Advertisement

3 ತಿಂಗಳಲ್ಲಿ ಪರವಾನಗಿ ನವೀಕರಿಸಿದರೆ ವಿನಾಯಿತಿ

03:45 AM Jul 04, 2017 | Team Udayavani |

ಬೆಂಗಳೂರು: ಸುಪ್ರೀಂ ಕೋರ್ಟ್‌ ಆದೇಶದಂತೆ ಹೆದ್ದಾರಿ ಬದಿಯಲ್ಲಿ ಮುಚ್ಚಲಾದ ಮದ್ಯದಂಗಡಿಗಳು ಪರವಾನಗಿ ನವೀಕರಣದೊಂದಿಗೆ ಬೇರೆ ಕಡೆ ಸ್ಥಳಾಂತರಗೊಳ್ಳಲು ಇರುವ ಕಾಲಾವಕಾಶ ಜುಲೈ 1ರಿಂದ ಮೂರು ತಿಂಗಳು ಮಾತ್ರ.

Advertisement

ಹೌದು, ಮುಚ್ಚಿರುವ ಮದ್ಯದಂಗಡಿಗಳು ಮೂರು ತಿಂಗಳೊಳಗೆ ಹೊಸ ಜಾಗ ಗುರುತಿಸಿ ಪರವಾನಗಿ ನವೀಕರಿಸಲು ಅರ್ಜಿ ಸಲ್ಲಿಸಿದರೆ ಅಂಥವರಿಗೆ ಹೊಸ ನಿಯಮಾವಳಿಯನ್ವಯ ಹಲವು ವಿನಾಯಿತಿಯೊಂದಿಗೆ ಪರವಾನಗಿ ನವೀಕರಣವಾಗುತ್ತದೆ. ಮೂರು ತಿಂಗಳು ಕಳೆದರೆ ಹೊಸದಾಗಿ ಅರ್ಜಿ ಸಲ್ಲಿಸಿ ಪರವಾನಗಿ ನವೀಕರಿಸಬೇಕಿದ್ದು, ಅವರಿಗೆ ಹಳೆಯ ನಿಯಮಗಳು ಅನ್ವಯವಾಗುತ್ತದೆ.

ಅಬಕಾರಿ ಇಲಾಖೆ ಮಾಹಿತಿ ಪ್ರಕಾರ ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯದಲ್ಲಿ ಹೆದ್ದಾರಿ ಬದಿಯಲ್ಲಿ 500 ಮೀಟರ್‌ ವ್ಯಾಪ್ತಿಯೊಳಗಿನ 3901 ಮದ್ಯದಂಗಡಿಗಳ ನೋಂದಣಿ ನವೀಕರಿಸದೆ ಮುಚ್ಚಲಾಗಿದೆ. ಈ ಪೈಕಿ 386 ಮಂದಿ ಈಗಾಗಲೇ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಉಳಿದ 3515 ಮದ್ಯದಂಗಡಿ ಮಾಲೀಕರು ತಮ್ಮ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಇವುಗಳ ನವೀಕರಣಕ್ಕಾಗಿ ಸರ್ಕಾರ ಕೆಲವು ವಿನಾಯಿತಿಗಳೊಂದಿಗೆ ಹೊಸ ನಿಯಮ ರೂಪಿಸಿದ್ದು, ಸೆಪ್ಟೆಂಬರ್‌ ಅಂತ್ಯದವರೆಗೆ ಈ ನಿಯಮಗಳು ಚಾಲ್ತಿಯಲ್ಲಿರುತ್ತವೆ.

ನೋಂದಣಿ ನವೀಕರಿಸಬೇಕಾದರೆ?:
ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಆ ಮದ್ಯದಂಗಡಿಗಳ ಪರವಾನಗಿ ನವೀಕರಿಸಲು ಅಬಕಾರಿ ಇಲಾಖೆ ಮೂರು ತಿಂಗಳ ಅವಧಿಗೆ ಹೊಸ ನಿಯಮಾವಳಿ ರೂಪಿಸಿದೆ. ಅದರಂತೆ ನೋಂದಣಿ ನವೀಕರಿಸಬೇಕಾದರೆ ಮದ್ಯದಂಗಡಿ ಮಾಲೀಕರು ತಮ್ಮ ಜಿಲ್ಲೆಯ ಯಾವುದೇ ಭಾಗದಲ್ಲಿ ಬೇಕಾದರೂ ಮದ್ಯದಂಗಡಿಗೆ ಸ್ಥಳ ನಿಗದಿಪಡಿಸಿ ಹಿಂದಿನ ಪರವಾನಗಿಯ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.

ಈ ಸಂದರ್ಭದಲ್ಲಿ ಪರವಾನಗಿ ನವೀಕರಣಕ್ಕೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಹೊಸ ಪ್ರದೇಶದಲ್ಲಿ ಮದ್ಯದಂಗಡಿ ಆರಂಭಕ್ಕೆ ಪರವಾನಗಿ ನೀಡಲು ಇರುವ ನಿಯಮಗಳನ್ನು ಸಡಿಲಗೊಳಿಸಿ ನವೀಕರಣ ನಿಯಮಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಲ್ಲದೆ, ಹೊಸ ಪರವಾನಗಿಗೆ ನಿಗದಿಪಡಿಸುವ ಅಂತರ ಮಿತಿಗಳನ್ನೂ ಸಡಿಲಿಸಲಾಗಿದೆ. ಆದರೆ, ಈ ನಿಯಮಗಳು ಮೂರು ತಿಂಗಳೊಳಗೆ ಅಂದರೆ ಸೆಪ್ಟೆಂಬರ್‌ ಅಂತ್ಯದೊಳಗೆ ನವೀಕರಣಕ್ಕೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ಅನ್ವಯವಾಗುತ್ತದೆ.

Advertisement

ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸಿದರೆ ಯಾವುದೇ ವಿನಾಯಿತಿ ಇರುವುದಿಲ್ಲ. ಈ ಅರ್ಜಿದಾರರು ಯಾವ ಪರಿಮಿತಿಯಲ್ಲಿ (ನಿರ್ದಿಷ್ಟ ಗ್ರಾಮ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳು) ಇದ್ದವೋ ಆ ಪ್ರದೇಶದಲ್ಲಿ ಮಾತ್ರ ಮದ್ಯದಂಗಡಿ ಸ್ಥಾಪಿಸಲು ಅವಕಾಶವಿದೆ. ಮೇಲಾಗಿ ಮಿತಿಯ ಅಂತರಕ್ಕೆ ನೀಡಿರುವ ವಿನಾಯಿತಿಯೂ ಅನ್ವಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅಕ್ಕಪಕ್ಕದ ಮದ್ಯದಂಗಡಿಗಳು ಸೇರಿದಂತೆ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಪರವಾನಗಿ ನವೀಕರಣಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ನವೀಕರಣವಾಗದಿದ್ದರೆ 170 ಕೋಟಿ ರೂ. ನಷ್ಟ:
ಹೆದ್ದಾರಿ ಬದಿಯಲ್ಲಿ ಮುಚ್ಚಿರುವ 3901 ಮದ್ಯದಂಗಡಿಗಳ ಪೈಕಿ 3515 ಮದ್ಯದಂಗಡಿಗಳು ಹೊಸ ಸ್ಥಳ ಹುಡುಕಿ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಿದೆ. ಇವುಗಳು ಪರವಾನಗಿ ನವೀಕರಿಸಿಕೊಳ್ಳದಿದ್ದಲ್ಲಿ ಅಬಕಾರಿ ಇಲಾಖೆಗೆ ಈ ಪ್ರಕ್ರಿಯೆಯೊಂದರಿಂದಲೇ ಸುಮಾರು 170 ಕೋಟಿ ರೂ. ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

ಆದರೆ, ಪರವಾನಗಿ ನವೀಕರಣಕ್ಕೆ ಸೆಪ್ಟೆಂಬರ್‌ ಅಂತ್ಯದವರೆಗೆ ಕಾಲಾವಕಾಶವಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳನ್ನಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದರೆ ಬಹುತೇಕ ಮದ್ಯದಂಗಡಿಗಳು ಸದ್ಯ ಇರುವ ಸ್ಥಳದಲ್ಲೇ ಮುಂದುವರಿಯಲು ಅವಕಾಶವಾಗುತ್ತದೆ. ಈ ಮಧ್ಯೆ ಮದ್ಯದಂಗಡಿ ಮಾಲೀಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಅವರ ಪರವಾಗಿ ತೀರ್ಪು ಬಂದರೆ ಸಮಸ್ಯೆ ಬಗೆಹರಿಯಬಹುದು ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ನಷ್ಟ ಅಂದಾಜು ಕಷ್ಟಸಾಧ್ಯ
ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚಿದ್ದರಿಂದ ಅಬಕಾರಿ ಇಲಾಖೆಗೆ ಎಷ್ಟು ನಷ್ಟವಾಗಲಿದೆ ಎಂಬುದನ್ನು ಈಗಲೇ ಅಂದಾಜು ಮಾಡುವುದು ಕಷ್ಟಸಾಧ್ಯ. ಮುಚ್ಚಿರುವ ಮದ್ಯದಂಗಡಿಗಳು ಬೇರೆ ಕಡೆ ಸ್ಥಳಾಂತರಗೊಂಡರೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಬಗೆಹರಿಯುತ್ತದೆ. ಇಲ್ಲದೇ ಇದ್ದರೆ ನಷ್ಟ ಸ್ವಲ್ಪ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

ಆದರೆ, ಹೆದ್ದಾರಿ ಬದಿಯಲ್ಲಿ ನಡೆಯುವ ವ್ಯಾಪಾರ ಇತರೆ ಪ್ರದೇಶಗಳಲ್ಲಿ ಆಗುವುದು ಕಷ್ಟ. ಆದರೂ ಮದ್ಯ ಸೇವನೆ ಮಾಡುವವರು ಹೊಸ ಜಾಗ ಹುಡುಕಿಕೊಂಡು ಹೋಗುತ್ತಾರೆ. ಹೀಗಾಗಿ 2017-18ನೇ ಸಾಲಿನ ಅಬಕಾರಿ ಆದಾಯದಲ್ಲಿ ಸುಮಾರು 1,500 ಕೋಟಿ ರೂ.ನಷ್ಟು ಕೊರತೆಯಾಗುವ ಸಾಧ್ಯತೆ ಇದೆ. ಈ ಅವಧಿಗೆ ಅಬಕಾರಿ ಬಾಬಿ¤ನಿಂದ 18,050 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ಗುರಿ ತಲುಪುವುದು ಕಷ್ಟಸಾಧ್ಯವಾಗಬಹುದು ಎನ್ನುತ್ತವೆ ಅಬಕಾರಿ ಇಲಾಖೆ ಮೂಲಗಳು.

ಒಟ್ಟು ಬಾಧಿತ ಮದ್ಯದಂಗಡಿ- 3901
ಇದುವರೆಗೆ ಸ್ಥಳಾಂತರವಾಗಿದ್ದು- 3086
ಸ್ಥಳಾಂತರವಾಗಲು ಬಾಕಿ- 3515

ಹೆದ್ದಾರಿ ಬದಿ ಮುಚ್ಚಿರುವ ಮದ್ಯದಂಗಡಿಗಳನ್ನು ಸ್ಥಳಾಂತರಗೊಳಿಸುವಾಗ ಪರವಾನಗಿ ನವೀಕರಿಸಲು ಹೊಸ ನಿಯಮಾವಳಿಯಲ್ಲಿ ಕೆಲವು ರಿಯಾಯಿತಿಗಳನ್ನು ನೀಡಲಾಗಿದ್ದು, ಈ ರಿಯಾಯಿತಿ ಮೂರು ತಿಂಗಳು ಮಾತ್ರ ಜಾರಿಯಲ್ಲಿರುತ್ತದೆ. ನಂತರ ಪರವಾನಗಿ ನವೀಕರಿಸಬೇಕಾದರೆ ಇಲಾಖೆಯ ಹಿಂದಿನ ನಿಯಮಗಳು ಅನ್ವಯವಾಗುತ್ತದೆ.
– ರಾಜೇಂದ್ರಕುಮಾರ್‌, ಹೆಚ್ಚುವರಿ ಅಬಕಾರಿ ಆಯುಕ್ತ

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next