Advertisement

ಚೇತರಿಕೆಯೇ ಹೆಚ್ಚು : ಮುಖ್ಯಮಂತ್ರಿಗಳ ಜೊತೆಗಿನ 2ನೇ ದಿನದ ಸಭೆಯಲ್ಲಿ ಪ್ರಧಾನಿ ಮೋದಿ ಉವಾಚ

02:26 AM Jun 18, 2020 | Hari Prasad |

ಹೊಸದಿಲ್ಲಿ: 20 ಯೋಧರ ವೀರಮರಣದ ನೋವಿನ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಜತೆಗೆ 2 ದಿನಗಳ ವರ್ಚುವಲ್‌ ಸಭೆಗೆ ಸಾಕ್ಷಿಯಾಗಿ­ದ್ದರು.

Advertisement

‘ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳಿ­ಗಿಂತ ಚೇತರಿಸಿಕೊಂಡವರ ಸಂಖ್ಯೆಯೇ ಅಧಿಕವಿದೆ. ಕೆಲವೇ ಕೆಲವು ರೋಗಿಗಳು ಮಾತ್ರವೇ ಐಸಿಯು, ವೆಂಟಿಲೇಟರ್‌ನ ಆರೈಕೆಯಲ್ಲಿದ್ದಾರೆ’ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಅನ್‌ಲಾಕ್‌ 1.0 ನಂತರ ತೆಗೆದುಕೊಳ್ಳುವ ನಿರ್ಧಾ­ರಗಳ ಸಂಬಂಧ ಪ್ರಧಾನಿ ಕರೆದಿದ್ದ 2ನೇ ದಿನದ ಸಭೆಯಲ್ಲಿ 14 ರಾಜ್ಯಗಳ ಸಿಎಂಗಳು ಪಾಲ್ಗೊಂಡಿದ್ದರು.

ಜನರ ತಾಳ್ಮೆ, ರಾಜ್ಯ ಸರಕಾರಗಳ ಶ್ರಮ, ಕೋವಿಡ್ ಯೋಧರ ಸಮರ್ಪಣಾ ಭಾವಕ್ಕೆ ಪ್ರಧಾನಿ ಮೆಚ್ಚುಗೆ ಸೂಚಿಸಿದರು.

ಹೆಚ್ಚೆಚ್ಚು ಟೆಸ್ಟ್‌ ನಡೆಸಿ: ‘ಆರೋಗ್ಯ ಮೂಲ ಸೌಕರ್ಯ­ಗಳನ್ನು ಹೆಚ್ಚಿಸುವುದು ನಮ್ಮ ಮೊದಲ ಆದ್ಯತೆಯಾ­ಗಬೇಕು. ಪ್ರತಿ ಕೋವಿಡ್ ರೋಗಿಗೆ ಸರಿಯಾದ ಚಿಕಿತ್ಸೆ ದೊರೆತಾಗಲಷ್ಟೇ ಇದು ಸಾಧ್ಯ. ನಾವು ಹೆಚ್ಚು ಕೋವಿಡ್ ಟೆಸ್ಟ್‌ಗಳನ್ನು ನಡೆಸಬೇಕಿದೆ. ಪರೀಕ್ಷೆ ನಡೆಸಿದಷ್ಟು ಸೋಂಕಿತರನ್ನು ಪ್ರತ್ಯೇಕಿಸುವುದು ಸುಲಭ’ ಎಂದರು.

Advertisement

‘ಪಿಪಿಇ’ ಸ್ವಾವಲಂಬಿ: ‘3 ತಿಂಗಳ ಹಿಂದೆ ಪ್ರಪಂಚದಾ­ದ್ಯಂತ ಪಿಪಿಇ ಮತ್ತು ಡಯಗ್ನಾಸ್ಟಿಕ್‌ ಕಿಟ್‌ಗಳ ಕೊರತೆ ಇತ್ತು. ಭಾರತ ಸಂಪೂರ್ಣವಾಗಿ ಆಮದಿನ ಮೇಲೆ ಅವಲಂಬಿತವಾಗಿದ್ದರಿಂದ ಆರಂಭದಲ್ಲಿ ಸೀಮಿತ ಸಂಗ್ರಹ ಸಾಧ್ಯವಾಗಿತ್ತು. ಆದರೆ ಈಗ 1 ಕೋಟಿಗೂ ಹೆಚ್ಚು ಪಿಪಿಇ ಕಿಟ್‌, ಅಷ್ಟೇ ಸಂಖ್ಯೆಯ ಎನ್‌-95 ಮಾಸ್ಕ್ ಪ್ರತಿ ರಾಜ್ಯಗಳನ್ನು ತಲುಪಿವೆ’ ಎಂದು ಮಾಹಿತಿ ನೀಡಿದರು.

‘ದೇಶಾದ್ಯಂತ 900ಕ್ಕೂ ಅಧಿಕ ಕೋವಿಡ್ ಟೆಸ್ಟ್‌ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಲಕ್ಷಾಂತರ ಕೋವಿಡ್ ವಿಶೇಷ ಹಾಸಿಗೆಗಳನ್ನು ಪೂರೈಸಲಾಗಿದೆ. ಸಹಸ್ರಾರು ಕ್ವಾರಂಟೈನ್‌, ಐಸೋಲೇಷನ್‌ ಕೇಂದ್ರಗಳಲ್ಲಿ ಆಮ್ಲಜನಕ ಪೂರೈಕೆ ಸಮರ್ಪಕವಾಗಿ ನಡೆಯುತ್ತಿದೆ’ ಎಂದು ವಿವರಿಸಿದರು.

ಭಯ ತೊಲಗಿಸಿ: “ಕೋವಿಡ್ ಹೋರಾಟದಲ್ಲಿ ಒಂದು ಭಾವನಾತ್ಮಕ ಅಂಶದ ಸವಾಲೂ ನಮ್ಮ ಮುಂದಿದೆ. ಜನರಲ್ಲಿ ಸೋಂಕಿನ ಭಯ ಹೋಗಲಾ­ಡಿ­ಸುವ ಪ್ರಯತ್ನ­ಗಳನ್ನು ನಾವು ಮಾಡಬೇಕಿದೆ. ಚೇತರಿಸಿ­ಕೊಳ್ಳುವರ ಸಂಖ್ಯೆ ಹೆಚ್ಚಿರುವುದರಿಂದ ಕೋವಿಡ್ ಸೋಂಕಿತರು ಭಯಪಡುವ ಅಗತ್ಯವಿಲ್ಲ’ ಎಂದು ಧೈರ್ಯ ತುಂಬಿ­ದರು. ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪಾಲ್ಗೊಂಡಿದ್ದರು.

24 ಗಂಟೆಯಲ್ಲಿ 2,000ಸಾವು
ದೇಶದಲ್ಲಿ ಕೋವಿಡ್ ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಮಂಗಳವಾರ ಬೆಳಗ್ಗೆ 8 ರಿಂದ ಬುಧವಾರ ಬೆಳಗ್ಗೆ 8 ಗಂಟೆಯವರೆಗಿನ ಅವಧಿಯಲ್ಲಿ 2,003 ಸಾವು ದೃಢಪಟ್ಟಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿಯೇ ಹೆಚ್ಚಿನ ಸಾವು ಸಂಭವಿಸಿದೆ. ಎರಡನೇ ಸ್ಥಾನದಲ್ಲಿ ದಿಲ್ಲಿ ಇದೆ. ಜತೆಗೆ 10,974 ಹೊಸ ಸೋಂಕುಗಳು ದೃಢಪಟ್ಟಿವೆೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸತತ ಎಂಟನೇ ದಿನ ಒಟ್ಟು ಸೋಂಕಿತರ ಸಂಖ್ಯೆ 10 ಸಾವಿರಕ್ಕಿಂತ ಹೆಚ್ಚಾಗಿದೆ. ಇದರ ನಡುವೆಯೂ ಗುಣಮುಖ­ರಾಗುವ ಪ್ರಮಾಣ ಶೇ.52.79 ಆಗಿದೆ.

ಮಮತಾ ಬ್ಯಾನರ್ಜಿ ಕುಂಟುನೆಪ
ಇನ್ಯಾವುದೋ ಸಮಿತಿಯ ಸಭೆಗೆ ಅಧ್ಯಕ್ಷತೆ ವಹಿಸಬೇಕೆಂಬ ನೆಪವೊಡ್ಡಿ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಬುಧವಾರದ ಸಭೆಗೆ ಗೈರಾಗಿದ್ದರು. ಸಭೆಗೆ ಹಾಜರಾ­ಗಲು ಮಮತಾ ಬ್ಯಾನರ್ಜಿ ಅವರಿಗೆ ಸಮಯವಿರಲಿಲ್ಲ ಎಂದು ರಾಜ್ಯ ಸಚಿವಾಲ­ಯದ ಮೂಲಗಳು ತಿಳಿಸಿವೆ. ಮಮತಾ ಬದಲಾಗಿ ರಾಜ್ಯ ಸರಕಾರದ ಹಿರಿಯ ಅಧಿಕಾರಿಯೊಬ್ಬರನ್ನು ಸಭೆಗೆ ಕಳಿಸಲಾಗಿತ್ತು.

ಪಾಲ್ಗೊಂಡಿದ್ದ ರಾಜ್ಯಗಳು
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್‌, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ­ಪ್ರದೇಶ, ಬಿಹಾರ, ಆಂಧ್ರಪ್ರದೇಶ, ಹರ್ಯಾಣ, ತೆಲಂಗಾಣ, ಒಡಿಶಾ- ಈ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಜನರಲ್‌ ಭಾಗಿಯಾಗಿದ್ದರು. ಈ ರಾಜ್ಯಗಳು ಭಾರತದ ಒಟ್ಟು ಶೇ.85 ಸೋಂಕಿನ ಪ್ರಕರಣಗಳನ್ನು ಹೊಂದಿವೆ.

ಮೋದಿ ಹೇಳಿದ್ದೇನು?
– ನಿರ್ಬಂಧ ಸಡಿಲಿಸಿದಷ್ಟು ಆರ್ಥಿಕ ಚಟುವಟಿಕೆಗಳು ಪುನರುಜ್ಜೀವ ಪಡೆಯುತ್ತಿವೆ.

– ಮೂಲಸೌಕರ್ಯ ಮತ್ತು ನಿರ್ಮಾಣ ಸಂಬಂಧಿತ ಯೋಜನೆಗಳನ್ನು ಹೆಚ್ಚಿಸಿ.

– ವಲಸೆ ಕಾರ್ಮಿಕರ ಸಮಸ್ಯೆಗಳನ್ನು ನಿರ್ವಹಿಸುವ ಅಗತ್ಯವಿದೆ.

– ಹೆಚ್ಚೆಚ್ಚು ಕೋವಿಡ್ ಟೆಸ್ಟ್‌ ಗಳನ್ನು ನಡೆಸಿದರೆ ಭವಿಷ್ಯದ ಅಪಾಯ ತಪ್ಪಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next