ಹುಣಸೂರು: ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ತಡೆಗಟ್ಟುವಲ್ಲಿ ಅಬಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾಲೂಕು ದ.ಸಂ.ಸ ಆರೋಪಿಸಿದೆ.
ದ.ಸಂ.ಸ. ದ ನಿಂಗರಾಜ್‌ಮಲ್ಲಾಡಿ ಮತ್ತಿತರರು ಜಿಲ್ಲಾಕಾರಿಗಳಿಗೆ ನೀಡಿರುವ ದೂರಿನಲ್ಲಿ ತಾಲೂಕಿನ ಕಟ್ಟೆಮಳಲವಾಡಿ, ಯಶೋಧರಪುರ, ಮಂಗಳೂರುಮಾಳ, ಅಂಬೇಡ್ಕರ್‌ನಗರ, ರತ್ನಪುರಿ, ದೊಡ್ಡಹೆಜ್ಜೂರು, ನಾಗಾಪುರ ಹಾಡಿ, ನೇರಳಕುಪ್ಪೆ, ಶೆಟ್ಟಹಳ್ಳಿ ಹಾಡಿ, ಚಂದನಗಿರಿ ಹಾಡಿ, ಪಕ್ಷಿರಾಜಪುರ ಮುಂತಾದ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆಂದು ದೂರಿದ್ದಾರೆ.
ಈ ಬಗ್ಗೆ ಹಲವಾರು ಸಭೆಗಳಲ್ಲಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟುವಂತೆ ಪ್ರಸ್ತಾಪಿಸಿದರೂ ಸಹ ಅಬಕಾರಿ ಅಧಿಕಾರಿಗಳು ನೆಪ ಮಾತ್ರಕ್ಕೆ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಅಧಿಕಾರಿಗಳೇ ಪರೋಕ್ಷವಾಗಿ ಬಾರ್ ಮಾಲೀಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಅಕ್ರಮ ಸಾರಾಯಿ ಮಾರಾಟ ಮಾಡಲು ಸಹಕರಿಸುವಂತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿಗಳು ವಾಸ ಮಾಡುತ್ತಿರುವ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಅಕ್ರಮ ಸಾರಾಯಿ ಮಾರಾಟ ಮುಂಜಾನೆಯಿಂದಲೇ ಆರಂಭವಾಗುತ್ತದೆ. ಕಟ್ಟೆಮಳಲವಾಡಿ ದೊಡ್ಡ ಗ್ರಾಮದಲ್ಲೇ ಸುಮಾರು 20 ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಮತ್ತು ಗಾಂಜಾ ಮಾರಾಟವಾಗುತ್ತಿದೆ ಎಂಬ ಕುರಿತು ಮಾಹಿತಿ ನೀಡಿದರು.
ಇದರಿಂದ ಗ್ರಾಮದ ಯುವಕರು, ಬಡ ಜನರು ಆರ್ಥಿಕವಾಗಿ ದಿವಾಳಿ ಹೊಂದಿ ಕೆಲ ಕುಟುಂಬಗಳು ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ಬೀದಿಗೆ ಬೀಳುತ್ತಿವೆ. ಅಕ್ರಮ ಸಾರಾಯಿ ಮಾರಾಟದ ಜೊತೆಗೆ ಮಾದಕ ವಸ್ತುವಾದ ಗಾಂಜಾವು ಸಹ ಸರಬರಾಜಾಗುತ್ತಿದೆ. ಇದರಿಂದ ಯುವಜನತೆ ಮಾದಕ ವಸ್ತುಗಳನ್ನು ಸೇವನೆ ಮಾಡಿ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಅಬಕಾರಿ ಅಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ದಂದೆಯನ್ನು ನಿಲ್ಲಿಸಬೇಕೆಂದು ದ.ಸಂ.ಸ. ದ ದೇವೇಂದ್ರ ಕುಳವಾಡಿ, ಬಲ್ಲೇನಹಳ್ಳಿಕೆಂಪರಾಜು, ಮುಖಂಡರಾದ ಶೇಖರ್‌ಯಶೋಧರಪುರ, ಮುರುಗೇಶ, ಮಾದು, ದಲಿತ ಮಹಿಳಾ ಒಕ್ಕೂಟದ ಲಕ್ಷ್ಮೀ, ಪಾರ್ವತಮ್ಮ ಒತ್ತಾಯಿಸಿದ್ದಾರೆ.