Advertisement

ವಾರದಲ್ಲಿ ಮೂರು ದಿನ ಕಲಬುರಗಿ ವಿಮಾನ ಹುಬ್ಬಳ್ಳಿಗೆ ವಿಸ್ತರಣೆ

10:06 AM Dec 19, 2019 | Lakshmi GovindaRaj |

ಕಲಬುರಗಿ: ಕಲಬುರಗಿಯಿಂದ ಬೆಂಗಳೂರು ಮೂಲಕ ಹುಬ್ಬಳ್ಳಿಗೆ ಸ್ಟಾರ್‌ ಏರ್‌ ಸಂಸ್ಥೆ ವಾರದಲ್ಲಿ ಮೂರು ದಿನ ವಿಮಾನಯಾನ ಸೇವೆ ಒದಗಿಸಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನ.22ರಂದು ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಯಾದ ದಿನದಿಂದಲೂ ಬೆಂಗಳೂರು-ಕಲಬುರಗಿ ನಡುವೆ ಸ್ಟಾರ್‌ಏರ್‌ ಸಂಸ್ಥೆ ವಿಮಾನ ಹಾರಾಟ ಆರಂಭಿಸಿದೆ. ಪ್ರತಿ ರವಿವಾರ, ಸೋಮವಾರ ಹಾಗೂ ಶುಕ್ರವಾರ ಬೆಂಗಳೂರು- ಕಲಬುರಗಿ- ಬೆಂಗಳೂರು ಮಧ್ಯೆ 50 ಸೀಟುಗಳ ಸಾಮರ್ಥ್ಯದ ವಿಮಾನ ಹಾರಾಟ ನಡೆಸುತ್ತಿದೆ. ಅದೇ ದಿನದಂದು ಕಲಬುರಗಿಯಿಂದ ಬೆಂಗಳೂರು ಮಾರ್ಗವಾಗಿ ಹುಬ್ಬಳ್ಳಿಗೂ ಸ್ಟಾರ್‌ ಏರ್‌ ವಿಮಾನ ಸೇವೆ ಆರಂಭಿಸಿದೆ.

Advertisement

ನೇರ ಹುಬ್ಬಳ್ಳಿಗೆ ಟಿಕೆಟ್‌: ಕಲಬುರಗಿಯಿಂದ ಹುಬ್ಬಳ್ಳಿಗೆ ನೇರವಾಗಿ ವಿಮಾನ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದು. ಕಲಬುರಗಿ ವಿಮಾನ ನಿಲ್ದಾಣದಿಂದ ಸ್ಟಾರ್‌ ಏರ್‌ ವಿಮಾನ ಮಧ್ಯಾಹ್ನ ಬೆಂಗಳೂರಿಗೆ ಪ್ರಯಾಣಿಸುತ್ತಿದೆ. ಸುಮಾರು 50 ನಿಮಿಷದೊಳಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಮಾನ ತಲುಪುತ್ತದೆ. ಬೆಂಗಳೂರಿನಿಂದ 10 ನಿಮಿಷಗಳ ಬಳಿಕ ಅದೇ ವಿಮಾನ ಹುಬ್ಬಳ್ಳಿಗೆ ಹಾರುತ್ತದೆ. ಇದರಿಂದ ಕಲಬುರಗಿಯಿಂದ ಹುಬ್ಬಳ್ಳಿಗೆ ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರು ಬೆಂಗಳೂರಿನಲ್ಲಿ ಇಳಿಯುವ ಅವಶ್ಯಕತೆ ಬರುವುದಿಲ್ಲ. ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲು ಪ್ರಯಾಣಿಕರು ಇದೇ ವಿಮಾನಕ್ಕೆ ಹತ್ತುತ್ತಾರೆ ಎನ್ನುತ್ತಾರೆ ಸ್ಟಾರ್‌ ಏರ್‌ ವಿಮಾನಯಾನ ಸಂಸ್ಥೆ ಅಧಿಕಾರಿಗಳು.

ಉಡಾನ್‌ ಅನ್ವಯ ಆಗಲ್ಲ: ಸಾಮಾನ್ಯ ನಾಗರಿಕರಿಗೂ ವಿಮಾನಯಾನ ಸೇವೆ ದೊರಕಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿ ಮಾಡಿರುವ ಉಡಾನ್‌ (ಉಡೇ ದೇಶಕಾ ಆಮ್‌ ನಾಗರಿಕ್‌) ಯೋಜನೆ ಕಲಬುರಗಿ ಮತ್ತು ಹುಬ್ಬಳ್ಳಿ ಯಾನಕ್ಕೆ ಅನ್ವಯವಾಗಲ್ಲ. ಆರಂಭದಲ್ಲಿ ಟಿಕೆಟ್‌ ಬುಕ್‌ ಮಾಡಿದ ವಿಮಾನದ ಶೇ.50 ಜನರಿಗೆ ಉಡಾನ್‌ ಯೋಜನೆಯಡಿ ಟಿಕೆಟ್‌ ದರದ ವಿನಾಯಿತಿ ಸಿಗುತ್ತದೆ. ಕಲಬುರಗಿ-ಬೆಂಗಳೂರು ಟಿಕೆಟ್‌ಗೆ ಸರ್ಕಾರದ ಟಿಕೆಟ್‌ ದರ 2850 ರೂ. ಇದೆ.

ಆದರೆ, ಸದ್ಯ ಕಲಬುರಗಿಯಿಂದ ಹುಬ್ಬಳಿಗೆ ವಿಮಾನ ಹಾರಾಟ ಆರಂಭಿಸಿರುವ ಸ್ಟಾರ್‌ ಏರ್‌ ಸಂಸ್ಥೆ ಬೆಂಗಳೂರು- ಹುಬ್ಬಳ್ಳಿ ನಡುವಿನ ವಿಮಾನಯಾನ ಸೇವೆ ಉಡಾನ್‌ ಯೋಜನೆಗೆ ಒಳಪಟ್ಟಿಲ್ಲ. ಇದರಿಂದ ಕಲಬುರಗಿಯಿಂದ ಮೊದಲ ಟಿಕೆಟ್‌ ಬುಕ್‌ ಮಾಡಿದರೂ ಬೆಂಗಳೂರಿನವರೆಗೆ ಮಾತ್ರ ವಿನಾಯ್ತಿ ದರದಲ್ಲಿ ಟಿಕೆಟ್‌ ಲಭ್ಯವಾಗುತ್ತಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ವಾಣಿಜ್ಯ ದರದಲ್ಲಿ ಟಿಕೆಟ್‌ ದೊರೆಯುತ್ತದೆ. ಟಿಕೆಟ್‌ ಬುಕ್ಕಿಂಗ್‌ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ ಟಿಕೆಟ್‌ ದರವೂ ಏರುತ್ತಲೇ ಹೋಗುತ್ತಿದೆ.

ಹುಬ್ಬಳ್ಳಿಗೂ ಬೇಡಿಕೆ: ಸದ್ಯ ಕಲಬುರಗಿ ಹಾಗೂ ಬೆಂಗಳೂರು ಮಧ್ಯೆ ವಾರದ 3 ದಿನ ಹಾರಾಟ ನಡೆಸುತ್ತಿರುವ ಸ್ಟಾರ್‌ ಏರ್‌ ವಿಮಾನ ಬಹುತೇಕ ಭರ್ತಿಯಾಗುತ್ತಿದೆ. 50 ಸೀಟುಗಳಲ್ಲಿ ಕನಿಷ್ಠ 45 ಸೀಟು (ಶೇ.90ರಿಂದ 95) ಬುಕ್‌ ಆಗಿರುತ್ತವೆ. ಇದರಲ್ಲಿ ಕಲಬುರಗಿಯಿಂದ ಹುಬ್ಬಳ್ಳಿಗೆ ಹೋಗುವವರು ಕನಿಷ್ಠ 12ರಿಂದ 18 ಜನ ಇರುತ್ತಾರೆ. ಹಾಗೆಯೇ ಹುಬ್ಬಳ್ಳಿಯಿಂದಲೂ ಕಲಬುರಗಿಗೆ ಬರುವವರ ಸಂಖ್ಯೆ ಸರಿ ಸುಮಾರು 15 ಜನ ಇದ್ದೇ ಇರುತ್ತಾರೆ ಎಂದು ಸ್ಟಾರ್‌ಏರ್‌ನ ಮಾರ್ಕೆಟಿಂಗ್‌ ಮುಖ್ಯಸ್ಥ ರಾಜ್‌ ಹೇಳುತ್ತಾರೆ.

Advertisement

ಅಲಯನ್ಸ್‌ಗೆ ಸಮಯ ನಿಗದಿ: ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ಅಲಯನ್ಸ್‌ ವಿಮಾನಯಾನ ಸಂಸ್ಥೆ ವಿಮಾನ ಹಾರಾಟಕ್ಕೆ ಸಜ್ಜಾಗಿದ್ದು, ವಿಮಾನ ಹಾರಾಟಕ್ಕೂ ಸಮಯ ನಿಗದಿಯಾಗಿದೆ. ಆದರೆ, ಆದರೆ, ದಿನ ನಿಗದಿಯಾಗಿಲ್ಲ ಎನ್ನಲಾಗುತ್ತಿದೆ. ಸ್ಟಾರ್‌ಏರ್‌ ವಿಮಾನ ಭರ್ತಿ ಯಾಗಿ ಹಾರಾಟ ನಡೆಸುತ್ತಿದೆ. ಈ ವಿಮಾನ ಹಾರಾಟ ಸಂದರ್ಭದಲ್ಲೇ ಅಲಯನ್ಸ್‌ ವಿಮಾನವೂ ಸೇವೆ ಒದಗಿಸ ಬೇಕಿತ್ತು. ಅದು ತೀರಾ ವಿಳಂಬವಾ ಗಿದೆ. ಬೆಂಗಳೂರಿನಿಂದ ಕಲಬುರಗಿಗೆ ವಿಮಾನ ಹಾರಲು ಬೆಳಗ್ಗೆ 10 ಗಂಟೆಗೆ ಸಮಯ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಲಬುರಗಿ ಮತ್ತು ಹುಬ್ಬಳ್ಳಿ ಮಾರ್ಗ ಉಡಾನ್‌ ಯೋಜನೆಗೆ ಒಳಪಡದೇ ಇರುವುದರಿಂದ ಪ್ರಯಾಣ ದರ ದುಬಾರಿ ಆಗಲಿದೆ. ಹೀಗಾಗಿ ಹುಬ್ಬಳ್ಳಿ-ಕಲಬುರಗಿ- ಹೈದ್ರಾಬಾದ್‌ ಮಾರ್ಗದಲ್ಲಿ ವಿಮಾನ ಹಾರಾಟ ಆರಂಭಿಸಬೇಕು. ಕರಾವಳಿ ಭಾಗಕ್ಕೂ ವಿಮಾನ ಬೇಡಿಕೆ ಇದ್ದು ಕಲಬುರಗಿ- ಹುಬ್ಬಳ್ಳಿ- ಮಂಗಳೂರಿಗೂ ವಿಮಾನ ಆರಂಭಿಸಿದರೆ ಉತ್ತಮ.
-ಅಮರನಾಥ ಪಾಟೀಲ, ಎಚ್‌ಕೆಸಿಸಿಐ ಅಧ್ಯಕ್ಷ

ಕಲಬುರಗಿ-ಬೆಂಗಳೂರು ಮಾರ್ಗಕ್ಕೆ ಆರಂಭದಿಂದಲೂ ಪ್ರಯಾಣಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಈಗ ಹುಬ್ಬಳ್ಳಿಗೂ ಪ್ರಯಾಣಿಕರಿಂದ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ. ವಿಮಾನದ ಸಮಯ ಬದಲಾವಣೆಗೆ ಬೇಡಿಕೆ ಇದ್ದು ಕೇಂದ್ರದ ಗಮನ ಸೆಳೆದು ಸಮಯ ಬದಲಾವಣೆಗೆ ಒತ್ತು ನೀಡಲಾಗುವುದು.
-ರಾಜ್‌, ಸ್ಟಾರ್‌ಏರ್‌ ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥ

* ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next