Advertisement
ಕುಕ್ಕೆ ಸುಬ್ರಹ್ಮಣ್ಯ ಮತ್ತು ಮಂಗಳೂರು ನಡುವೆ ಸಂಚರಿಸುವ ಬಹುತೇಕ ಶಟ್ಲ (ಸಾಮಾನ್ಯ ನಿಲುಗಡೆ) ಬಸ್‌ಗಳನ್ನು ಎಕ್ಸ್ ಪ್ರೆಸ್ (ವೇಗದೂತ) ಆಗಿ ಪರಿವರ್ತಿಸಿ, ಹೆಚ್ಚುವರಿ ದರ ವಿಧಿಸುವ ಮೂಲಕ ಸುಲಿಗೆ ಮಾಡಲಾಗುತ್ತಿದೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮಾಧ್ಯಮಗಳು ವಿಸ್ತೃತ ವರದಿ ಪ್ರಕಟಿಸಿದ್ದವು. ಇದನ್ನು ಗಮನಿಇಸದ ಕಡಬ ಜಿ.ಪಂ. ಕ್ಷೇತ್ರದ ಸದಸ್ಯ ಪಿ.ಪಿ. ವರ್ಗೀಸ್ ಅವರು, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಕೋಡಿಂಬಾಳದ ತಿಮ್ಮಪ್ಪ ವಿ.ಕೆ. ಅವರು ದ.ಕ. ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ, ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದು, ಪತ್ರದ ಪ್ರತಿಯನ್ನು ದೂರುದಾರರಿಗೂ ರವಾನಿಸಿದ್ದಾರೆ.
ಇಪ್ಪತ್ತೈದು ವರ್ಷಗಳಿಂದ ಕಡಬದಿಂದ ಮಂಗಳೂರಿನತ್ತ ಸಂಜೆ 6.45ಕ್ಕೆ ಕೊನೆಯ ಬಸ್ ಸಂಚರಿಸುತ್ತಿತ್ತು. ಸುಬ್ರಹ್ಮಣ್ಯದಿಂದ 6.15ಕ್ಕೆ ಹೊರಡುತ್ತಿದ್ದ ಆ ಬಸ್ ಎರಡು ತಿಂಗಳಿನಿಂದ ನಾಪತ್ತೆಯಾಗಿತ್ತು. ಅದರಿಂದಾಗಿ ಸಂಜೆಯ ವೇಳೆಗೆ ಮಂಗಳೂರಿನತ್ತ ಹೋಗಬೇಕಾದ ಪ್ರಯಾಣಿಕರು ತೀವ್ರ ತೊಂದರೆ ಗೊಳಗಾಗಿದ್ದರು. ಪ್ರಯಾಣಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಸಂಜೆಯ ಬಸ್ ಮತ್ತೆ ಸಂಚಾರ ಆರಂಭಿಸಿದೆ. ಆದರೆ ಸುಬ್ರಹ್ಮಣ್ಯದಿಂದ ಮಂಗಳೂರು ತನಕ ಸಂಚರಿಸುತ್ತಿದ್ದ ಆ ಬಸ್ ಈಗ ಉಪ್ಪಿನಂಗಡಿ ತನಕ ಮಾತ್ರ ಓಡಾಡುತ್ತಿದೆ. ಮಂಗಳೂರಿಗೆ ತೆರಳುವ ಪ್ರಯಾಣಿಕರು ಅಲ್ಲಿಂದ ಬೇರೆ ಬಸ್ ಹಿಡಿಯಬೇಕಿದೆ. ಸುಬ್ರಹ್ಮಣ್ಯದಿಂದ ಕಡಬ ಮೂಲಕ ಮಂಗಳೂರಿಗೆ ಹೋಗುವ ಎಕ್ಸ್ ಪ್ರಸ್ ಬಸ್ ಮುಂಜಾನೆ 5.30ಕ್ಕೆ ಸಂಚಾರ ಆರಂಭಿಸುತ್ತದೆ. ಆ ವೇಳೆಯಲ್ಲಿ ಒಂದು ಶಟ್ಲ ಬಸ್ ಓಡಿಸಿದರೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಎಕ್ಸ್‌ಪ್ರೆಸ್..! ಪ್ರಯಾಣ ದರ ಮಾತ್ರ
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳ ಎಡವಟ್ಟಿ ನಿಂದಾಗಿ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿತ್ತು. ಮಂಗಳೂರು- ಸುಬ್ರಹ್ಮಣ್ಯದ ನಡುವೆ ಪ್ರಯಾಣಿಸುವ ಯಾತ್ರಿಕರ ಮನವಿಯಂತೆ ಅಧಿಕಾರಿಗಳು ಎಲ್ಲ ಬಸ್‌ಗಳನ್ನು ಎಕ್ಸ್‌ಪ್ರೆಸ್ ಮಾಡಿದ್ದಾರೆ. ಆದರೆ ಇತರ ಪ್ರಯಾಣಿಕರು ಕೇಳಿದಲ್ಲಿ ಸ್ಟಾಪ್ ಕೊಡಿ ಎಂದು ನಿರ್ವಾಹಕರಿಗೆ ಸೂಚಿಸಿದ್ದಾರೆ. ಅದರಿಂದಾಗಿ ಶಟ್ಲ ಬಸ್‌ಗೆ ಎಕ್ಸ್‌ಪ್ರೆಸ್ ದರ ತೆತ್ತು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಮಾಧ್ಯಮಗಳ ವರದಿ ಹಾಗೂ ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ ಇದೀಗ ಸುಬ್ರಹ್ಮಣ್ಯ – ಉಪ್ಪಿನಂಗಡಿ ನಡುವೆ ಕೆಲವು ಶಟ್ಲ ಬಸ್‌ಗಳ ಸಂಚಾರ ಆರಂಭಿಸಿದ್ದಾರೆ. ಆದರೆ ಸುಬ್ರಹ್ಮಣ್ಯದಿಂದ ಮಂಗಳೂರು ತನಕವೂ ಶಟ್ಲ ಬಸ್ ಬೇಕೆನ್ನುವುದು ಜನರ ಬೇಡಿಕೆಯಾಗಿದೆ.
Related Articles
ಬೇಕಾಬಿಟ್ಟಿ ದರ ಏರಿಕೆ ಮಾಡಿರುವ ಕುರಿತು ದ.ಕ. ಜಿಲ್ಲಾಧಿಕಾರಿಗೆ ಪ್ರಯಾಣಿಕರ ಪರವಾಗಿ ಲಿಖಿತ ದೂರು ನೀಡಿದ್ದೆ. ಅದಕ್ಕೆ ಸ್ಪಂದಿಸಿರುವ ಅವರು ಸಮಸ್ಯೆ ಬಗೆಹರಿಸಲು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆಎಸ್ಸಾರ್ಟಿಸಿ ಅಧಿಕಾರಿಗಳು ಈ ಕುರಿತು ಗಮನಹರಿಸಿ ಶೀಘ್ರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕಿದೆ.
- ತಿಮ್ಮಪ್ಪ ವಿ.ಕೆ.
ಕೋಡಿಂಬಾಳ, ದೂರುದಾರರು
Advertisement
ವಿಶೇಷ ವರದಿ