ಬೆಳಗಾವಿ: ಚಿತ್ರಕಲೆಗೆ ಮತ್ತಷ್ಟು ಪ್ರಾಮುಖ್ಯತೆ ಸಿಗಲಿ ಎಂಬ ಪರಿಕಲ್ಪನೆಯಡಿ ಅಸ್ತಿತ್ವಕ್ಕೆ ಬರುತ್ತಿರುವ ಗುಲ್‌ಮೊಹರ್ ಬಾಗ್ ಬಳಗದ ವತಿಯಿಂದ ಅ.13ರಿಂದ 16ರ ವರೆಗೆ ನಗರದ ಗೋವಾವೇಸ್ ವೃತ್ತ ಬಳಿಯ ರಾಯಲ್ ಎನ್ ಫೀಲ್ಡ್ ಶೋರೂಂನಲ್ಲಿ ವಿವಿಧ ಕಲಾವಿದರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಈ ಕುರಿತು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಂಗಕರ್ಮಿ, ಚಿತ್ರ ಕಲಾವಿದ ಡಾ| ಡಿ.ಎಸ್. ಚೌಗಲೆ, ನಗರದಲ್ಲಿ ಬಳಗ ಅಸ್ತಿತ್ವಕ್ಕೆ ಬರಲಿದ್ದು, ಅಂದೇ ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ಬಳಗದ ಕಲಾಪ್ರದರ್ಶನವನ್ನು ನಗರ ಪೊಲೀಸ್ ಆಯುಕ್ತ ಡಾ| ಡಿ.ಸಿ. ರಾಜಪ್ಪ ಉದ್ಘಾಟಿಸುವರು ಎಂದು ತಿಳಿಸಿದರು.
ಚಿತ್ರಕಲೆಯತ್ತ ಜನರ ಒಲವು ಹಾಗೂ ಆಸಕ್ತಿ ಹೆಚ್ಚಾಗಲಿ ಎಂಬ ಉದ್ದೇಶ ಇಟ್ಟುಕೊಂಡು ಬಳಗ ಸ್ಥಾಪಿಸಲಾಗಿದೆ. ಗುಲ್‌ಮೊಹರ್ ಬಾಗ್ ನಲ್ಲಿ ಸದ್ಯ 25 ಕಲಾವಿದರಿದ್ದು, ವಿವಿಧ ಕಲಾ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ನಮ್ಮದಾಗಿದ್ದು, ಕಲಾ ಪ್ರದರ್ಶನ, ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ನಗರದಲ್ಲಿ ಅತ್ಯಾಧುನಿಕ ಆರ್ಟ್ ಗ್ಯಾಲರಿ ನಿರ್ಮಿಸಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದಾಗಿದೆ. ಆದರೆ ಇನ್ನೂವರೆಗೆ ಸರಕಾರ ಇದಕ್ಕೆ ಸ್ಪಂದಿಸಿಲ್ಲ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಮಾಟ್5ರ ಸಿಟಿ ಯೋಜನೆಯಡಿ ಗ್ಯಾಲರಿ ನಿರ್ಮಿಸಬೇಕೆಂದು ಮನವಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸರಕಾರದ ಗಮನಕ್ಕೂ ತರಲಾಗುವುದು ಎಂದು ಚೌಗಲೆ ಹೇಳಿದರು.
ಗುಲ್‌ಮೊಹರಾºಗ್‌ನಲ್ಲಿ ಚಂದ್ರಕಾಂತ ಕುಸನೂರ, ಅಜಿತ ಔರಾದಕರ, ಅನಿತಾ ಬೆಳಗಾಂವಕರ, ಬಾಳು ಸದಲಗೆ, ಭರತ್ ಜಗತಾಪ್, ಡಿ.ಎಸ್. ಚೌಗಲೆ, ಅಶೊಕ ಓಲ್ಕರ, ಸಿ.ಎ. ರಂಗನೇಕಾರ, ಚಂದನಕುಮಾರ ಡೇ, ಮಹೇಶ ಹೊಂಗುಲೆ, ಜ್ಯೋತಿ ಶರದ್, ಕಾಮಕರ ದತ್ತ, ಕೀರ್ತಿಲತಾ ಗಣಾಚಾರಿ, ಮೀನಾಕ್ಷಿ ಸದಲಗೆ, ಜೆ.ಡಿ. ಸುತಾರ, ಪ್ರವೀಣ ಅಂಗಡಿ, ಪ್ರೀತಿ ಪಾವಟೆ, ಸಚಿನ ಉಪಾಧ್ಯೆ, ಶಿಲ್ಪಾ ಖಡಕಬಾವಿ, ಶಿರೀಷ ದೇಶಪಾಂಡೆ, ಶ್ರೀಕಾಂತ ಕುಮುಲೆ, ಸುಶೀಲ ತರಬರ, ವಿಶ್ವನಾಥ ಗುಗ್ಗರಿ, ವೈಶಾಲಿ ಮರಾಠೆ ಅವರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಹೇಳಿದರು. ಬಳಗದ ಚಂದ್ರಕಾಂತ ಕುಸನೂರ, ಶಿರೀಷ ದೇಶಪಾಂಡೆ, ಕೀರ್ತಿ ಸುರಂಜನ್ ಸುದ್ದಿಗೋಷ್ಠಿಯಲ್ಲಿದ್ದರು.
ಕಲಾವಿದರ ಸಂಘಟನೆ ಮಾಡಬೇಕೆಂಬ ಅನೇಕ ವರ್ಷಗಳಿಂದ ಬೆಳಗಾವಿಗರ ಕನಸಾಗಿತ್ತು. ಈಗ ಸದಸ್ಯ ಅದು ಈಡೇರಿದೆ. ಸಾರ್ವಜನಿಕರು ಕಲಾ ಪ್ರದರ್ಶನಗಳನ್ನು ಆಸ್ವಾದಿಸುವ ಮೂಲಕ ಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು.
ಡಾ| ಡಿ.ಎಸ್. ಚೌಗಲೆ,
ಚಿತ್ರ ಕಲಾವಿದ