ಕಲಬುರಗಿ: ಹನ್ನೊಂದು ದಿನಗಳ ಕಾಲ ನಡೆಯುವ ಐತಿಹಾಸಿಕ ಮಹಾದಾಸೋಹಿ ಭಂಡಾರಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಸಂಜೆ ಉಚ್ಚಾಯಿ ಮೆರವಣಿಗೆಯೊಂದಿಗೆ ಚಾಲನೆಗೊಂಡಿತು.
ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಎಂಟನೇ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರ ಸಾನ್ನಿಧ್ಯ ಹಾಗೂ ನೇತೃತ್ವದಲ್ಲಿ ಶರಣಬಸವೇಶ್ವರ 196ನೇ ಯಾತ್ರಾ ಮಹೋತ್ಸವ ಹಾಗೂ ಉಚ್ಚಾಯಿ ಕಾರ್ಯಕ್ರಮ ಸೋಮವಾರ ಸಂಜೆ 6:00ಕ್ಕೆ ಶುಭಾರಂಭಗೊಂಡಿತು. ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಸೇರಿದಂತೆ ಇತರರಿದ್ದರು. ಇದಲ್ಲದೇ ಸಹಸ್ರಾರು ಭಕ್ತರು ಉಚ್ಚಾಯಿಯಲ್ಲಿ ಭಾಗವಹಿಸಿದ್ದರು. ಭಕ್ತರು ಉಚ್ಚಾಯಿಗೆ ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಭಾವ ಮೆರೆದರು.
ಉಚ್ಚಾಯಿ ಕಾರ್ಯಕ್ರಮಕ್ಕೆ ನಗರವಲ್ಲದೇ ಜಿಲ್ಲೆಯ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸೋಮವಾರ ಸಂಜೆಯಿಂದಲೇ ದೇವಾಲಯಕ್ಕೆ ಗ್ರಾಮಾಂತರ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಿದ್ದು, ದೇವಾಲಯ ಆವರಣದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ರಥೋತ್ಸವ: ಮಹಾದಾಸೋಹಿ ಶರಣಬಸವೇಶ್ವರ 196ನೇ ರಥೋತ್ಸವ ಮಂಗಳವಾರ ಸಂಜೆ 6:00ಕ್ಕೆ ನಡೆಯಲಿದೆ. ಪ್ರಸಕ್ತ ವರ್ಷ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನಕ್ಕೆ ಉತ್ತರಾಧಿಕಾರಿ ಆಗಮನವಾಗಿದ್ದರಿಂದ ಜಾತ್ರಾ ಮಹೋತ್ಸವದ ಉತ್ಸಾಹ ಇಮ್ಮಡಿಗೊಂಡಿದೆ. ಮಂಗಳವಾರ ನಡೆಯುವ ರಥೋತ್ಸವಕ್ಕೆ ಜನ ಸಾಗರ ಹರಿದು ಬರಲಿದೆ. ಯುಗಾದಿ ಹಬ್ಬದ ದಿನವರೆಗೂ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ಹಲವಾರು ಆಟಿಕೆ, ತಿಂಡಿ-ತಿನಿಸುಗಳ ಅಂಗಡಿಗಳು, ಮನೋರಂಜನಾ
ಕೂಟಗಳು ಬಂದಿಳಿದಿವೆ. ಭಕ್ತರಿಗಾಗಿ ವ್ಯವಸ್ಥೆಗಳು ನಡೆದಿವೆ. ಜಾತ್ರಾ ಮಹೋತ್ಸವ ಸಮಿತಿ, ಮಹಾನಗರ ಪಾಲಿಕೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇನ್ನಷ್ಟು ಸ್ವತ್ಛತಾ ಕಾರ್ಯ ಕೈಗೊಳ್ಳಬೇಕಾಗಿದೆ.