Advertisement

ಜಿಲ್ಲಾದ್ಯಂತ ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

12:53 PM Dec 26, 2017 | |

ರಾಯಚೂರು: ಜಿಲ್ಲಾದ್ಯಂತ ಶಾಂತಿಧೂತ ಏಸುಕ್ರಿಸ್ತನ ಜಯಂತಿಯನ್ನು ಸಡಗರ ಸಂಭ್ರಮ ದಿಂದ ಆಚರಿಸಲಾಯಿತು. ಶಾಂತಿ, ಅಹಿಂಸೆ, ಪ್ರೀತಿ ಹಾಗೂ ತ್ಯಾಗದ ಸಂದೇಶ ಸಾರಿದ ಸಂತ ಏಸುವನ್ನು ಎಲ್ಲರೂ ಪೂಜಿಸುವ ಮೂಲಕ ಸ್ಮರಿಸಿದರು. ನಗರ ಸೇರಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ನಗರದ ಮೆಥೋಡಿಸ್ಟ್‌ ಚರ್ಚ್‌, ಇನ್‌ಫೆಂಟ ಜೀಸಸ್‌ ಶಾಲೆ, ಕ್ಯಾಥೋಲಿಕ್‌ ಚರ್ಚ್‌, ಕ್ರೈಸ್ತರ ಪ್ರಾರ್ಥನಾ ಮಂದಿರಗಳು, ಫ್ರಾನ್ಸಿಸ್‌ ದೇವಾಲಯದಲ್ಲಿ ಕ್ರಿಸ್‌ಮಸ್‌ ನಿಮಿತ್ತ ಕ್ಯಾಥೋಲಿಕ್‌ ಸಮುದಾಯದ ಕ್ರೈಸ್ತರು ರವಿವಾರ ರಾತ್ರಿ ಕಾರೆಲ್ಸ್‌ ಹಾಡುವ ಮೂಲಕ ಸಂತ ಕ್ರಿಸ್ತನನ್ನು ಬರಮಾಡಿಕೊಂಡರು. ನಂತರ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂತ ಕ್ರಿಸ್ತನನ್ನು ಶ್ರದ್ಧಾಪೂರ್ವಕವಾಗಿ ಸ್ಮರಿಸಲಾಯಿತು.

ಈ ನಿಮಿತ್ತ ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರಿಸ್‌ಮಸ್‌ ಟ್ರೀಗಳನ್ನು ನಿರ್ಮಿಸಲಾಗಿತ್ತು. ಆಕರ್ಷಕವಾಗಿ ನಿರ್ಮಿಸಿದ್ದ ದನದ ಗೋದಲಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಬಾಲಯೇಸುವಿನ ಪ್ರತಿಮೆ ಇಟ್ಟು ಪ್ರಾರ್ಥನೆ ಸಲ್ಲಿಸಿ ಯೇಸು ಪ್ರಭುವಿನ ಕೃಪೆಗೆ ಪಾತ್ರರಾದರು. 

ಕ್ರಿಸ್‌ಮಸ್‌ ನಿಮಿತ್ತ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಧರ್ಮ ಗುರುಗಳು ಸಾಮೂಹಿಕ ಪ್ರಾರ್ಥನೆಗೆ ಮಾರ್ಗದರ್ಶನ ನೀಡಿದರು. ನಂತರ ಉಪನ್ಯಾಸ ನೀಡಿ, ಮಹಾನ್‌ ದೈವ ನೀಡಿರುವ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ನಾವು ಅವನ ಕೃಪೆಗೆ ಪಾತ್ರರಾಗುವಂಥ ಕೆಲಸಗಳನ್ನು ಮಾಡಬೇಕು. ಯೇಸು ಕ್ಷಮೆಯನ್ನು ದೊಡ್ಡದೆಂದು ಹೇಳಿದ್ದಾನೆ.  ಆತನ ಮಾರ್ಗದಲ್ಲಿ ನಡೆಯುವ ಮೂಲಕ ಎಲ್ಲರೂ ಸ್ವರ್ಗಸ್ಥರಾಗಬೇಕು ಎಂದು ನೆರೆದ ಭಕ್ತರಿಗೆ ಉಪದೇಶಿಸಿದರು. 

ನಗರದ ಬಸವೇಶ್ವರ ವೃತ್ತದ ಬಳಿಯಿರುವ ವಾಲ್‌ ಕಾಟ್‌ ಮೈದಾನದಲ್ಲಿ ಕ್ರಿಸ್‌ಮಸ್‌ ನಿಮಿತ್ತ 15 ಅಡಿ ಎತ್ತರದಲ್ಲಿ ಕ್ರಿಸ್‌ಮಸ್‌ ಟ್ರೀ ಪ್ರತಿಷ್ಠಾಪಿಸಿ ಅದಕ್ಕೆ ವಿಶೇಷವಾಗಿ ದೀಪಾಲಂಕಾರ ಮಾಡಲಾಗಿತ್ತು. ಸೋಮವಾರ ಸಂಜೆ ಧರ್ಮಗುರುಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಮಹಿಳೆಯರು ಮಕ್ಕಳು ಸೇರಿ ಸಂಭ್ರಮಾಚರಣೆಯಲ್ಲಿ ಮಿಂದರು.

Advertisement

ಜಗತ್ತಿಗೆ ಶಾಂತಿ ಸಂದೇಶ ನೀಡಿದ ಮಹಾನ್‌ ಪುರುಷ ಏಸು ಕ್ರಿಸ
ಹಟ್ಟಿ ಚಿನ್ನದ ಗಣಿ: ಜಗತ್ತಿಗೆ ಶಾಂತಿ ಸಂದೇಶ ನೀಡಿದ ಮಹಾನ್‌ ಪುರುಷ ಏಸು ಕ್ರಿಸ್ತರು. ಶಾಂತಿ ಸಂದೇಶವನ್ನು ಪಾಲಿಸುವ ಮೂಲಕ ದೇಶದ ಭಾವೈಕ್ಯತೆಯನ್ನು ಎತ್ತಿ ಹಿಡಿಯಬೇಕಿದೆ ಎಂದು ವಕೀಲರಾದ ಸೈಯ್ಯದ್‌ ಶಂಶುದ್ದೀನ್‌ ಹೇಳಿದರು.

ಇಲ್ಲಿನ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಅಮೀರ್‌ಅಲಿ ಮಾತನಾಡಿ, ಹಟ್ಟಿ ಚಿನ್ನದ ಕಂಪನಿಯಲ್ಲಿ ವಿವಿಧ ಧರ್ಮದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಬ್ಬಗಳನ್ನು ಎಲ್ಲ ಧರ್ಮದವರು ಸೇರಿ ಆಚರಿಸುವುದರಿಂದ ಕಾರ್ಮಿಕರಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂದರು.

ಮುಖಂಡ ಎನ್‌.ಸ್ವಾಮಿ ಮಾತನಾಡಿದರು. ಫಾ| ಅಲ್‌ಫೋನ್ಸ್‌, ಸಿಸ್ಟರ್‌ಗಳಾದ ವೀರಾನಿಕಾ, ಸುನೀತಾ, ಮೀನಾ, ಗ್ರಾಪಂ ಅಧ್ಯಕ್ಷ ಶಂಕರಗೌಡ ಬಳಗಾನೂರು, ಕಾರ್ಮಿಕ ಮುಖಂಡ ಬಾಬು ಭೂಪುರ, ಡಿ.ಕೆ. ಲಿಂಗಸುಗೂರು, ಯಲ್ಲಪ್ಪ ನಾಯಕ, ಗ್ರಾಪಂ ಸದಸ್ಯ, ಶೇಖ ಅನ್ಸಾರಿ ಸೇರಿ ವಿವಿಧ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಲೂದ್‌ ಮಾತೆ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ
ಲಿಂಗಸುಗೂರು:
ಪಟ್ಟಣದ ಲೂದ್‌ಮಾತೆ ಚರ್ಚ್‌ನಲ್ಲಿ ಸೋಮವಾರ ಕ್ರಿಸ್‌ ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.  ಕ್ರಿಸ್‌ಮಸ್‌ ಸಂದೇಶ ನೀಡಿದ ಫಾದರ್‌ ಹೆರಾಲ್ಡ್‌ ಪಿಂಟೋ, ನಾವೆಲ್ಲರೂ ಆಚರಿಸುವ ಕ್ರಿಸ್‌ಮಸ್‌ ಅದೊಂದು ಚರಿತ್ರೆಯ ಪುಟದಲ್ಲಿ ಕಾಣಿಸಿಕೊಳ್ಳುವ ಮಹಾನ್‌ ವ್ಯಕ್ತಿಯ ಸ್ಮರಣೆಯ ದಿನ ಮಾತ್ರವಲ್ಲ, ಬದಲು ದೈವಿ ಪ್ರಸಾದದ ಅನುಭವದ ದಿನವಾಗಿದೆ. ದೈವಿಗುಣಗಳನ್ನು ಮೈಗೂಡಿಸಿಕೊಳ್ಳುವ ಶುಭ ದಿನವಾಗಿದೆ ಎಂದರು.

ಭಕ್ತಿಯೆಡೆಗೆ ಕೊಂಡೊಯ್ದ ಗಾನ: ಪೂಜೆಯ ಸಮಯದಲ್ಲಿ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಗಾಯನ ವೃಂದ ಯೇಸು ಕ್ರಿಸ್ತನ ಜನ್ಮ ವೃತ್ತಾಂತ, ಮಹಿಮೆ ಸಾರುವ ಭಕ್ತಿಗೀತೆಗಳನ್ನು ಹಾಡಿ ಭಕ್ತರನ್ನು ಭಕ್ತಿಯ ಲೋಕಕ್ಕೆ ಕೊಂಡೊಯ್ದರು. ಪೂಜೆ ನಂತರ ಭಕ್ತರಿಗೆ ಕೇಕ್‌ ವಿತರಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಲಿಟಲ್‌ ಪ್ಲವರ್‌ ಶಾಲೆಯ ಕಾರ್ಯದರ್ಶಿ ಸಹೋದರಿ ಜೂಲಿಯಾನ ಮೇರಿ, ಸಹೋದರಿ ಡೋರಿನ್‌ ಹಾಗೂ ಕನ್ಯಾಸ್ತ್ರೀಯರು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.

ಕ್ರಿಸ್‌ಮಸ್‌ ಶಾಂತಿ ಸಂಕೇತದ ಹಬ್ಬ: ವೆಂಕಟಪ್ಪ ನಾಯಕ
ಮಾನ್ವಿ: ಕ್ರಿಸ್‌ಮಸ್‌ ಪ್ರಯುಕ್ತ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಾ ವೆಂಕಟಪ್ಪ ನಾಯಕರು ಲೊಯೋಲಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಫಾ| ಅರುಣ್‌ ಲೂಯಿಸ್‌ರನ್ನು ಭೇಟಿ ಮಾಡಿ ಕ್ರಿಸ್‌ಮಸ್‌ ಶುಭಾಶಯ ತಿಳಿಸಿದರು. ಈ ವೇಳೆ ಮಾತನಾಡಿದ ಅವರು, ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಮೂಲಕ ಯೇಸುಪ್ರಭು ಶಾಂತಿಯ ಪ್ರತೀಕ ಎನಿಸಿಕೊಂಡಿದ್ದಾರೆ ಎಂದರು.

ಲೊಯೋಲಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಫಾ| ಅರುಣ್‌ ಲೂಯಿಸ್‌ ಎಸ್‌.ಜೆ. ಕೇಕ್‌ ಕತ್ತರಿಸಿ ಕ್ರಿಸ್‌ಮಸ್‌ ಆಚರಿಸಿದರು. ಫಾ| ಜೀವನ್‌ ಪ್ರಭು, ಅನುಷ್‌ ಬ್ರದರ್‌ ಹಾಗೂ ಜೆಡಿಎಸ್‌ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಬಲ್ಲಟಗಿ, ಕಾರ್ಯಕರ್ತರಾದ ಖಲೀಲ್‌ ಖುರೇಷಿ, ಜೆ.ಎಚ್‌. ದೇವರಾಜ, ಪಿ.ರವಿಕುಮಾರ್‌ ವಕೀಲ, ಉದಯಕುಮಾರ್‌, ಎಸ್‌.ಯಂಕೋಬ, ಉಸ್ಮಾನ್‌ ಸಾಬ್‌, ಜಸ್ವಂತ್‌ ಸೇಠ್ಠ ಇತರರು ಇದ್ದರು. 

ಕವಿತಾಳದಲ್ಲಿ ಕ್ರಿಸ್‌ಮಸ್‌ ಸಂಭ್ರಮ
ಕವಿತಾಳ: ಪಟ್ಟಣದ ಪುನರುತ್ಥಾನ ಕ್ರೈಸ್ತರ ದೇವಾಲಯ (ಕ್ಯಾಥೋಲಿಕ್‌) ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.. ಬೋಸರಾಜ ಮತ್ತು ಶಾಸಕ ಹಂಪಯ್ಯ ನಾಯಕ ಚರ್ಚ್‌ಗೆ ಭೇಟಿ ನೀಡಿ ಕ್ರೈಸ್ತ ಬಾಂಧವರಿಗೆ ಶುಭ ಕೋರಿದರು. ಕ್ರಿಸ್‌ಮಸ್‌ ಪ್ರಯುಕ್ತ ರವಿವಾರ ಮಧ್ಯರಾತ್ರಿ ಚರ್ಚ್‌ನಲ್ಲಿ ಫಾ| ಐವಾನ್‌ ಪಿಂಟೋ ಮತ್ತು ಫಾ| ರಾಯಪ್ಪ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಚರ್ಚ್‌ ಆವರಣದಲ್ಲಿ ನಿರ್ಮಿಸಿದ ಗೋದಲಿಯನ್ನು ವಿಶೇಷವಾಗಿ ಆಲಂಕರಿಸಲಾಗಿತ್ತು. 

ಕವಿತಾಳ, ಸೈದಾಪುರ, ಹುಸೇನಪುರ, ಅಮೀನಗಡ, ಯದ್ದಲದಿನ್ನಿ, ಹಾಲಾಪುರ, ತೋರಣದಿನ್ನಿ, ಬಾಗಲವಾಡ, ಸೇರಿ ಮಲ್ಲದಗುಡ್ಡ, 73, 74ನೇ ಕ್ಯಾಂಪ್‌, ಜಿನ್ನಾಪುರ, ರಾಮಲದಿನ್ನಿ, ಕಲ್ಲಮಗೇರಾ, ಗ್ರಾಮದ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next