Advertisement

ಸ್ಫೋಟಗೊಂಡ ಕಿಟ್‌ ಅವ್ಯವಹಾರ ಆರೋಪ

05:56 AM May 29, 2020 | Lakshmi GovindaRaj |

ಬೆಂಗಳೂರು: ನಗರಲ್ಲಿನ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್‌ ಹಂಚಿಕೆಯಲ್ಲಿನ ಅವ್ಯವಹಾರ ಆರೋಪ ಗುರುವಾರ ನಡೆದ ಮಾಸಿಕ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ಈ ಗದ್ದಲದಲ್ಲಿ ಈಚೆಗೆ ಸಂಭವಿಸಿದ ಮಳೆ ಅಬ್ಬರದ  ಅವಾಂತರ ಕೂಡ ಅಡಗಿತು. ಸುಮಾರು ಮೂರು ತಿಂಗಳ ನಡೆದ ಮಾಸಿಕ ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಕೋವಿಡ್‌ 19 ತುರ್ತು ಅನುದಾನದಲ್ಲಿ ದುರ್ಬಳಕೆ ಆಗಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದರು.

Advertisement

ಇದು ಸಭೆಯಲ್ಲಿ  ಕೋಲಾಹಲದ ಕಿಡಿ ಹೊತ್ತಿಸಿತು. ಪರಿಣಾಮ ಆರೋಪ-ಪ್ರತ್ಯಾರೋಪಗಳಲ್ಲೇ ಸಭೆ ಅಂತ್ಯಗೊಂಡಿತು. ಇದಕ್ಕೂ ಮೊದಲು “ಕೋವಿಡ್‌ 19 ತುರ್ತು ಅನುದಾನ ದುರ್ಬಳಕೆಯಾಗಿದೆ. 2020-21ನೇ ಸಾಲಿನ ಪಾಲಿಕೆ ಆಯವ್ಯಯದಲ್ಲಿ ಸೋಂಕು ನಿರ್ವಹಣೆಗೆ ಮೀಸಲಿಟ್ಟ  ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಕೇವಲ ಹೆಸರಿಗಷ್ಟೇ. ಇದೊಂದು ಹಗರಣ’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಗಂಭೀರ ಆರೋಪ ಮಾಡಿದರು. ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕರು, “ಹಗರಣವಾಗು ವುದಕ್ಕೆ ಇದೇನೂ 2ಜಿ ಅಲ್ಲ’ ಎಂದು ತಿರುಗೇಟು ನೀಡಿದರು.

ಲೋಪವಾಗಿಲ್ಲ; ಆಯುಕ್ತರ ಸ್ಪಷ್ಟನೆ: ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಮಾತನಾಡಿ, “ನಗರದಲ್ಲಿನ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್‌ ನೀಡುವುದರಲ್ಲಿ ಯಾವುದೇ ಲೋಪವಾಗಿಲ್ಲ’ ಪಾರದರ್ಶಕವಾಗಿ ಆಹಾರದ  ಕಿಟ್‌ ಹಂಚಲಾಗಿದೆ ಎಂದು ಸ್ಪಷ್ಟನೆ ನೀಡಿದರು.  ಕ್ಷಯ ಪಾತ್ರೆ ಪ್ರತಿಷ್ಠಾನದ ಮೂಲಕ ಒಂದು ಲಕ್ಷ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್‌ ನೀಡಲು ನಿರ್ಧರಿಸಲಾಯಿತು.

ಇದರಲ್ಲಿ 5 ಕೆ.ಜಿ. ಅಕ್ಕಿ, ಎರಡು ಕೆ.ಜಿ. ಬೇಳೆ, ಅರ್ಧ ಲೀ. ಅಡುಗೆ  ಎಣ್ಣೆ, ಚೆನ್ನದಾಲ್‌ ಅರ್ಧ ಕೆ.ಜಿ., ಅರ್ಧ ಕೆ.ಜಿ. ಬೇಳೆ, ಖಾರದ, ಪುಡಿ ಮತ್ತು ಉಪ್ಪು, ಸಕ್ಕರೆ ಅರ್ಧ ಕೆ.ಜಿ. ಹಾಗೂ ರಸಂ ಪೌಡರ್‌ ಒಳಗೊಂಡ ಆಹಾರದ ಕಿಟ್‌ ನೀಡಲಾಗಿದೆ. 5 ಕೆ.ಜಿ. ಅಕ್ಕಿಯನ್ನು ಕರ್ನಾಟಕ ಆಹಾರ ಸರಬರಾಜು ವೆಚ್ಚ  ತೆಗೆದುಕೊಂಡರೆ ಕಡಿಮೆ ಬೆಲೆ ಬೀಳಲಿದೆ ಎನ್ನುವ ಉದ್ದೇಶದಿಂದ ಖರೀದಿಸಲಾಯಿತು. ಅಕ್ಷಯ ಪಾತ್ರೆಯಿಂದ ಹಂಚಿಕೆ ಮಾಡಲಾದ ಒಂದು ಲಕ್ಷ ಕಿಟ್‌ನಲ್ಲಿ 80 ಸಾವಿರ ಕಿಟ್‌ಗಳಿಗೆ ಕಾರ್ಮಿಕ ಇಲಾಖೆಯಿಂದ ಹಣ ನೀಡಲಾಗಿದೆ. ಉಳಿದ  20 ಸಾವಿರ ಆಹಾರದ ಕಿಟ್‌ಗಳನ್ನು ಮಾತ್ರ ಅಕ್ಷಯ ಪಾತ್ರೆ ಉಚಿತವಾಗಿ ನೀಡಿದೆ ಎಂದು ಮಾಹಿತಿ ನೀಡಿದರು.

ಕಾರ್ಮಿಕ ಇಲಾಖೆಯಲ್ಲಿ 68 ಸಾವಿರ ಜನ ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿ ಆಹಾರದ ಕಿಟ್‌  ನೀಡಿದ್ದಾರೆ. ಮೊದಲ ಹಂತದಲ್ಲಿ 1,44,321 ಜನರ ಪಟ್ಟಿ ಮಾಡಿಕೊಳ್ಳಲಾಗಿತ್ತು. ಇಷ್ಟು ಜನರಿಗೆ ಆಹಾರ ಕಿಟ್‌ ಅನ್ನು ಕೇವಲ ಅಕ್ಷಯ ಪಾತ್ರೆಯಿಂದ ನೀಡುವುದು ತಡವಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಮೆಟ್ರೋ ಕ್ಯಾಶ್‌ ಅಂಡ್‌  ಕ್ಯಾರಿ ಹಾಗೂ ಶ್ರೀಶಕ್ತಿ ಟ್ರೆಡರ್ಗಳಿಗೆ ಆಹಾರದ ಕಿಟ್‌ ನೀಡುವ ಜವಾಬ್ದಾರಿ ನೀಡಲಾಯಿತು ಎಂದರು.

Advertisement

ಇದಲ್ಲದೆ, ಕಾರ್ಡ್‌ ಇಲ್ಲದವರೂ ಇದ್ದ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ 1,8,111 ಜನರನ್ನು ಗುರುತಿಸಲಾಯಿತು. ಒಬ್ಬ ವಲಸೆ  ಕಾರ್ಮಿಕರಿಗೆ 21ದಿನಗಳಿಗಾಗುವಷ್ಟು ಆಹಾರದ ಕಿಟ್‌ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ 41,954 ಎಂದು ಗುರುತಿಸಲಾಗಿದೆ. ಇದಲ್ಲದೆ, ಕಂಟೈನ್ಮೆಂಟ್‌ ವಲಯಗಳಲ್ಲಿ ಪಡಿತರ ಚೀಟಿ ಇಲ್ಲದ 99 ಸಾವಿರ ಆಹಾರದ ಕಿಟ್‌ ಬೇಕಾಗುತ್ತದೆ  ಎನ್ನುವುದು ಗುರುತಿಸಲಾಯಿತು. ಒಟ್ಟಾರೆ 3,93,415 ಕಿಟ್‌ ಬೇಕಾಗುತ್ತದೆ. ಇದರಲ್ಲಿ ಬಿಬಿಎಂಪಿಯಿಂದ 3.7 ಲಕ್ಷ ಆಹಾರದ ಕಿಟ್‌ ಹಾಗೂ ಕಾರ್ಮಿಕ ಇಲಾಖೆಯಿಂದ 68 ಸಾವಿರ ಕಿಟ್‌ ನೀಡಿದ್ದಾರೆ. ಒಟ್ಟಾರೆ 3,74 ಲಕ್ಷ ಆಹಾರದ ಕಿಟ್‌  ಹಂಚಿಕೆ ಮಾಡಲಾಗಿದೆ. ಈ ಕುರಿತು ವಿವರ ನೀಡಲಾಗುತ್ತದೆ ಎಂದರು.

ಅಪ್ರಸ್ತುತವಾಯ್ತು ಮಳೆ ಅನಾಹುತ!: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರ್ಚ್‌ ಮಾಸಿಕ ಸಭೆ ನಡೆದಿರಲಿಲ್ಲ. ಏಪ್ರಿಲ್‌ನಲ್ಲಿ ಸಭೆ ಕರೆಯಲಾಗಿತ್ತಾದರೂ ಯಾವುದೇ ಚರ್ಚೆ ನಡೆದಿರಲಿಲ್ಲ. ಗುರುವಾರ ನಡೆದ ಮಾಸಿಕ ಸಭೆಯಲ್ಲಿ ನಗರದಲ್ಲಿ  ಕೋವಿಡ್‌ 19 ಸೋಂಕು ತಡೆ, ಮಳೆ ಅನಾಹುತದಿಂದ ಹಾನಿಯಾಗಿರುವ ಬಗ್ಗೆ ಚರ್ಚೆಯಾಗುವ ನಿರೀಕ್ಷೆ ಇತ್ತು. ಆದರೆ, ಈ ಬಗ್ಗೆ ಯಾವುದೇ ಗಂಭೀರ ವಿಚಾರಗಳು ಚರ್ಚೆಯಾಗಲಿಲ್ಲ. ನಗರದಲ್ಲಿ ಮಳೆಯಿಂದ ಇಬ್ಬರು ಮೃತಪಟ್ಟರೂ, ಈ  ಬಗ್ಗೆ ವಿರೋಧ ಪಕ್ಷದ ಸದಸ್ಯರು ಸೇರಿದಂತೆ ಯಾವೊಬ್ಬ ಸದಸ್ಯರೂ ವಿಷಯ ಪ್ರಸ್ತಾಪಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next