Advertisement

ಮದ್ಯ ಖರೀದಿ ಮೇಲೆ ಅಬಕಾರಿ ಇಲಾಖೆ ಕಣ್ಣು: ಮತದಾರರಿಗೆ ಮದ್ಯದ ಆಮಿಷ ತಪ್ಪಿಸಲು ನಿಗಾ

07:15 AM Apr 26, 2023 | Team Udayavani |

ಮಂಗಳೂರು: ಮತದಾರರ ಮೇಲೆ “ಮದ್ಯ’ದ ಆಮಿಷ ತಪ್ಪಿಸಲು ಅಬಕಾರಿ ಇಲಾಖೆ ಮದ್ಯದಂಗಡಿಗಳು ಮಾತ್ರವಲ್ಲದೆ ಮದ್ಯಪಾನಿಗಳ ಮೇಲೂ ಕಣ್ಣಿಟ್ಟಿದೆ.

Advertisement

ಮದ್ಯದಂಗಡಿಗಳು ಈ ಹಿಂದಿನ ವರ್ಷಗಳಲ್ಲಿ ಮತ್ತು ಚುನಾವಣೆಯ ಸಮಯದಲ್ಲಿ ಖರೀದಿಸಿರುವ ಮದ್ಯದ ಪ್ರಮಾಣವೆಷ್ಟು ಎಂಬುದನ್ನು ಪರಿಶೀಲಿಸಿ ಒಂದು ವೇಳೆ ಚುನಾವಣ ಸಮಯದಲ್ಲಿ ಹೆಚ್ಚಿನ ಮದ್ಯ ಖರೀದಿಸಿರುವುದು ಕಂಡುಬಂದಲ್ಲಿ ಅಂತಹ ಮದ್ಯದಂಗಡಿಗಳಲ್ಲಿ ವಿಶೇಷ ಪರಿಶೀಲನೆ ನಡೆಸಲಾಗುತ್ತಿದೆ.

ಚುನಾವಣ ಅಕ್ರಮಕ್ಕೆ ಖರೀದಿಸಿರುವುದು ಕಂಡು ಬಂದರೆ ಪ್ರಕರಣ ದಾಖಲಿಸಲಾಗುತ್ತದೆ. ಯಾವುದೇ ವ್ಯಕ್ತಿ ನಿಯಮಾನುಸಾರ ಖರೀದಿಸಬಹುದಾದ ಪ್ರಮಾಣಕ್ಕಿಂತ ಹೆಚ್ಚು ಖರೀದಿಸಿದರೆ ಆತನ ಮೇಲೆಯೂ ನಿಗಾ ಇಡಲಾಗುತ್ತಿದೆ. ಮಾತ್ರವಲ್ಲದೆ ಕೆಲವು ಮದ್ಯದಂಗಡಿಗಳಲ್ಲಿ ರಾಜಕೀಯ ಪಕ್ಷದವರು ಟೋಕನ್‌ ಮೂಲಕ ಮದ್ಯ ನೀಡುವ ಬಗ್ಗೆಯೂ ಇಲಾಖೆಗೆ ಗುಮಾನಿ ಇದ್ದು ಇದರ ಪತ್ತೆಗಾಗಿ ಪ್ರತ್ಯೇಕ ವಿಚಕ್ಷಣ ದಳ ರಚಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.

ಗೋವಾ ಮದ್ಯಕ್ಕೆ ಭಾರೀ ಬೇಡಿಕೆ?
ಸಾಮಾನ್ಯ ದಿನಗಳಲ್ಲಿಯೂ ಕರಾವಳಿ ಭಾಗಕ್ಕೆ ಗೋವಾದಿಂದ ಭಾರೀ ಪ್ರಮಾಣದಲ್ಲಿ ಮದ್ಯ ಅಕ್ರಮ ಸಾಗಾಟ ನಡೆಯುತ್ತಿರುವುದು ಈ ಹಿಂದಿನ ಹಲವು ಪ್ರಕರಣಗಳಲ್ಲಿ ಬೆಳಕಿಗೆ ಬಂದಿದ್ದು ಇದೀಗ ಚುನಾವಣೆ ವೇಳೆ ಗೋವಾ ಮದ್ಯ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈಲು ಮತ್ತು ರಸ್ತೆ ಮಾರ್ಗದಲ್ಲಿ ವಿಶೇಷ ತಪಾಸಣಾ ದಳ ನಿಯೋಜಿಸಲಾಗಿದೆ. ಈಗಾಗಲೇ 195 ಲೀ. ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಬಿಲ್‌ ಇಟ್ಟುಕೊಳ್ಳುವುದು ಸುರಕ್ಷಿತ
ಅಬಕಾರಿ ನಿಯಮದ ಪ್ರಕಾರ ಓರ್ವ ವ್ಯಕ್ತಿ 2.03 ಲೀ. ಮದ್ಯವನ್ನು ಹೊಂದಿರಬಹುದು. ಆದರೆ ಅದಕ್ಕೆ ಬಿಲ್‌ ಅಗತ್ಯ. ಸಾಮಾನ್ಯವಾಗಿ ಸ್ವಲ್ಪ ಪ್ರಮಾಣದ ಮದ್ಯವನ್ನು ಹೊಂದಿದ್ದರೆ ಬಿಲ್‌ ಕೇಳುವುದಿಲ್ಲ. ಹೆಚ್ಚಿನ ಪ್ರಮಾಣದ ಮದ್ಯ, ಗೋವಾ ಮದ್ಯ ಪತ್ತೆಯಾದರೆ ಬಿಲ್‌ ಬಗ್ಗೆ ವಿಚಾರಿಸಲಾಗುತ್ತದೆ. ಪರವಾನಿಗೆ ಹೊಂದದೆ ಯಾವುದೇ ಕಾರಣಕ್ಕೂ ಹೆಚ್ಚಿನ ಪ್ರಮಾಣದ ಮದ್ಯವನ್ನು ಸಾಗಿಸುವಂತಿಲ್ಲ ಎನ್ನುತ್ತಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು.

Advertisement

ಕಳ್ಳಭಟ್ಟಿ ಸಾರಾಯಿ ಮೇಲೂ ಕಣ್ಣು
ಕರಾವಳಿಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಗೆ ಪ್ರಮಾಣ ಬಹುತೇಕ ಕಡಿಮೆಯಾಗಿದೆಯಾದರೂ ಕೆಲವೆಡೆ ಕಳ್ಳಭಟ್ಟಿ ತಯಾರಿಕೆ ನಡೆಯುತ್ತಿರುವ ಮಾಹಿತಿ ಅಬಕಾರಿ ಇಲಾಖೆಗೆ ಲಭ್ಯವಾಗಿದ್ದು ಈಗಾಗಲೇ ದಾಳಿ ನಡೆಸಿ 33 ಲೀಟರ್‌ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.

ಹೋಮ್‌ ಡೆಲಿವರಿಯವರಿಗೆ ತಿಳಿವಳಿಕೆ
ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ಇತರ ವಸ್ತುಗಳ ಹೋಂ ಡೆಲಿವರಿಯವರ ಮೂಲಕ ಕಾನೂನು ಉಲ್ಲಂಘನೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಹೋಂ ಡೆಲಿವರಿಯವರಿಗೆ ತಿಳಿವಳಿಕೆ ನೀಡಲಾಗಿದೆ ಎಂದು ಎಸ್‌ಪಿ ಡಾ| ವಿಕ್ರಮ್‌ ಅಮಟೆ ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ (ಮಾ. 29) ಎ. 24ರ ವರೆಗೆ ಜಿಲ್ಲೆಯಲ್ಲಿ ಅಬಕಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 860 ಕಡೆ ದಾಳಿ ನಡೆಸಿ 195.200 ಲೀ ಗೋವಾ ಮದ್ಯ, 1031.765 ಲೀ ಐಎಂಎಲ್‌, 81.720 ಲೀ. ಕಳಭಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ. 19.10 ಲ.ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಹಲವರನ್ನು ಬಂಧಿಸಲಾಗಿದೆ. ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ವಿಚಕ್ಷಣ ದಳಗಳು ನಿಗಾ ವಹಿಸುತ್ತಿವೆ. ರಾಜ್ಯದ ಗಡಿಭಾಗಗಳಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ. ವಿವಿಧ ರೀತಿಯ ಸನ್ನದುಗಳ ವಹಿವಾಟಿನ ಮೇಲೆ ನಿಗಾ ವಹಿಸಿದ್ದು ಷರತ್ತು ಉಲ್ಲಂಘನೆ ಕಂಡುಬಂದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.
– ಪಿ. ಬಿಂದು, ಅಬಕಾರಿ ಉಪ ಆಯುಕ್ತರು, ದ.ಕ. ಜಿಲ್ಲೆ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next