Advertisement

ಬೋಧಕರಿಂದ ವಿದ್ಯಾರ್ಥಿಗಳ ಮುಗ್ಧತೆ ದುರ್ಬಳಕೆ

12:18 PM Dec 22, 2018 | Team Udayavani |

ಬೆಂಗಳೂರು: ನಮ್ಮ ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳು ಮುಗ್ಧರು ಮತ್ತು ಒಳ್ಳೆಯವರು. ಆದರೆ, ಬೋಧಕರು ಆ ಮುಗ್ಧತೆಯನ್ನು ಉಪಯೋಗಿಸಿಕೊಂಡು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್‌. ವೇಣುಗೋಪಾಲ್‌ ಬೇಸರ ವ್ಯಕ್ತಪಡಿಸಿದರು.

Advertisement

ಕಂಪ್ಯೂಟಿಂಗ್‌ ಪ್ರೊಫೇಷನಲ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನಗರದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಮಹಾವಿದ್ಯಾಲಯದಲ್ಲಿ (ಯುವಿಸಿಇ) ಶುಕ್ರವಾರ ಹಮ್ಮಿಕೊಂಡಿದ್ದ “ಇನ್‌ಫಾರ್ಮೇಷನ್‌ ಪ್ರೊಸೆಸಿಂಗ್‌’ ಕುರಿತ 14ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬೋಧಕರೆಲ್ಲಾ ಕೆಟ್ಟವರು ಎಂದು ನಾನು ಹೇಳುತ್ತಿಲ್ಲ. ಕೆಲವರು ಮಾತ್ರ ಈ ರೀತಿ ಮಾಡುತ್ತಾರೆ.

ಇದು ಕೇವಲ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೀಮಿತವಾಗಿಲ್ಲ; ದೇಶದ ಎಲ್ಲ ವಿವಿಗಳಲ್ಲೂ ಇದನ್ನು ಕಾಣಬಹುದು ಎಂದು ಹೇಳಿದರು. ಸಮಾಜದಲ್ಲಿ ತುಂಬಾ ಜನ ಒಳ್ಳೆಯತನ ಹೊಂದಿದವರಿದ್ದಾರೆ. ಆದರೆ, ತಮ್ಮ ಕಣ್ಣ ಮುಂದೆಯೇ ಕೆಟ್ಟದ್ದು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನಿರುವ ಜನರ ಒಳ್ಳೆಯತನ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುಣಮಟ್ಟದ ಶಿಕ್ಷಣದಲ್ಲಿ ಬೆಂಗಳೂರು ವಿವಿ ರಾಜ್ಯದಲ್ಲೇ ಮೊದಲ ಸಾಲಿನಲ್ಲಿದೆ. ದೇಶದಲ್ಲಿ 37ನೇ ರ್‍ಯಾಂಕ್‌ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ನಮ್ಮಲ್ಲಿ ಸಾಮರ್ಥ್ಯ ಇದೆ. ಆದರೆ, ಆತ್ಮವಿಶ್ವಾಸದ ಕೊರತೆ ಕಾಡುತ್ತಿದೆ. ಎರಡು-ಮೂರು ಸಾವಿರ ವರ್ಷಗಳ ಹಿಂದೆ ಜಗತ್ತಿನ ಇತರೆ ದೇಶಗಳು ಭಾರತದತ್ತ ನೋಡುತ್ತಿದ್ದವು. ಆದರೆ, ಇಂದು ನಾವು ಇತರೆ ದೇಶಗಳ ಕಡೆ ಮುಖಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. 

ಯುವಿಸಿಇ ಪ್ರಾಂಶುಪಾಲ ಡಾ.ಎಚ್‌.ಎನ್‌.ರಮೇಶ್‌, ಮಹಾವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ಆಂಡ್‌ ಇಂಜಿನಿಯರಿಂಗ್‌ ಮುಖ್ಯಸ್ಥೆ ಡಾ.ಎಚ್‌.ಎನ್‌.ಚಂಪಾ ಮತ್ತಿತರರು ಉಪಸ್ಥಿತರಿದ್ದರು.

Advertisement

ಇತಿಹಾಸದಲ್ಲೇ ಮೊದಲು: ಯುವಿಸಿಇ ಪಿಎಚ್‌ಡಿ ವಿದ್ಯಾರ್ಥಿ ಸಂತೋಷ್‌ ಅವರ ಅಧ್ಯಯನ ಪ್ರಬಂಧ, ವಿಶ್ವದ ಅತಿ ದೊಡ್ಡ ತಾಂತ್ರಿಕ ವೃತ್ತಿಪರ ಸಂಸ್ಥೆ “ಐಇಇಇ ಕಮ್ಯುನಿಕೇಷನ್‌ ಸರ್ವೇ ಆಂಡ್‌ ಟ್ಯೂಟೋರಿಯಲ್ಸ್‌’ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ದೇಶದ ಇಂಜಿನಿಯರಿಂಗ್‌ ಮಹಾವಿದ್ಯಾಲಯಗಳ ಇತಿಹಾಸದಲ್ಲೇ ಇದು ಮೊದಲು ಎನ್ನಲಾಗಿದೆ.

ಸಂತೋಷ್‌ ಐಒಟಿ (ಇಂಟರ್‌ನೆಟ್‌ ಆಫ್ ಥಿಂಗ್ಸ್‌) ಡಿವೈಸ್‌ ಹೇಗೆ ಹುಡುಕಬೇಕು ಎಂಬುದರ ಬಗ್ಗೆ ವಿಶ್ಲೇಷಣಾ ಪ್ರಬಂಧ ಮಂಡಿಸಿದ್ದರು. ಇದಕ್ಕೆ ಸ್ವತಃ ಬೆಂಗಳೂರು ವಿವಿ ಕುಲಪತಿ ಡಾ.ವೇಣುಗೋಪಾಲ್‌, ಐಐಎಸ್ಸಿಯ ಎಲ್‌.ಎಂ. ಪಟ್ನಾಯಕ್‌, ಮೆಲ್ಬೋರ್ನ್ ವಿವಿಯ ರಾಜಕುಮಾರ್‌ ಬುಯ್ಯ, ಫ್ಲೋರಿಡಾ ಯೂನಿವರ್ಸಿಟಿಯ ಎಸ್‌.ಎಸ್‌.ಅಯ್ಯಂಗಾರ್‌ ಮಾರ್ಗದರ್ಶನ ಮಾಡಿದ್ದರು. 2018ನೇ ಸಾಲಿನ ಜರ್ನಲ್‌ನಲ್ಲಿ ಇದು ಪ್ರಕಟಗೊಂಡಿದೆ.

ಸಂತೋಷ್‌ ಅಲ್ಲದೆ, ಬಿಎಂಎಸ್‌ ಕಾಲೇಜಿನ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ವಿಭಾಗದ ಅಭಿಷೇಕ್‌ ಮಹೇಶ್‌ ಅಪ್ಪಾಜಿ ಎಂಬುವರು ಮಂಡಿಸಿದ ಪ್ರಸ್ತುತ ತಂತ್ರಜ್ಞಾನ ಹಾಗೂ ಅದರಲ್ಲಿನ ನ್ಯೂನತೆಗಳ ಕುರಿತು ಮಂಡಿಸಿದ ಪ್ರಬಂಧವೂ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ಸಮ್ಮೇಳನದಲ್ಲಿ ಈ ಇಬ್ಬರನ್ನೂ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next