ದೇವನಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಬೇಕು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ಸುರಭಿ ದ್ವಿವೇದಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ವಂಚಿಸುತ್ತಿದೆ. ಚುನಾವಣೆಗೂ ಮುನ್ನಾ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದು, ಇದೀಗ ಎಲ್ಲೆಡೆ ಇರುವ ಉದ್ಯೋಗಗಳು ಹೋಗುತ್ತಿವೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ. ದೇಶದ ಆರ್ಥಿಕ ಸ್ಥಿತಿ, ಜಿಡಿಪಿ ಕುಸಿತವಾಗಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿ, ಜಿಲ್ಲೆಯ 04 ತಾಲೂಕುಗಳಲ್ಲಿ ಯುವ ಕಾಂಗ್ರೆಸ್ ಬಲವರ್ಧನೆ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಗ್ರಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು. ಯುವಕರು ಉದ್ಯೋಗಗಳಿಲ್ಲದೇ ಬೀದಿಗಿಳಿಯುವಂತೆ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.
ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ, ಜಿಲ್ಲಾ ಉಸ್ತುವಾರಿ ತ್ರಿಭುವನ್, ಜಿಲ್ಲಾ ಉಪಾಧ್ಯಕ್ಷ ರೋಹಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಘ ವೇಂದ್ರ ಪ್ರಸಾದ್, ಅರ್ಜುನ್, ರಾಘವೇಂದ್ರ, ಸಂದೀಪ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಆರ್ ಸುಮಂತ್, ಉಪಾಧ್ಯಕ್ಷ ಗಂಗೂಲಿ ಇದ್ದರು.