Advertisement

ಸ್ಮಾರ್ಟ್‌ ಸಿಟಿಯಾಗಲಿ ಬೇಗ; ಉಳಿದವೂ ಕಾರ್ಯಗತಗೊಳ್ಳಲಿ

10:09 AM Jul 28, 2019 | Team Udayavani |

ಸಾಮಾನ್ಯವಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಬರುವುದೇ ಕಡಿಮೆ. ನಮ್ಮ ಅದೃಷ್ಟವೋ ಎಂಬಂತೆ ಎರಡೂ ಕಡೆ ಬಿಜೆಪಿ ಸರಕಾರ ಬಂದಿದೆ. ಜತೆಗೆ ಕರಾವಳಿಯ ಎರಡೂ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ 12 ಹಾಗೂ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಜನಪ್ರತಿನಿಧಿಗಳಿದ್ದಾರೆ. ಕಳೆದ ವರ್ಷ ರಾಜ್ಯ ಸರಕಾರದ ಸಹಕಾರವಿಲ್ಲ ಎನ್ನುತ್ತಿದ್ದರು ನಮ,¾ ಜನಪ್ರತಿನಿಧಿಗಳು. ಈಗ ಆ ಸಬೂಬು ಹೇಳದೇ ನನೆಗುದಿಗೆ ಬಿದ್ದಿರುವ ಜನರಿಗೆ ಪ್ರಯೋಜನಕಾರಿಯಾಗುವ ಹಲವು ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು. ಜನಪ್ರತಿನಿಧಿಗಳೂ ತಮ್ಮದೇ ಸರಕಾರದ ಬೆನ್ನುಬಿದ್ದು ಯೋಜನೆ ಕಾರ್ಯಗತಗೊಳಿಸುವ ಮೂಲಕ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬೇಕು.

Advertisement

ವಿಶ್ವದರ್ಜೆಯ ರೈಲ್ವೇ ನಿಲ್ದಾಣ
ಮಂಗಳೂರು ನಗರಕ್ಕೆ ವಿಶ್ವದರ್ಜೆಯ ರೈಲ್ವೇ ನಿಲ್ದಾಣ ಮಂಜೂರು ಆಗಿ ಬಹಳಷ್ಟು ವರ್ಷಗಳಾಗಿವೆ. ಆದರೆ ಜಾಗದ ಸಮಸ್ಯೆಯಿಂದ ನನೆಗುದಿಯಲ್ಲಿದೆ. ಸುಮಾರು 60 ಎಕ್ರೆ ಜಾಗ ಹೆಚ್ಚುವರಿಯಾಗಿ ಬೇಕಿದ್ದು, ರಾಜ್ಯ ಸರಕಾರ ನೀಡಬೇಕು.

ಪ್ಲಾಸ್ಟಿಕ್‌ ಪಾರ್ಕ್‌
ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಪ್ರಸ್ತಾವನೆಗೆ ಬಂದು 5 ವರ್ಷಗಳಾಗಿವೆ. ಕೇಂದ್ರ ಸರಕಾರ ಇದಕ್ಕೆ 1000 ಕೋ.ರೂ. ಅನುದಾನದ ಭರವಸೆ ನೀಡಿದೆ. ಇದು ಕಾರ್ಯಗತಗೊಂಡರೆ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ. ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಪೂರಕ ಪ್ರಕ್ರಿಯೆ ಆರಂಭಗೊಂಡಿತ್ತು. ಬೈಕಂಪಾಡಿ ಹಾಗೂ ಮುಡಿಪಿನಲ್ಲಿ ಜಾಗ ಸಮೀಕ್ಷೆ ನಡೆದಿದ್ದರೂ ಭೂಸ್ವಾಧೀನ ಆಗಿಲ್ಲ. ಈ ಯೋಜನೆ ತ್ವರಿತಗತಿಯಲ್ಲಿ ಜಾರಿಗೊಳ್ಳಬೇಕು.

ಸ್ಮಾರ್ಟ್‌ ಸಿಟಿ ಯೋಜನೆ
ಮಂಗಳೂರು ನಗರಕ್ಕೆ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ಪ್ರಾರಂಭಗೊಂಡು ಮೂರು ವರ್ಷಗಳಾದರೂ ಕಾಮಗಾರಿಗಳು ಮಂದಗತಿಯಲ್ಲೇ ಸಾಗಿವೆ. ಕೇಂದ್ರ-ರಾಜ್ಯ ಸರಕಾರದ ಸಹಭಾಗಿತ್ವದ ಈ ಯೋಜನೆಯ ಅನುಷ್ಠಾನಕ್ಕೆ ಈಗ ವೇಗ ದೊರಕಬೇಕು.

ರಾಷ್ಟ್ರೀಯ ಹೆದ್ದಾರಿ ಯೋಜನೆಗಳು
ಕಾರ್ಕಳ-ಕುಲಶೇಖರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಉನ್ನತೀಕರಣ, ಮಂಗಳೂರು ಬೈಪಾಸ್‌ ರಸ್ತೆ (ಬಿ.ಸಿ.ರೋಡ್‌- ಕೈಕಂಬ- ಕಟೀಲು- ಮೂಲ್ಕಿ, ರಸ್ತೆ ಮತ್ತು ತೊಕ್ಕೊಟ್ಟು- ಮುಡಿಪು- ಮೆಲ್ಕಾರ್‌ ರಸ್ತೆ ಚತುಷ್ಪಥವಾಗಿಸುವುದು), ಕಾರ್ಕಳ- ಮೂಡುಬಿದಿರೆ- ಬಿ.ಸಿ. ರೋಡ್‌ ರಸ್ತೆ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ 10,000 ಕೋ.ರೂ. ವೆಚ್ಚದ 23.6 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ, ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ, ಮಂಗಳೂರು-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಯೋಜನೆ, ಬಿ.ಸಿ. ರೋಡ್‌ -ಸುರತ್ಕಲ್‌ ರಾಷ್ಟ್ರೀಯ ಹೆದ್ದಾರಿ ಅಷ್ಟಪಥಗೊಳಿಸುವುದು, ಚಾರ್ಮಾಡಿ ರಸ್ತೆ ಅಭಿವೃದ್ಧಿ ಯೋಜನೆಗಳಿವೆ.

Advertisement

ಬಿ.ಸಿ.ರೋಡ್‌-ಅಡ್ಡಹೊಳೆ ಚತುಷ್ಪಥ
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್‌-ಅಡ್ಡಹೊಳೆ ಕಾಮಗಾರಿ ಆರಂಭಗೊಂಡು ಅರ್ಧಕ್ಕೇ ನಿಂತಿದೆ. ಈ ಹೆದ್ದಾರಿಯು ಕಲ್ಲಡ್ಕ ಪೇಟೆಯ ಮೂಲಕ ಸಾಗುತ್ತದೆಯೇ ಆಥವಾ ಬೈಪಾಸ್‌ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇಲ್ಲಿ ಭೂಸ್ವಾಧೀನದ ಪ್ರಕ್ರಿಯೆ ನಡೆಯಬೇಕಿದ್ದು, ಪರ ವಿರೋಧದ ಅಭಿಪ್ರಾಯ ಕೇಳಿಬಂದು ಕಾಮಗಾರಿ ನಿಂತಿತ್ತು. ಪ್ರಸ್ತುತ  ಹೆದ್ದಾರಿ ಕಾಮಗಾರಿ ಅನುಷ್ಠಾನದ ಜವಾಬ್ದಾರಿ ಕೇಂದ್ರದ್ದಾದರೂ ಭೂಸ್ವಾಧೀನ ಪ್ರಕ್ರಿಯೆ ರಾಜ್ಯ ಸರಕಾರದ ಹೊಣೆ. ಹೀಗಾಗಿ ಇದರ ಅನುಷ್ಟಾನಕ್ಕೆ ಎರಡೂ ಸರಕಾರಗಳು ಗಮನ ಕೊಡಬೇಕು.

ಇನ್ನಷ್ಟು ಯೋಜನೆಗಳು
·   ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ
·   ತೆಂಗು ಪಾರ್ಕ್‌
·   ವಿಶೇಷ ಕೃಷಿ ವಲಯ (ಎಸ್‌ಎಝಡ್‌)
·   ಐಟಿ ಪಾರ್ಕ್‌ ·   ಸ್ಮಾರ್ಟ್‌ಪೋರ್ಟ್‌
·   ಮಂಗಳೂರಿನಲ್ಲಿ ಕರಾವಳಿ ಆರ್ಥಿಕ ವಲಯ
(ಕೋಸ್ಟಲ್‌ ಎಕಾನಮಿಕ್‌ ಝೋನ್‌)
·   ಕುಳಾç ಮೀನುಗಾರಿಕಾ ಜೆಟ್ಟಿ ನಿರ್ಮಾಣ
·   ಮಂಗಳೂರು ರೈಲ್ವೇ ಪ್ರಾದೇಶಿಕ ಕಚೇರಿ
·   ಸಾಗರತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ವದೇಶಿ ದರ್ಶನ ಯೋಜನೆಗಳೆಲ್ಲಾ ಬಾಕಿ ಇವೆ. ಇವುಗಳ ಜಾರಿಗೆ ಎರಡೂ ಸರಕಾರಗಳು ಕೈ ಜೋಡಿಸಬೇಕು.

ಶೀಘ್ರಗತಿಯಲ್ಲಿ ಕಾರ್ಯರೂಪಕ್ಕೆ
ಕೇಂದ್ರದ ಜತೆಗ ಕರ್ನಾಟಕ ರಾಜ್ಯದಲ್ಲೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ಜಿಲ್ಲೆಯಲ್ಲಿ ಕೇಂದ್ರ ಸರಕಾರದ ವತಿಯಿಂದ ಈಗಾಗಲೇ ಅನುಷ್ಠಾನದಲ್ಲಿರುವ ಮತ್ತು ಪ್ರಸ್ತಾವನೆಯಲ್ಲಿರುವ ಯೋಜನೆಗಳಿಗೆ ವೇಗ ದೊರಕಲಿದೆ. ರೈಲ್ವೇ, ರಾಷ್ಟ್ರೀಯ ಹೆದ್ದಾರಿಗೆ  ಸಂಬಂಧಪಟ್ಟ ಯೋಜನೆಗಳು, ಎಸ್‌ಇಝಡ್‌, ಪ್ಲಾಸ್ಟಿಕ್‌ ಪಾರ್ಕ್‌ ಸೇರಿದಂತೆ ಹಲವಾರು ಯೋಜನೆಗಳು ಅನುಷ್ಠಾನ ಹಂತದಲ್ಲಿವೆ. ಆದರೆ ರಾಜ್ಯ ಸರಕಾರದ ವತಿಯಿಂದ ಸಹಕಾರವಿರಲಿಲ್ಲ. ಇನ್ನು ಅವೆಲ್ಲವೂ ಶೀಘ್ರಗತಿಯಲ್ಲಿ ಕಾರ್ಯರೂಪಕ್ಕೆ ಬರಲಿವೆ.
– ನಳಿನ್‌ ಕುಮಾರ್‌ ಕಟೀಲು,  ಸಂಸದರು, ದ.ಕನ್ನಡ ಲೋಕಸಭಾ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next