ಈಗಾಗಲೇ ತನ್ನ ಟ್ರೇಲರ್ ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ “ಮುಂದಿನ ನಿಲ್ದಾಣ’ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಇನ್ನು ಚಿತ್ರದಲ್ಲಿ ಪ್ರವೀಣ್ ತೇಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೇಲೆ ಪ್ರವೀಣ್ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ. “ನನ್ನ ಸಿನಿ ಕೆರಿಯರ್‌ನಲ್ಲಿ ಇಲ್ಲಿಯವರೆಗೆ ಮಾಡಿದ, ಸಿನಿಮಾಗಳಿಗಿಂತ ಇದೊಂದು ಖಂಡಿತ ವಿಭಿನ್ನ ಸಿನಿಮಾವಾಗಲಿದೆ.
ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳಲ್ಲಿ ಕಾಲೇಜ್ ಹುಡುಗನಾಗಿ, ಲವರ್ ಬಾಯ್ ಆಗಿ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಇದರಲ್ಲಿ ನನ್ನದು ಸಂಪೂರ್ಣ ವಿಭಿನ್ನ ಪಾತ್ರ. ತುಂಬ ಪ್ರಬುದ್ಧವಾಗಿರುವ, ಇಂದಿನ ಜನರೇಶನ್‌ನ ಜೀವನ ಶೈಲಿ, ಮಾನಸಿಕತೆ ಎಲ್ಲವನ್ನೂ ಪ್ರತಿನಿಧಿಸುವ ಪಾತ್ರ ಮಾಡಿದ್ದೇನೆ. ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನ ಗೆಟಪ್, ಮ್ಯಾನರಿಸಂ ಇದರಲ್ಲಿದೆ.
ಹಾಗಾಗಿ ಆಡಿಯನ್ಸ್‌ಗೆ ಚಿತ್ರ ಮತ್ತು ನನ್ನ ಪಾತ್ರ ಎರಡೂ ಇಷ್ಟವಾಗಲಿದೆ ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ಪ್ರವೀಣ್ ತೇಜ್. ಇನ್ನು “ಮುಂದಿನ ನಿಲ್ದಾಣ’ ಚಿತ್ರದಲ್ಲಿ ಪ್ರವೀಣ್ ತೇಜ್ ಅವರಿಗೆ ನಾಯಕಿಯಾಗಿ ರಾಧಿಕಾ ನಾರಾಯಣ್ ಮತ್ತು ಅನನ್ಯಾ ಕಶ್ಯಪ್ ಜೋಡಿಯಾಗಿದ್ದಾರೆ. ಹಿರಿಯ ನಟ ದತ್ತಣ್ಣ, ಅಜಯ್ ರಾಜ್, ದೀಕ್ಷಾ ಶರ್ಮ, ಶಂಕರ್ ಅಶ್ವಥ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಕಾರ್ಯವಿದೆ. ಚಿತ್ರಕ್ಕೆ ಏಳು ಜನ ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದ್ದಾರೆ. “ಕೋಸ್ಟರ್ ಬ್ರಿಜ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ವಿನಯ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ತೆರೆಗೆ ಬರೋದಕ್ಕೂ ಮುನ್ನವೇ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ “ಮುಂದಿನ ನಿಲ್ದಾಣ’ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಅನ್ನೋದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ.