ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಶೇ.5ರಷ್ಟು ಆಸ್ತಿ ತೆರಿಗೆ ವಿನಾಯಿತಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸದೇ ಇರಲು ಬಿಬಿಎಂಪಿ ತೀರ್ಮಾನಿಸಿದ್ದು, ಏ.30ರೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಾತ್ರ ವಿನಾಯಿತಿ ದೊರೆಯಲಿದೆ.
2019-20ನೇ ಸಾಲಿನಲ್ಲಿ 4000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಹೊಂದಿದೆ. ಆ ಹಿನ್ನೆಲೆಯಲ್ಲಿ ಒಂದು ತಿಂಗಳು ಮಾತ್ರವೇ ಆಸ್ತಿ ಮಾಲೀಕರಿಗೆ ಶೇ.5ರಷ್ಟು ತೆರಿಗೆ ವಿನಾಯಿತಿ ನೀಡಿ, ಯಾವುದೇ ಕಾರಣಕ್ಕೂ ವಿನಾಯಿತಿ ಅವಧಿ ವಿಸ್ತರಿಸದಿರಲು ತೀರ್ಮಾನ ಕೈಗೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಹಾಗೂ ಬೃಹತ್ ಆಸ್ತಿಗಳ ಟೋಟಲ್ ಸ್ಟೇಷನ್ ಸರ್ವೆ ಮೂಲಕ ಹೆಚ್ಚಿನ ಆದಾಯ ತರುವ ನಿರೀಕ್ಷೆ ಹೊಂದಿರುವ ಪಾಲಿಕೆ, ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಂದ ತೆರಿಗೆ ಸಂಗ್ರಹಿಸಲು ಈ ಬಾರಿ ಮಹತ್ವ ನೀಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹಿಂದೆ ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷಗಳು ವಿನಾಯಿತಿ ಅವಧಿ ವಿಸ್ತರಿಸುವಂತೆ ಒತ್ತಾಯಿಸುತ್ತಿದ್ದವು. ಆಡಳಿತ ಪಕ್ಷಗಳು ಸಹ ತೆರಿಗೆ ವಿನಾಯಿತಿ ಅವಧಿಯನ್ನು ಒಂದೆರಡು ತಿಂಗಳು ವಿಸ್ತರಿಸಿದ್ದವು. ಇದರಿಂದಾಗಿ ಪಾಲಿಕೆಗೆ ನಷ್ಟವಾಗುತ್ತಿತ್ತು. ಆದರೆ, ಈ ಬಾರಿ ಏಪ್ರಿಲ್ ತಿಂಗಳಲ್ಲಿ ತೆರಿಗೆ ಪಾವತಿಸದವರಿಗೆ ಮಾತ್ರ ವಿನಾಯಿತಿ ದೊರೆಯಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ವರವಾದ ನೀತಿ ಸಂಹಿತೆ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದು ಪಾಲಿಕೆಗೆ ವರವಾಗಿ ಪರಿಣಮಿಸಿದೆ. ಈಗ ಕೌನ್ಸಿಲ್‌ನಲ್ಲಿ ಯಾವುದೇ ವಿಷಯಕ್ಕೆ ಅನುಮೋದನೆ ಪಡೆಯಲು ಸಾಧ್ಯವಿಲ್ಲ. ನೀತಿ ಸಂಹಿತೆ ಮೇ ತಿಂಗಳ ಅಂತ್ಯದವರೆಗೆ ಜಾರಿಯಲ್ಲಿರುವ ಕಾರಣ ಶೇ.5ರಷ್ಟು ತೆರಿಗೆ ವಿನಾಯಿತಿ ಅವಧಿ ವಿಸ್ತರಣೆಯಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು.
ತೆರಿಗೆ ಸಂಗ್ರಹ ಪ್ರಮಾಣ ಇಳಿಕೆ: ಲೋಕಸಭೆ ಚುನಾವಣೆ ಪರಿಣಾಮ, ಈ ಬಾರಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿದ್ದರು, 10 ದಿನಗಳಲ್ಲಿ ಕೇವಲ 50 ಕೋಟಿ ರೂ. ಸಂಗ್ರವಾಗಿದೆ. ಕಳೆದ ವರ್ಷ ಈ ವೇಳೆಗಾಗಲೇ 250-300 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಶೇ.5ರಷ್ಟು ವಿನಾಯಿತಿ ದೊರೆಯುವುದರಿಂದ ಏ.15ರ ನಂತರ ಹೆಚ್ಚು ಜನ ತೆರಿಗೆ ಪಾವತಿಸುವ ನಿರೀಕ್ಷೆಯಿದೆ.
ಏ.1ರಿಂದ 30ರೊಳಗೆ ತೆರಿಗೆ ಪಾವತಿಸುವ ಆಸ್ತಿ ಮಾಲೀಕರಿಗೆ ಶೇ.5ರಷ್ಟು ತೆರಿಗೆ ವಿನಾಯಿತಿ ದೊರೆಯಲಿದ್ದು, ನಂತರ ಯಾವುದೇ ಕಾರಣಕ್ಕೂ ವಿನಾಯಿತಿ ಅವಧಿ ವಿಸ್ತರಿಸುವುದಿಲ್ಲ.
-ವೆಂಕಟಾಚಲಪತಿ, ಜಂಟಿ ಆಯುಕ್ತರು (ಕಂದಾಯ)