ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಮಾವು-ಹಲಸು ಮೇಳದಲ್ಲಿ ಹಲಸನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಲಸಿಗೆ ದರ ನಿಗದಿಪಡಿಸಿದೆ.
ಸೋಮವಾರ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್ ಹಾಗೂ ಬೆಳೆಗಾರರ ಜತೆ ಈ ಕುರಿತು ಚರ್ಚೆ ನಡೆಸಿದ ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಅವರು, ಹಲಸು ಬೆಳೆಗಾರರು ನಿಗಮ ನಿಗದಿಪಡಿಸಿದ ದರದಲ್ಲಿಯೇ ಗ್ರಾಹಕರಿಗೆ ಹಲಸು ಮಾರಾಟ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ನಿಗದಿತ ದರ ಪಟ್ಟಿ: ಸುಮಾರು 3ರಿಂದ 5 ಕೆಜಿಯ ಹಲಸಿಗೆ 70ರಿಂದ 80 ರೂ.ಗಳು, 5ರಿಂದ 10 ಕೆಜಿಯ ಹಲಸಿಗೆ 150ರಿಂದ 200 ರೂ.ಗಳು ಮತ್ತು 10ಕ್ಕೂ ಹೆಚ್ಚು ಕೆಜಿ ತೂಗುವ ಹಲಸಿನ ಹಣ್ಣಿಗೆ 250ರಿಂದ 300 ರೂ.ಗಳಂತೆ ಮಾರಾಟ ಮಾಡಬೇಕು ಎಂದು ನಿಗಮ ದರ ನಿಗದಿಪಡಿಸಿದೆ.
ಜತೆಗೆ ಹಲಸಿನ ತೊಳೆಗಳನ್ನು ಮನಸಿಗೆ ಬಂದಂತೆ ಮಾರಾಟ ಮಾಡಬಾರದು ಎಂಬ ಕಾರಣಕ್ಕಾಗಿ ಒಂದು ಡಜನ್ ಸಣ್ಣ ಗಾತ್ರದ ತೊಳೆಗಳಿಗೆ 15 ರೂ.ಗಳು, ಮಧ್ಯಮ ಗಾತ್ರಕ್ಕೆ 25 ರೂ. ಮತ್ತು ದೊಡ್ಡ ಗಾತ್ರದ ಹಲಸಿನ ತೊಳೆಗಳಿಗೆ 30ರೂ.ಗಳನ್ನು ನಿಗದಿ ಮಾಡಲಾಗಿದೆ.
ಹಲಸಿನಲ್ಲಿ ವಿವಿಧ ತಳಿಗಳು ಇರುವುದರಿಂದ ಒಂದೊಂದಕ್ಕೆ ಒಂದೊಂದು ರೀತಿಯಲ್ಲಿ ದರ ನಿಗದಿ ಮಾಡುವುದು ಕಷ್ಟ. ಆದ್ದರಿಂದ ಹಣ್ಣಿನ ತಳಿಗಳ ಮೇಲೆ ಬೆಳೆಗಾರರು ದರ ನಿಗದಿಪಡಿಸಲು ಅವಕಾಶ ನೀಡಿದ್ದು, ನಿಗಮ ಸೂಚಿಸಿರುವ ನಿಗದಿತ ದರದೊಳಗಿನ ಬೆಲೆಯಲ್ಲಿಯೇ ಹಲಸಿನ ಹಣ್ಣು ಮಾರಾಟ ಮಾಡಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಸೂಚನೆ ನೀಡಿದ್ದಾರೆ.
ಕ್ರಮದ ಎಚ್ಚರಿಕೆ: ಒಂದೊಮ್ಮೆ ನಿಗಮದ ಈ ದರಪಟ್ಟಿಯನ್ನು ಉಲ್ಲಂ ಸಿ, ಗ್ರಾಹಕರಿಂದ ಅಧಿಕ ಹಣ ವಸೂಲಿ ಮಾಡುವುದು ಗಮನಕ್ಕೆ ಬಂದರೆ ಅಂಥ ವ್ಯಾಪಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನಿಗಮ ಎಚ್ಚರಿಸಿದೆ. ಇದರೊಂದಿಗೆ ಮೇಳದಲ್ಲಿ ಭಾಗವಹಿಸಲು ವ್ಯಾಪಾರಿಗಳಿಗೆ ನೀಡಿರುವ ಅವಕಾಶ ಹಿಂಪಡೆಯಲಾಗುವುದು.
ಈ ಕುರಿತು ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್ ಹಾಗೂ ಇತರ ಬೆಳೆಗಾರರೊಂದಿಗೆ ಚರ್ಚಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೇಳದಲ್ಲಿ ಮಳಿಗೆಗಳನ್ನು ಪಡೆದಿರುವವರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ನಿಗಮ ತಿಳಿಸಿದೆ.