ಕುಷ್ಟಗಿ: ಪಟ್ಟಣದಲ್ಲಿ ಬಸವ ಜಯಂತಿ ಪ್ರಯುಕ್ತ ಮಂಗಳವಾರ ಪಟ್ಟಣದ ರೈತ ಗೆಳೆಯರ ಬಳಗದಿಂದ ರಾಜ್ಯ ಮಟ್ಟದ ಜೋಡೆತ್ತಿನ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ ರೋಮಾಂಚಕಾರಿ ನಡೆಯಿತು.
ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಶಾಖಾಪುರ ರಸ್ತೆಯ ಅಡವಿರಾಯ ದೇವಸ್ಥಾನ ಬಳಿ ದ್ಯಾಮಣ್ಣ ಕಟ್ಟಿಹೊಲ ಇವರ ಜಮೀನಿನಲ್ಲಿ ಆಯೋಜಿಸಲಾಗಿತ್ತು. ಬಿಸಿಲಿನಲ್ಲಿ ಶರವೇಗದಲ್ಲಿ ಓಡುವ ಎತ್ತುಗಳನ್ನು ನೋಡಿ, ರೈತರು ಕೇಕೇ ಹಾಕಿ ಸಂಭ್ರಮಿಸಿರುವುದು ವಿಶೇಷ ಎನಿಸಿತು.
ಬಾಗಲಕೋಟೆ, ಕೊಪ್ಪಳ, ರಾಯಚೂರು, ಗದಗ, ಧಾರವಾಡ ಜಿಲ್ಲೆಗಳಿಂದ 27 ಜೋಡೆತ್ತುಗಳು ಭಾಗವಹಿಸಿದ್ದವು. ಜೋಡೆತ್ತಿನ ಓಟದ ಸ್ಪರ್ಧೆಯನ್ನು ವೇ. ಮೂ. ಶಿವಾನಂದಯ್ಯ ಗುರುವಿನ್ ಚಾಲನೆ ನೀಡಿದರು.
ಅಪರಾಹ್ನ ವೇಳೆಗೆ ಆರಂಭಗೊಂಡ ರೋಮಾಂಚಕಾರಿ ಸ್ಪರ್ಧೆಯಲ್ಲಿ ರೈತರು ಉರಿಬಿಸಿಲನ್ನು ಲೆಕ್ಕಿಸದೇ ಅಪಾರ ಸಂಖ್ಯೆಯಲ್ಲಿ ನೆರೆದು ಈ ಸ್ಪರ್ಧೆಯನ್ನು ಹಬ್ಬದಂತೆ ಸಂಭ್ರಮಿಸಿದರು. ಶರವೇಗದಲ್ಲಿ ಓಡುವ ಎತ್ತುಗಳ ಹಿಂದೆಯೇ ಓಡಿ ಸಂಭ್ರಮಿಸಿದರು.
ಮೊದಲ ಬಹುಮಾನವನ್ನು ಶ್ರೀದುರ್ಗಾದೇವಿ ಪ್ರಸನ್ನ ಲೋಕಾಪುರ ಅವರ ಜೋಡೆತ್ತುಗಳು 1,650 ಮೀಟರ್ ವರೆಗೆ ಎಳೆದು 51 ಸಾವಿರ ರೂ. ಬಹುಮಾನ ತನ್ನದಾಗಿಸಿಕೊಂಡವು. 2ನೇ ಬಹುಮಾನವನ್ನು ತುಂಬ ಗ್ರಾಮದ ಮಂಜುನಾಥ ಅಂದಪ್ಪ ಅವರ ಎತ್ತುಗಳು 1,475 ಮೀಟರ್ ಎಳೆದು 31 ಸಾವಿರ ರೂ., ಕುಷ್ಟಗಿ ತಾಲೂಕಿನ ಬೆಂಚಮಟ್ಟಿಯ ಬೀರಲಿಂಗೇಶ್ವರ ಎತ್ತುಗಳು 1,472 ಮೀಟರ್ ಎಳೆದು ತೃತೀಯ ಬಹುಮಾನ ಪಡೆದರೆ, ಕುಷ್ಟಗಿಯ ಬಸವರಾಜ್ ಕಂಚಿ ಅವರ ಎತ್ತುಗಳು 1,445 ಮೀಟರ್ ಎಳೆದು ನಾಲ್ಕನೇ ಬಹುಮಾನದೊಂದಿಗೆ 11 ಸಾವಿರ ರೂ. ಬಹುಮಾನ ಪಡೆದವು. ಹಿರೇಮನ್ನಾಪುರ ಶ್ರೀ ಗುರು ಶಂಕರಲಿಂಗೇಶ್ವರ ಅವರ ಎತ್ತುಗಳು 1,411 ಮೀಟರ್ ಎಳೆದು 5,100 ರೂ. ಬಹುಮಾನ ಪಡೆದರು. ಕುಷ್ಟಗಿ ತಾಲೂಕಿನ ವಾರಿಕಲ್ ಗ್ರಾಮದ ದುರ್ಗಾದೇವಿ ಅವರ ಎತ್ತುಗಳು 1,408 ಮೀಟರ್ ಎಳೆದು ಹಿತ್ತಾಳಿ ಸರಪಳಿ ತನ್ನದಾಗಿಸಿಕೊಂಡವು.
ನಂತರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು, ವಿಜೇತ ಎತ್ತುಗಳ ಮಾಲೀಕರಿಗೆ ಬಹುಮಾನ ವಿತರಿಸಿದರು. ಕಲಾವಿದ ಶರಣಪ್ಪ ವಡಿಗೇರಿ, ಯುವಜನ ಸೇವೆ ಕ್ರೀಡಾ ಇಲಾಖೆಯ ಎ.ಎನ್. ಯತಿರಾಜ್ ಶರಣಪ್ಪ ಬನ್ನಿಗೋಳ, ಮಂಜುನಾಥ ನಾಲಗಾರ ಮತ್ತೀತರಿದ್ದರು.