Advertisement

ಮತ್ತೆ ಸಭೆ ಸೇರಿ ತಜ್ಞರ ಸಮಿತಿ ರಚನೆ: ಸಚಿವ ಶರಣಪ್ರಕಾಶ

07:47 AM Sep 21, 2017 | |

ಕಲಬುರಗಿ: ವೀರಶೈವ- ಲಿಂಗಾಯತ ನಡುವಿನ ಭಿನ್ನಾಭಿಪ್ರಾಯ ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ರಚಿಸಲು ಉದ್ದೇಶಿಸಿರುವ ತಜ್ಞರ ಸಮಿತಿಯನ್ನು ಇನ್ನೊಮ್ಮೆ ಶೀಘ್ರ ಸಭೆ ಸೇರಿ ಅಂತಿಮಗೊಳಿ ಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

Advertisement

ನಗರದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನೊಮ್ಮೆ ಸಭೆ ಸೇರಿ ಎಲ್ಲರೊಂದಿಗೆ ಚರ್ಚಿಸಿ, ವಿಶ್ವಾಸದೊಂದಿಗೆ ಸಮಿತಿ ರಚಿಸಲಾಗುವುದು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಸೆ.24ರಂದು ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿರುವ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಮಹಾರ್ಯಾಲಿ ನಡೆಸಿದ ನಂತರ, ಸಮಿತಿ ರಚನೆ ಆರಂಭವಾಗಲಿವೆ. ತಜ್ಞರ ಸಮಿತಿ ರಚನೆ ಸಂಬಂಧ ಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ  ಗೊಂದಲವಿಲ್ಲ. ಎಲ್ಲರೊಂದಿಗೆ ಮತ್ತೂಮ್ಮೆ ಮಾತನಾಡಿದ ನಂತರ ಎಲ್ಲವೂ ತಿಳಿಯಾಗುತ್ತದೆ ಎಂದರು.

ಎಂ.ಬಿ. ಪಾಟೀಲ ತಲೆ ತಿರುಕ: ಬಿಎಸ್‌ವೈ
ಕೊಪ್ಪಳ: “ಬಸವಣ್ಣನ ಉತ್ತರಾಧಿ ಕಾರಿ ನಾನೇ ಎಂದಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಲೆ ತಿರುಕ. ಇಂತಹ ತಲೆ ತಿರುಕರಿಂದಲೇ ಇಂಥ ಮಾತುಗಳು ಬರುತ್ತವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡರು. ಕುಷ್ಟಗಿ ಪಟ್ಟಣದಲ್ಲಿ ಬುಧವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರ ರೊಂದಿಗೆ ಮಾತನಾಡಿ, ತಲೆ ತಿರುಕರು ಮಾತ್ರ ಹೀಗೆಲ್ಲ ಹೇಳುತ್ತಾರೆ. ಅವರಿಂದಲೇ ಇಂತಹ ಮಾತುಗಳು ಬರುತ್ತವೆ ಎಂದರು. ಬೃಹತ್‌ ನೀರಾವರಿ ಸಚಿವ ಎಂ.ಬಿ.ಪಾಟೀಲರು ಕಮಿಷನ್‌ ಏಜೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಪ್ರತಿ ನೀರಾವರಿ ಯೋಜನೆಯ ಮೊತ್ತದಲ್ಲಿ ಶೇ.45 ರಿಂದ ಶೇ.50 ಕಮಿಷನ್‌ ಪಡೆಯುತ್ತಿದ್ದಾರೆಂದು ಬಿ.ಎಸ್‌.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ನಾನು ಉತ್ತರಾಧಿಕಾರಿ ಎಂದು ಹೇಳಿಲ್ಲ
ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ನಡುವೆ ನಡೆಸಲಾದ ಮಾತುಕತೆ ಹಾಗೂ ತದ ನಂತರ ತಾವು ಹೇಳಿದ್ದೆಲ್ಲ ಮುಗಿದ ಅಧ್ಯಾಯ. ಡಾ.ಶಿವಕುಮಾರ ಶ್ರೀಗಳಲ್ಲದೆ ಕಿರಿಯ ಸ್ವಾಮಿಗಳು ತಮ್ಮೊಂದಿಗೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಒಟ್ಟಾರೆ ಈ ಸಂಬಂಧ ಏನೂ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಬಸವ ಸೇನೆ ರಚಿಸಲು ಚಿಂತನೆ ನಡೆದಿದೆ. ತಾನಂತೂ ಬಸವಣ್ಣನ ಉತ್ತರಾಧಿಕಾರಿ ಎಂಬುದಾಗಿ ಎಲ್ಲೂ ಹೇಳಿಲ್ಲ. ತಾವು ಬಸವಣ್ಣನವರ ಕಾಲಿನ ಧೂಳಿಗೂ ಸಮವಿಲ್ಲ.
●ಎಂ.ಬಿ. ಪಾಟೀಲ, ಜಲಸಂಪನ್ಮೂಲ ಸಚಿವ

ಬಸವಣ್ಣನ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುವ ಸಚಿವ ಎಂ.ಬಿ.ಪಾಟೀಲ ಅವರು ಬಸವಣ್ಣನ ಧೂಳಿಗೂ ಸಮರಲ್ಲ.
ಬಸವೇಶ್ವರರು ಎಲ್ಲಿ, ಇವರೆಲ್ಲಿ. ಸಚಿವ ಪಾಟೀಲ ಯಾವ ಗಿಡದ ತಪ್ಪಲು?

●ಕೆ.ಎಸ್‌. ಈಶ್ವರಪ್ಪ, ಪ್ರತಿಪಕ್ಷ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next