ಬೆಂಗಳೂರು: ಈ ಬಾರಿ ಏರೋ ಇಂಡಿಯಾದಲ್ಲಿ ಬಾನಂಗಳಕ್ಕೆ ವಿಮಾನ ಹಾರಿಸುತ್ತಿರುವ ಕಮಾಂಡರ್‌ಗಳಲ್ಲಿ ಬಹುತೇಕ ಯುವ ಪಡೆಯೇ ಇದ್ದು, ಪ್ರಮುಖವಾಗಿ ಸಾರಂಗ್ ತಂಡ ಕನ್ನಡಿಗನ ಅನುಭವ ಹಾಗೂ ಮಹಾರಾಷ್ಟ್ರ ದಂಪತಿಯ ತಾಳಮೇಳದೊಂದಿಗೆ ಮುನ್ನಡೆಯಲಿದೆ.
ಏರ್‌ಶೋ ಮನೋರಂಜನೆಯ ಕೇಂದ್ರ ಬಿಂದುವಾಗಿರುವ ಸಾರಂಗ್ ಯುದ್ಧವಿಮಾನ ತಂಡವನ್ನು ಕನ್ನಡಿಗರೇ ಆದ ವಿಂಗ್ ಕಮಾಂಡರ್ ಗಿರೀಶ್‌ಕುಮಾರ್ ಮುನ್ನಡೆಸುತ್ತಿದ್ದಾರೆ. ಅಲ್ಲದೇ, ಇವರು ಐದು ಬಾರಿ ಏರ್‌ಶೋನಲ್ಲಿ ಭಾಗವಹಿಸಿ ಹಲವು ಯುದ್ಧ ವಿಮಾನಗಳನ್ನು ಚಾಲನೆ ಮಾಡುವ ಮೂಲಕ ಹಿರಿಯ, ಅನುಭವಿ ಕಮಾಂಡರ್ ಆಗಿದ್ದಾರೆ. ಬಾಗಲಕೋಟೆ ಮೂಲದ ಗಿರೀಶ್ ಕುಮಾರ್ ಅವರು ವಿಜಯಪುರದ ಸೈನಿಕ್ ಶಾಲೆಯಲ್ಲಿ ಅಧ್ಯಯನ ನಡೆಸಿ ಆನಂತರ ಏರ್‌ಫೋರ್ಸ್ ಸೇರಿದ್ದಾರೆ.
ಏರ್ ಶೋ ಕುರಿತು ಅನುಭವ ಹಂಚಿಕೊಂಡ ಅವರು, ವಿಮಾನ ಚಾಲನೆ ಬಹಳ ರೋಮಾಚನವಾಗಿತ್ತದೆ. ಕನ್ನಡಿಗನೇ ಆಗಿ ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಏರ್‌ಶೋನಲ್ಲಿ ಅನುಭವಿ ಕಮಾಂಡರ್ ಆಗಿ ಭಾಗವಹಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಏರ್‌ಪೋರ್ಸ್ ಉನ್ನತ ಸ್ಥಾನಮಾನಗಳಲ್ಲಿ ಕನ್ನಡಿಗರಿಗೂ ಅವಕಾಶವಿದೆ ಎಂಬುದಕ್ಕೆ ನಾನೇ ಉದಾಹರಣೆಯಾಗಿದ್ದು, ಯುವಪಡೆ ಹೆಚ್ಚೆಚ್ಚು ಏರ್‌ಫೋರ್ಸ್ ಸೇರಲು ಆಸಕ್ತಿ ವಹಿಸಬೇಕು ಎಂದರು.
ಇನ್ನು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೊಗೆಯಲ್ಲಿ ವಿಭಿನ್ನ ಆಕೃತಿಗಳನ್ನು ಮೂಡಿಸುತ್ತಿದ್ದೇವೆ. ವಿಶೇಷವಾಗಿ ಹೃದಯಾಕಾರದ ಆಕೃತಿ ಮೂಡಿಸಲಾಗುತ್ತದೆ. ಒಟ್ಟಾರೆ ನೋಡಲು ಬರುವ ಜನರಿಗೆ ಹೆಚ್ಚು ರೋಮಾಂಚನ ನೀಡಲು ಎಲ್ಲಾ ತಯಾರಿ ನಡೆಸಿದ್ದೇವೆ. ಈ ಬಾರಿ ಸಾರಂಗ್ ತಂಡದಲ್ಲಿ ಬಲಭಾಗದಿಂದ ಮೂರನೇ ವಿಮಾನವನ್ನು ಚಾಲನೆ ಮಾಡುತ್ತಿದ್ದೇನೆ ಎಂದು ಕಮಾಂಡರ್ ಗಿರೀಶ್ ಕುಮಾರ್ ತಮ್ಮ ಅನುಭವ ಹಂಚಿಕೊಂಡರು.
“ದೇಶಕ್ಕಾಗಿ ಯುವಪಡೆ ಏನಾದರೂ ಮಾಡಬೇಕು ಎಂಬ ಆಸೆ ಹೊಂದಿದ್ದರೆ ಸೇನೆಯು ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿ ಸೇವೆಯ ಜತೆಗೆ ರೋಮಾಂಚನ ಹಾಗೂ ಹೆಮ್ಮೆಯ ಅನುಭವ ಇಲ್ಲಿಸಿಗುತ್ತದೆ’
-ಗಿರೀಶ್ ಕುಮಾರ್, ಸಾರಂಗ್ ವಿಂಗ್ ಕಮಾಂಡರ್