ಎಷ್ಟು ಸಹಜವಾದ, ಸತ್ಯದ ಮಾತು ಅಲ್ವಾ. ಕಾಲೇಜು ದಿನಗಳಲ್ಲಿ ಮೊಬೈಲ್ ಉಪಯೋಗಿಸಲು ಅನುಮತಿಯಿಲ್ಲದ ಹಾಸ್ಟೆಲ್‌ನಲ್ಲಿ ಕಾಯಿನ್‌ಫೋನ್‌ನ ಎದುರು ಉದ್ದ ಸಾಲು ನಿಂತು ಐದು ನಿಮಿಷ ಅಪ್ಪ- ಅಮ್ಮಂದಿರೊಡನೆ ಮಾತನಾಡಲು ಗಂಟೆಗಟ್ಟಲೆ ಕಾದ ಹುಡುಗಿಗೆ, ಕೆಲಸಕ್ಕೆ ಸೇರಿದ ನಂತರವೋ ಅಥವಾ ಮೊಬೈಲ್ ಉಪಯೋಗಿಸಲು ಪ್ರಾರಂಭಿಸಿದ ನಂತರವೋ ಈ ವಾಟ್ಸಾಪ್, ಫೇಸ್‌ಬುಕ್, ಕಾಲ್, ಮೆಸೇಜ್‌ಗಳ ಕಿರಿಕಿರಿಗಿಂತ ಆ ಹಾಸ್ಟೆಲ್ ದಿನಗಳ ನೆನಪೇ ಚಂದ ಎನ್ನಿಸಬಹುದು. ಹಾಸ್ಟೆಲ್‌ನ ಶಿಸ್ತು ಮತ್ತು ನಿಯಮಗಳನ್ನು ವಿರೋಧಿಸುತ್ತಿದ್ದವರಿಗೆ ಈಗಿರುವ ವ್ಯಾವಹಾರಿಕ ಪ್ರಪಂಚಕ್ಕಿಂತ ಅಲ್ಲಿನ ಗೆಳತಿಯರ ಪ್ರೀತಿ. ಕಾಳಜಿಗಳೇ ಖುಷಿ ಎನ್ನಿಸಬಹುದು.
ಹೌದು, ನಾವು ಪ್ರತಿಯೊಬ್ಬರೂ ಸಾಮಾನ್ಯವಾಗಿ ಅನೇಕ ಘಟನೆಗಳನ್ನು, ಕ್ಷಣಗಳನ್ನು ಅನುಭವಿಸಿರುತ್ತೇವೆ. ಆದರೆ ಎಷ್ಟೋ ದಿನಗಳ ನಂತರ ಮತ್ತೆ ಆ ಘಳಿಗೆಗಳನ್ನು ನೆನಪಿಸಿಕೊಂಡಾಗ ಅದು ತರಿಸುವ ನಗು ಮತ್ತೆಲ್ಲೂ ಸಿಗ್ಲಿಕ್ಕಿಲ್ಲ. ಸಣ್ಣ ಸಣ್ಣ, ಸಿಲ್ಲಿ ವಿಷಯಗಳೇ ಎಷ್ಟೊಂದು ಯೋಚನೆಗೆ ಕಾರಣ ಆಗಿತ್ತಲ್ವಾ ಅನ್ನಿಸೋದಂತೂ ಹೌದು. ಅವು ಕಹಿಘಟನೆಗಳೇ ಆಗಿದ್ದಲ್ಲಿ, ಅಬ್ಟಾ! ಇನ್ನು ಅದು ಕೇವಲ ನೆನಪಲ್ವಾ ಅನ್ನೋ ನಿರಾಳತೆಯ ಭಾವ. ಆ ಕ್ಷಣಕ್ಕೆ ಅನುಭವವು ಎಷ್ಟೇ ಕಹಿಯಾಗಿ ಕಂಡರೂ ಅನಂತರದಲ್ಲಿ ಅದು ಕೇವಲ ನೆನಪು ಅಷ್ಟೇ.
ಇನ್ನು ನಮ್ಮ ಯಾವುದೋ ದುಃಖದ ಸಂದರ್ಭದಲ್ಲೂ ನಮ್ಮ ಮನಸ್ಸಿಗೆ ಖುಷಿ ಕೊಡೋದೂ, ಸಮಾಧಾನಪಡಿಸೋದೂ ಕೂಡಾ ಅಂದಿನ ಕಾಲದ ಅನುಭವದ ನೆನಪು. ಮಹಾನಗರಿಗಳಲ್ಲಿ ಇಷ್ಟಪಟ್ಟೋ, ಕಷ್ಟಪಟ್ಟೋ ಅಥವಾ ಯಾವುದೋ ಅನಿವಾರ್ಯತೆಗಳಿಗೆ ಒಳಗಾಗಿಯೋ ಬದುಕು ಸವೆಸುವ ಜನರಿಗೆ ಅವರ ಸುಂದರ ಬಾಲ್ಯದ ನೆನಪೇ ಹಿತವೆನಿಸಬಹುದು. ಪೇಟೆಯ ಆಧುನಿಕ ಯುಗದ ಮಕ್ಕಳ ಯಾಂತ್ರಿಕ ಬಾಲ್ಯವನ್ನು ನೋಡಿದಾಗ ಪರಿಸರ, ಸಾಹಿತ್ಯ ಅಂತೆಲ್ಲಾ ತನ್ನ ಬದುಕನ್ನೇ ಗಾಢವಾಗಿ ಪ್ರೀತಿಸುವ ಯುವಕನಿಗೆ ತನ್ನ ಬಾಲ್ಯದ ತುಂಟಾಟ, ಸವಿ, ಅನುಭವಗಳೆಲ್ಲಾ ನೆನಪಾಗಬಹುದು. ಕೇವಲ ಕ್ಲಾಸ್, ಹೋಂವರ್ಕ್ ಟ್ಯೂಷನ್‌ಗಳ ಹಂಗಿಲ್ಲದೆ, ತನ್ನ ಪ್ರೀತಿಯ ಊರಿನಲ್ಲಿ, ಗೆಳೆಯರೊಂದಿಗೆ ಮಣ್ಣಾಟವಾಡುತ್ತಾ, ಅಪ್ಪ-ಅಮ್ಮಂದಿರ ಪ್ರೀತಿಯ ಗದರುವಿಕೆಯಲ್ಲಿ ಮಿಂದೇಳುತ್ತಾ, ಅಜ್ಜ-ಅಜ್ಜಿಯರ ಕತೆಗಳಲ್ಲಿ ಖುಷಿ ಕಾಣುತ್ತಾ, ಅಕ್ಕ-ತಮ್ಮಂದಿರ ಸಂಗದಲ್ಲಿ ಕಳೆದ ಬಾಲ್ಯದ ಅಪೂರ್ವ, ಅಭೂತಪೂರ್ವ ಕ್ಷಣಗಳು ಮನದಾಳದಲೆಲ್ಲೋ ಕಾಡಬಹುದು. ಆ ಒಂದು ನೆನಪಿನಲ್ಲೇ ಆತ ತನ್ನ ಬಾಲ್ಯಕ್ಕೆ ಹೋಗಿಬಂದಿರುತ್ತಾನೆ. ಆ ಕ್ಷಣದ ಹುರುಪಿನಲ್ಲಿ ಅಮ್ಮನ ಕರೆಗೂ ಓಗೊಡದೆ ಭೋರ್ಗರೆಯುತ್ತಿರುವ ಮಳೆಯಲ್ಲಿ ನೆನೆದ ಪುಟ್ಟ ಹುಡುಗ ಒಂದು ವಾರ ಶೀತ, ಜ್ವರಗಳಿಂದ ಬಳಲಿದರೂ ಮುಂದೆಂದೋ ದೊಡ್ಡವನಾಗಿ ಅವನ ಮಗನಿಗೆ ಬುದ್ಧಿಮಾತನ್ನು ಹೇಳುವ ಸಂದರ್ಭದಲ್ಲಿ ತನ್ನ ಬಾಲ್ಯ ನೆನಪಾಗಿ ನಗು ತರಿಸಬಹುದು. ವಿಶಾಲ ಹೃದಯದ, ಸದ್ಭಾವನೆಯ ಪ್ರೇಮಿಯೊಬ್ಬನಿಗೆ ತನ್ನ ಹಳೆ ಗೆಳತಿಯು ಈಗ ಕೇವಲ ನೆನಪು ಎಂಬ ಯೋಚನೆಯೇ ಸಮಾಧಾನ ಕೊಡಬಹುದು.
ಅನುಭವ, ನೆನಪುಗಳೇ ಹಾಗೆ. ಒಂದಕ್ಕೊಂದು ಸದಾ ಬೆಸೆದುಕೊಂಡಿರುತ್ತವೆ. ಅನುಭವಗಳ ಅಲೆಯನ್ನು ನೆನಪೆಂಬ ದೋಣಿಯ ಮೂಲಕ ದಾಟುತ್ತಾ ಹೋದರೆ ಎಲ್ಲಾ ಪ್ರವಾಹಗಳಿಗೂ ಸೆಡ್ಡು ಹೊಡೆದು ಎದ್ದು ನಿಲ್ಲಲು ಸಾಧ್ಯ.
ಸುವರ್ಚಲಾ ಅಂಬೇಕರ್ ಬಿ. ಎಸ್.
ಪ್ರಥಮ ಎಂ.ಎಸ್. ಡಬ್ಲ್ಯು
ರೋಶನಿ ನಿಲಯ, ಮಂಗಳೂರು