Advertisement

ನಗರದೆಲ್ಲೆಡೆ ಸಂಭ್ರಮದ ರಂಜಾನ್‌

01:17 AM Jun 06, 2019 | Team Udayavani |

ಬೆಂಗಳೂರು: ಪವಿತ್ರ ರಂಜಾನ್‌ ಹಬ್ಬವನ್ನು ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಒಂದು ತಿಂಗಳ ಈದ್‌ ಉಲ್‌ ಫಿತ್ರ್ ಉಪವಾಸ ವ್ರತಾಚರಣೆ ಮುಗಿದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಬಿಳಿ ಹಾಗೂ ವಿವಿಧ ಬಣ್ಣದ ಕುರ್ತಾ ಹಾಗೂ ಟೋಪಿ ಧರಿಸಿ ನಗರದ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

Advertisement

ಬಳಿಕದ ಪರಸ್ಪರ ಆಲಿಂಗನ ಮಾಡುವ ಮೂಲಕ ಶುಭ ಕೋರಿದರು. ನಗರದ ಮಿಲ್ಲರ್ ರಸ್ತೆ, ಚಾಮರಾಜಪೇಟೆ, ಮೈಸೂರು ರಸ್ತೆ, ಜಗಜೀವನರಾಂ ನಗರ, ಶಿವಾಜಿನಗರ, ಜೆ.ಸಿ.ನಗರ, ನಾಗವಾರ, ರಾಮಕೃಷ್ಣ ಹೆಗಡೆ ನಗರ, ಜಯನಗರ, ಕೆಂಗೇರಿ, ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯ ಸೇರಿದಂತೆ ಹಲವೆಡೆ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಅದರಲ್ಲಿಯೂ ಪ್ರಮುಖವಾಗಿ ಶ್ವೇತ ವರ್ಣದ ಕುರ್ತಾ ಧರಿಸಿದ್ದ ಮಕ್ಕಳೂ ಹಿರಿಯರಿಗೆ ರಂಜಾನ್‌ ಹಬ್ಬದ ಶುಭ ಕೋರಿದರು. ಸಾಮೂಹಿಕ ಪ್ರಾರ್ಥನೆಯ ವೇಳೆ ಸಮುದಾಯ ಮೌಲಿಗಳು ಹಾಗೂ ಹಿರಿಯರು ಕುರಾನ್‌ನಲ್ಲಿರುವ ಪ್ರಮುಖ ಅಂಶಗಳನ್ನು ಬೋಧಿಸಿದರು. ಜತೆಗೆ ರಂಜಾನ್‌ ಮಹತ್ವ ಕುರಿತು ಕಿರಿಯರಿಗೆ ತಿಳಿಸಿಕೊಟ್ಟರು. ಕೆಲವು ಕಡೆಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಬೇಕು ಹಾಗೂ ರೈತರಿಗೆ ಒಳ್ಳೆಯದಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಜಮೀರ್‌ ಅಹಮದ್‌ , ಕಾಂಗ್ರೆಸ್‌ ಮುಖಂಡ ಜಿ.ಎ.ಬಾವಾ ಪಾಲ್ಗೊಂಡು ಹಬ್ಬದ ಶುಭಾಶಯ ತಿಳಿಸಿದರು. ಈದ್ಗಾ ಮೈದಾನ ಪೂರ್ತಿ ಭರ್ತಿಯಾಗಿ ಅಕ್ಕಪಕ್ಕದ ರಸ್ತೆಗಳಲ್ಲಿಯೂ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಾರ್ಥನೆಯ ಬಳಿಕ ಸ್ನೇಹಿತರು, ಬಂಧುಗಳೆಲ್ಲಾ ಒಂದೆಡೆ ಸೇರಿ ಸಂಭ್ರಮ, ಸಡಗರಗಳೊಂದಿಗೆ ರಂಜಾನ್‌ ಆಚರಿಸಿದರು. ಹಲವರು ಮನೆಯಲ್ಲೇ ಔತಣ ಕೂಟ ಏರ್ಪಡಿಸಿ ಬಂಧುಗಳು, ಸ್ನೇಹಿತರನ್ನು ಆಹ್ವಾನಿಸಿ ಸಾಮೂಹಿಕ ಭೋಜನ ಸವಿದರು. ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಖಾದ್ಯಗಳು ತರಹೇವಾರಿ ಖರ್ಜೂರಗಳ ಹಂಚಿ ಸಂತಸಗೊಂಡರು.

Advertisement

ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿರುವ ಬಹುತೇಕ ಮಾಲ್‌, ಮಾರಕಟ್ಟೆ, ಸೂಪರ್‌ ಮಾರ್ಕೆಟ್‌ಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಜತೆಗೆ ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ನಗರದ ರಸ್ತೆಗಳು ಖಾಲಿ ಹೊಡೆಯುತ್ತಿದ್ದ ದೃಶ್ಯ ಕಂಡುಬಂತು.

ಪೊಲೀಸ್‌ ಬಂದೋಬಸ್ತ್: ರಂಜಾನ್‌ ಆಚರಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ರಂಜಾನ್‌ ಸಾಮೂಹಿಕ ಪ್ರಾರ್ಥನೆ ನಡೆಯುವ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದ್ದ ಪೊಲೀಸರು, ಕೆಲವು ರಸ್ತೆಗಳಲ್ಲಿ ಸಂಚಾರ ಬಂದ್‌ ಮಾಡಿ, ಪರ್ಯಾಯ ರಸ್ತೆಗಳನ್ನು ಕಲ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next