ಭೋಪಾಲ್: ಬುಡಕಟ್ಟು ಸಮುದಾಯದ ಕಾರ್ಮಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ವರದಿಯಾಗಿದೆ. ಅಲ್ಲದೇ, ವ್ಯಕ್ತಿಯ ಈ ಅನಾಗರಿಕ ವರ್ತನೆಯ ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು , ಘಟನೆ ಬಗ್ಗೆ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.
ಪ್ರವೇಶ್ ಶುಕ್ಲಾ ಎಂಬಾತನು ಬುಡಕಟ್ಟು ಕಾರ್ಮಿಕರಾದ ಪಲೇಕೋಲ್ ಎಂಬವರ ಮೇಲೆ ಮೂತ್ರ ವಿರ್ಸರ್ಜಿಸಿ, ಅದನ್ನು ವಿಡಿಯೋ ಕೂಡ ಮಾಡಿದ್ದ. 6 ದಿನಗಳ ಹಿಂದಿನ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೂ ಬಂದಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಕೇಸು ದಾಖಲಿಸಲು ಸಿಎಂ ಪೊಲೀಸರಿಗೆ ಆದೇಶಿಸಿದ್ದಾರೆ.
ಈ ಬಗ್ಗೆ ಎಚ್ಚೆತ್ತುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರವೇಶ್ ಶುಕ್ಲಾನನ್ನು ಬಂಧಿಸಿದ್ದಾರೆ. ಕೃತ್ಯವೆಸಗಿರುವ ವ್ಯಕ್ತಿ ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಅವರ ಆಪ್ತ ಎಂದು ರಾಜ್ಯದ ಪ್ರತಿಪಕ್ಷಗಳು ಆರೋಪಿಸಿವೆ. ಇದಲ್ಲದೆ ಕೇದಾರ್ ಶುಕ್ಲಾ ಆರೋಪಿ ಜೊತೆಗಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಎಂದು ಬಿಜೆಪಿ ಹೇಳಿದೆ.
ಆದರೆ, ಪ್ರವೇಶ್ ಶುಕ್ಲಾ ಅವರ ತಂದೆ ರಮಾಕಾಂತ್ ಶುಕ್ಲಾ ತನ್ನ ಮಗ ಕೇದಾರ್ ಶುಕ್ಲಾ ಅವರ ಪ್ರತಿನಿಧಿ ಎಂದು ಹೇಳಿದ್ದಾರೆ. ‘‘ಅವರು ಬಿಜೆಪಿ ಶಾಸಕರ ಪ್ರತಿನಿಧಿಯಾಗಿರುವುದರಿಂದ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ” ಎಂದಿದ್ದಾರೆ.