Advertisement

ಬಂಡಾಯ ಎದ್ದವರನ್ನು ಉಚ್ಚಾಟಿಸಿ

06:05 AM Jan 18, 2019 | |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮರ್ಯಾದಾ ಪುರುಷೋತ್ತರಮರೆನಿಸಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದಲ್ಲಿ ಬಂಡಾಯವೆದ್ದವರನ್ನು ಉಚ್ಚಾಟನೆ ಮಾಡಿ ತಮ್ಮ ಮರ್ಯಾದೆ ಸಾಬೀತು ಪಡಿಸಲಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸವಾಲು ಹಾಕಿದರು.

Advertisement

ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಿಜೆಪಿಯವರು ಮಾನಗೆಟ್ಟವರು, ಮನೆ ಮುರುಕರು ಎಂದು ನಿಂದಿಸುವ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ವಿರುದ್ಧವೂ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಮರ್ಯಾದಾ ಪುರುಷೋತ್ತಮ ಎಂದರೆ ಅದು ಸಿದ್ದರಾಮಯ್ಯ.

ಹಾಗಾಗಿ ಅವರು ಹಾಗೂ ಅವರ ಪಕ್ಷಕ್ಕೆ ಮರ್ಯಾದೆ ಇದ್ದರೆ ಬಂಡಾಯವೆದ್ದವರನ್ನು ಉಚ್ಚಾಟಿಸಲಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಮರ್ಯಾದಸ್ಥರಾಗಿರುವುದರಿಂದಲೇ ಜನ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ನಂತರ ತಾವು ಮಾಡಿದ ಘನಂದಾರಿ ಕೆಲಸ ಬಹಿರಂಗವಾಗುವ ಭಯದಿಂದ ಮಾನ, ಮರ್ಯಾದೆ ಇಟ್ಟುಕೊಂಡೇ ತಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ ಜೆಡಿಎಸ್‌ಗೆ ಅಧಿಕಾರ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿಯಾಗಿದ್ದರೂ “ಕಾವೇರಿ’ಯಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ. ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿಲ್ಲದಿದ್ದರೂ ವಿಧಾನಸೌಧದಲ್ಲಿ ಅವರಿಗೊಂದು ಕಚೇರಿ ನೀಡಲಾಗಿದೆ. ಅಷ್ಟು ಪ್ರಭಾವ ಬೀರುವಷ್ಟು ಮರ್ಯಾದೆ ಅವರಿಗಿದೆ. ಅವರ ದೊಡ್ಡ ಮರ್ಯಾದೆಗಾಗಿಯೇ ಹ್ಯುಬ್ಲೋಟ್‌ ವಾಚ್‌ ನೀಡಿರಬಹುದು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಶಾಸಕರು ಗುರುಗ್ರಾಮದಲ್ಲಿ ಬರ ಅಧ್ಯಯನ ಮಾಡುತ್ತಿದ್ದಾರೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಹೌದು ರಾಜ್ಯದ ರಾಜಕೀಯ ಪರಿಸ್ಥಿತಿ, ಬೆಳವಣಿಗೆಯ ಅಧ್ಯಯನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಬರ ಅಧ್ಯಯನ ನಡೆಸುತ್ತಿರಬಹುದು. ಯಾವ ಸಚಿವರೂ ಬರ ನಿರ್ವಹಣೆಗೆ ಗಮನ ಹರಿಸಿಲ್ಲ. ಮಂಡ್ಯದ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ.

Advertisement

ಮಂಡ್ಯದಲ್ಲಿ ಹಾಲು ಉತ್ಪಾದಕರಿಗೆ ನೀಡುತ್ತಿರುವ ದರ ರಾಜ್ಯದಲ್ಲೇ ಅತಿ ಕಡಿಮೆ ಇದೆ. ಈ ಬಗ್ಗೆಯೂ ಮುಖ್ಯಮಂತ್ರಿಗಳು ಗಮನ ಹರಿಸುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು. 2010ರಲ್ಲಿ ಜಮೀರ್‌ ಅಹಮ್ಮದ್‌ ಡೈವರ್‌ ಆಗಿದ್ದರೆ, ಎಚ್‌.ಡಿ.ಕುಮಾರಸ್ವಾಮಿಯವರು ರೈಟ್‌, ಹೋಲ್ಡ್‌ ಆನ್‌ ಎನ್ನುವ ಕಂಡಕ್ಟರ್‌ ಆಗಿದ್ದರು. ಡಿ.ಕೆ.ಶಿವಕುಮಾರ್‌ ಅವರು ಟ್ರಾಫಿಕ್‌ ಕಂಟ್ರೋಲರ್‌ ಆಗಿದ್ದರು. ಅಂದು ಅವರೆಲ್ಲಾ ಮಾಡಿದ್ದ ಮರ್ಯಾದಸ್ಥ ರಾಜಕಾರಣವೇ ಎಂದು  ಸಿ.ಟಿ. ರವಿ ವ್ಯಂಗ್ಯವಾಡಿದರು.

ಬಂಡಾಯಕ್ಕೆ ತುಪ್ಪ ಸುರಿಯುತ್ತೇವೆ: ಬಂಡಾಯವೆದ್ದಿರುವುದು ನಿಮ್ಮ ಪಕ್ಷವರು. ನಿಮ್ಮ ಬಂಡಾಯಕ್ಕೆ ತುಪ್ಪ ಸುರಿಯುವುದೇ ನಮ್ಮ ಕೆಲಸ. ಹಿಂದೆ ನೀವು ಏನು ಮಾಡಿದ್ದೀರೋ ಅದನ್ನೇ ನಾವು ಮಾಡುತ್ತಿದ್ದೇವೆ. ನಾವೂ ರಾಜಕೀಯ ಮಾಡುತ್ತಿದ್ದೇವೆ. ಬಂಡಾಯ ಶಮನ ಮಾಡುವುದು ನಿಮ್ಮ ಕೆಲಸ. ಸರ್ಕಾರದ ಕಂಗೆಡಿಸಿದರೆ ಗೆಲುವು ಸುಲಭ. ಯಾವ ಕಾಂಗ್ರೆಸ್‌ ಶಾಸಕರು ಬಿಜೆಪಿಯೊಂದಿಗೆ ಹೋಗಿಲ್ಲ ಎನ್ನುತ್ತಾರೆ. ಆದರೂ ಬಿಜೆಪಿಯನ್ನು ದೂರುತ್ತಾರೆ ಎಂದು ವಾಗ್ಧಾಳಿ ನಡೆಸಿದರು.  

ಸಿದ್ದರಾಮಯ್ಯ ಸಹಾಯ ಸ್ಮರಣೀಯ: ಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಮೋಸದಿಂದ ಸೋಲಿಸಲಾಯಿತು ಎಂದು ಸಿದ್ದರಾಮಯ್ಯ ಹೇಳಿದ್ದರು. ಅವರ ಹೊಟ್ಟೆಯಲ್ಲಿ ಅಷ್ಟು ಉರಿ ಇದೆ. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಂಡರು. ಬಹಳಷ್ಟು ಮಂದಿ ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಅವರ ಸಹಾಯ, ಸಹಕಾರವನ್ನು ಸದಾ ಸ್ಮರಿಸಲಾಗುವುದು ಎಂದು ಸಿ.ಟಿ.ರವಿ ಮಾರ್ಮಿಕವಾಗಿ ನುಡಿದರು.  

Advertisement

Udayavani is now on Telegram. Click here to join our channel and stay updated with the latest news.

Next