಪ್ರವಚನ ಹಾಗೂ ಪರೀಕ್ಷೆ ಪರಸ್ಪರ ಪೋಷಿಸುತ್ತ ಒಂದು ಕೆಟ್ಟ ವ್ಯವಸ್ಥೆಯನ್ನು ಭದ್ರಗೊಳಿಸಿದವು. ಇವು ಹೇಗೆ ವಿದ್ಯಾರ್ಥಿಗಳ ಕನಿಷ್ಠತಮ ಜ್ಞಾನ ಸಂಪಾದನೆಗೂ ಅವಕಾಶ ಕೊಡದೆ, ಬರೇ ಕಾರಕೂನರನ್ನಷ್ಟೇ ಸಿದ್ಧಗೊಳಿಸುತ್ತವೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. 

ಆದರೆ, ಈಗ ಸ್ಥಿತಿ ಬದಲಾಗಿದೆ; ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅರಿವು ಮೂಡಿ ಸಾಕಷ್ಟು ಸುಧಾರಣೆಗಳು ಆಗುತ್ತಿವೆ. ಜೇಕಬ್‌ ಬೊÅನೊವ್‌ಸ್ಕಿ ಹೇಳುವಂತೆ, ವಿದ್ಯಾರ್ಥಿಗಳಿಗೆ ಮೊದಲು ಕಲಿಸಬೇಕಾದ್ದು ಪ್ರಶ್ನೆಗಳನ್ನು ಕೇಳಲು: ಅದನ್ನು ಕಲಿಸುವುದೂ ಅಗತ್ಯವಿಲ್ಲ, ಪಾಠಕ್ರಮದಲ್ಲಿ ಅಳವಡಿಸಿಕೊಂಡರೆ ಸಾಕು. ಮುಖ್ಯವಾಗಿ ವಿದ್ಯಾರ್ಥಿಗಳು ತಾವೇನು ಕಲಿಯುತ್ತಿದ್ದೇವೋ ಅವುಗಳ ಬಗ್ಗೆ ಯೋಚಿಸುವಂತೆ ಆಗಬೇಕು. ಇದಕ್ಕೆ ಅಧ್ಯಾಪಕರ ಮನೋಧರ್ಮ ಬದಲಾಗಬೇಕಿದೆ. 

ಕೆಲವು ವರ್ಷಗಳ ಹಿಂದೆ ಒಂದು ಪಟ್ಟಣಕ್ಕೆ ಹೋಗಿ¨ªಾಗ ಅÇÉೊಂದು ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರೊಫೆಸರರಾಗಿದ್ದ ನನ್ನ ಹಳೆ ಬಿ.ಎ. ಕ್ಲಾಸ್‌ಮೇಟನ್ನ ಭೇಟಿಯಾಗಬೇಕೆನಿಸಿತು. ಜತೆಯಲ್ಲಿ ನನ್ನೊಬ್ಬ ವಿದ್ಯಾರ್ಥಿಯೂ ಇದ್ದ. ನಾವಿಬ್ಬರೂ ಈ ನನ್ನ ಮಿತ್ರರ ಮನೆ ಹುಡುಕಿ ಹೊರಟೆವು. ಅವರು ಕ್ಯಾಂಪಸ್‌ನಲ್ಲಿ ವಾಸಿಸುತ್ತಿದ್ದರು ಎನ್ನುವುದು ಮಾತ್ರ ನನಗೆ ಗೊತ್ತಿತ್ತು. ನಾವು ಬರುವುದನ್ನು ಅವರಿಗೆ ತಿಳಿಸುವುದಕ್ಕೆ ನನ್ನ ಬಳಿ ಅವರ ಫೋನ್‌ ನಂಬರ್‌ ಇರಲಿಲ್ಲ. ಬಿ.ಎ. ಮುಗಿಸಿದ ನಂತರ ನಾವು ಪರಸ್ಪರ ಭೇಟಿಯಾದುದೂ ಇರಲಿಲ್ಲ. ಅವರು ಈ ನಗರಕ್ಕೆ ಬಂದು ಪ್ರಖ್ಯಾತ ಕಾಲೇಜೊಂದರಲ್ಲಿ ಎಂ.ಎ. ಮಾಡಿ ಅÇÉೇ ನೌಕರಿ ಹಿಡಿದಿದ್ದರು; ನಾನು ಬೇರೆ ಕಡೆ ಓದಿ ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಮತ್ತು ಇತರ ವಿದೇಶೀ ಭಾಷೆಗಳ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕನಾಗಿ¨ªೆ. ನಾನು ಮತ್ತು ನನ್ನ ವಿದ್ಯಾರ್ಥಿ ಹೋದಾಗ ನನ್ನ ಮಿತ್ರರು ಮನೆ ಜಗಲಿಯಲ್ಲಿ ಒಬ್ಬಳು ಯುವತಿಯೊಂದಿಗೆ ಮಾತಾಡುತ್ತ ಕುಳಿತಿದ್ದರು. ನನ್ನನ್ನು ನೋಡಿ ಕಣ್ಣು ಸನ್ನೆಯÇÉೇ ಕುಳಿತುಕೊಳ್ಳಲು ಹೇಳಿದರು. ಇಷ್ಟು ವರ್ಷಗಳ ನಂತರ ನನ್ನನ್ನು ಕಂಡು ಅವರಿಗೆ ಸಂತೋಷವಾಗಬಹುದು ಎಂದುಕೊಂಡಿದ್ದ ನನ್ನ ಭಾವನೆ ಸುಳ್ಳಾಗಿ ನನಗೆ ಸ್ವಲ್ಪ ಪಿಚ್ಚೆನಿಸಿತು. ನನ್ನ ಮಿತ್ರರು ನನ್ನೀ ಅಚಾನಕ ಭೇಟಿಯಿಂದ ಸ್ವಲ್ಪ ಗಲಿಬಿಲಿಗೊಂಡಂತೆ ಕಾಣಿಸಿದರು. ಅವರ ತಪ್ಪಲ್ಲ. ಅದೇ ಸ್ಥಿತಿಯಲ್ಲಿ ಯುವತಿಯೊಂದಿಗೆ ಮಾತು ಮುಂದರಿಸಿದರು. ಅದು ನಮ್ಮ ಕಿವಿಗೂ ಬೀಳುತ್ತಿತ್ತು. ನನ್ನ ಮಿತ್ರರು ಆಕೆಗೆ ಇಂಗ್ಲಿಷ್‌ ಎಂ.ಎ. ಪರೀಕ್ಷೆಯ ನಿರೀಕ್ಷಿತ ಪ್ರಶ್ನೆಗಳ ಕುರಿತು ಬೋಧನೆ ಮಾಡುತ್ತಿದ್ದರು. ಸ್ವಲ್ಪ ಸಮಯ ಕಳೆದು ಅವಳು ಹೊರಟು ಹೋದ ಮೇಲೆ ಮಿತ್ರರು ನನ್ನ ಕಡೆ ತಿರುಗಿದ್ದೇ, ಯಾವುದೇ ಉಭಯ ಕುಶಲೋಪರಿಯಿಲ್ಲದೆ, ನಾನು ವೃತ್ತಿಯಲ್ಲಿದ್ದ ಸಂಸ್ಥೆಯನ್ನು ಕಟುವಾಗಿ ನಿಂದಿಸಲು ಸುರುಮಾಡಿದರು.  ಅವರ ಪ್ರಕಾರ ಅದು ಇಡೀ ದೇಶದಲ್ಲಿನ ಇಂಗ್ಲಿಷ್‌ ವಿದ್ಯಾಭ್ಯಾಸವನ್ನು ಹಾಳುಗೆಡವುತ್ತಿತ್ತು. ಯಾಕೆಂದರೆ ನಾವು ಲಿಟರೇಚರನ್ನು ಕಡೆಗಣಿಸಿ ಭಾಷೆಯನ್ನು ಅದರ ಸ್ಥಾನದಲ್ಲಿ ಕೂಡಿಸಿ¨ªೆವು, ಇದರಿಂದ ಯುನಿವರ್ಸಿಟಿ ಶಿಕ್ಷಣ ಹಾಳಾಗಿದೆ, ಇತ್ಯಾದಿ. ನಿಜ, ನಮ್ಮ ಸಂಸ್ಥೆ ಭಾಷೆ, ಭಾಷಾವಿಜ್ಞಾನ, ತೌಲನಿಕ ಭಾಷಾಧ್ಯಯನ, ಸರಿಯಾದ ಮತ್ತು ಹಿತವಾದ ಉಚ್ಚಾರಣೆ, ಧ್ವನಿಶಾಸ್ತ್ರ, ವ್ಯಾಕರಣ, ಪದರಚನೆ, ಮಾತೃಭಾಷಾ ಪ್ರಭಾವ, ಇಂಗ್ಲಿಷ್‌ನಲ್ಲಿ ಭಾರತೀಯರು ಸಾಮಾನ್ಯವಾಗಿ ಮಾಡುವ ತಪ್ಪುಗಳು, ದೋಷ ವಿಶ್ಲೇಷಣೆ, ಸಂದಭೋìಚಿತ ಭಾಷೆ ಮತ್ತು ಶೈಲಿ, ಸಂಭಾಷಣೆ, ಸಂವಹನ, ಓದುವಿಕೆ, ಬರವಣಿಗೆ, ಟೆಸ್ಟಿಂಗ್‌ (ಪ್ರಶ್ನೆ ಪತ್ರಿಕೆ ಹೇಗಿರಬೇಕು ಎನ್ನುವ ವಿಷಯ), ಸಂವಾದನೀಯ ಪಾಠಕ್ರಮ ಇತ್ಯಾದಿಗಳಿಗೆ ಸಾಕಷ್ಟು ಗಮನ ಕೊಡುತ್ತಿ¨ªೆವು, ಯಾಕೆಂದರೆ ಇದುವರೆಗೆ ಶಿಕ್ಷಣ ಸಂಸ್ಥೆಗಳು ಅವಗಣಿಸಿದ್ದ (ಈಗಲೂ ಅವಗಣಿಸುವ) ವಿಷಯಗಳು ಇವು. ಆದರೆ ನಾವು ಲಿಟರೇಚರನ್ನು ಕಡೆಗಣಿಸಿ¨ªೆವು ಎನ್ನುವುದು ಸರಿಯಾದ ಮಾತಾಗಿರಲಿಲ್ಲ; ನಮ್ಮಲ್ಲಿ ಪ್ರಬಲವಾದ ಲಿಟರೇಚರ್‌ ವಿಭಾಗವೂ ಇತ್ತು;

ಆದರೆ ಲಿಟರೇಚರ್‌ ಕಲಿಸುವುದರೊಂದಿಗೆ ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು ಎನ್ನುವುದೂ ಒಂದು ಜಿಜ್ಞಾಸೆಯ ಸಂಗತಿಯಾಗಿತ್ತು. ನಾವು ತರಬೇತಿ ನೀಡುತ್ತಿದ್ದುದು ಕಾಲೇಜು ಮತ್ತು ಯೂನಿವರ್ಸಿಟಿ ಅಧ್ಯಾಪಕರಿಗೆ. ಈ ವಿಷಯಗಳ ಕುರಿತಾದ ಪ್ರಾಥಮಿಕ ಮಟ್ಟದ ಅರಿವು ಕೂಡ ಹಲವು ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ, ಅವುಗಳ ಪಾಠಪಟ್ಟಿಯಲ್ಲಿ ಇವು ಅಡಕವಾಗುವುದಿಲ್ಲ ಎನ್ನುವುದು ವಾಸ್ತವ. ಕ್ರಮೇಣ ಹಲವೆಡೆ ಇಂಗ್ಲಿಷ್‌ ಶಿಕ್ಷಣಕ್ರಮದಲ್ಲಿ ಕಂಡುಬರತೊಡಗಿದ ಬದಲಾವಣೆಯಲ್ಲಿ ನಮ್ಮ ಸಂಸ್ಥೆಯ ಪಾತ್ರವೂ ಇದೆ.  

ನನ್ನ ಮಿತ್ರರ ಆಪಾದನೆಯಲ್ಲಿ ಹೊಸತೇನೂ ಇರಲಿಲ್ಲ; ಬೇರೆ ಯುನಿವರ್ಸಿಟಿ ಪ್ರೊಫೆಸರುಗಳಿಂದಲೂ ನಾವು ಇದನ್ನು ಕೇಳಿ¨ªೆವು. ಅದೊಂದು ರೂಢಿಗತ ಮನಃಸ್ಥಿತಿಯನ್ನು ತೋರಿಸುತ್ತಿತ್ತೇ ವಿನಾ ಇನ್ನೇನಲ್ಲ. ನನ್ನ ಮಿತ್ರರ ಮಾತಿಗೆ ಉತ್ತರಿಸಲು ನಾನು ಪ್ರಯತ್ನಿಸಲಿಲ್ಲ; ಸುಮ್ಮನೆ ಕೇಳುತ್ತ ಕುಳಿತೆ; ನಂತರ ಅವರ ಮನೆಯವರು ನೀಡಿದ ಕಾಫಿ ಸ್ವೀಕರಿಸಿ, ನನ್ನ ಜತೆಗಿದ್ದ ವಿದ್ಯಾರ್ಥಿಯೊಡನೆ ಬಂದ ದಾರಿಯಲ್ಲೇ ವಾಪಸು ಹೊರಟೆ. 
(ಅಂಕಣ ಮುಕ್ತಾಯ) 

– ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next