Advertisement

ಮೀತಿ ಮೀರಿದ ಮಳೆ; ಕೊಳೆಯುತ್ತಿವೆ ಬೆಳೆ

05:34 PM Aug 03, 2021 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಸತತವಾಗಿ ಸುರಿದ ಭಾರಿ ಮಳೆಯಿಂದ ಹಲವು ಗ್ರಾಮಗಳಲ್ಲಿ ಬೆಳೆದ ಮುಂಗಾರು ಬೆಳೆಗಳು ಮಳೆ ನೀರಿನಲ್ಲಿ ಕೊಳೆತು ಹೋಗಿದ್ದು, ರಸ್ತೆ ಸಂಪರ್ಕ ಸೇತುವೆಗಳು ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಆದರೆ ಬೆಳೆ ಹಾನಿ ಕೃಷಿ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿಲ್ಲ ಎಂದು ರೈತರು ದೂರಿದ್ದಾರೆ.

Advertisement

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಜೂನ್‌- ಜುಲೈ ತಿಂಗಳಲ್ಲಿ ವ್ಯಾಪಕವಾಗಿ ಸುರಿದ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಪ್ರವಾಹ ಉಂಟಾಗಿ ಅನೇಕ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿ ಮುಂಗಾರು ಬೆಳೆಗಳಾದ ಹೆಸರು, ತೊಗರಿ, ಉದ್ದು, ಸೋಯಾಬಿನ್‌, ಸಜ್ಜೆ, ಶೇಂಗಾ, ತರಕಾರಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ನಿಡಗುಂದಾ, ಶಿರೋಳಿ, ಚಿಂತಪಳ್ಳಿ, ಭಂಟನಳ್ಳಿ, ಕರ್ಚಖೇಡ, ಕೆರೋಳಿ, ಬೆನಕನಳ್ಳಿ, ಸಾಲೇಬೀರನಳ್ಳಿ, ಹಸರಗುಂಡಗಿ, ನಾಗಾಇದಲಾಯಿ, ರುದನೂರ, ಗಡಿಕೇಶ್ವರ, ಕನಕಪೂರ, ಸುಲೇಪೇಟ, ಚಂದನಕೇರಾ, ಐನಾಪೂರ, ಗಡಿಲಿಂಗದಳ್ಳಿ, ಬಸಂತಪೂರ, ಕೋಡ್ಲಿ, ರಟಕಲ್‌, ಕಂಚನಾಳ, ಹುಲಸಗೂಡ, ಮುಕರಂಬಿ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳು ಹಾನಿಯಾಗಿವೆ.

ಕೆಳದಂಡೆ ಮುಲ್ಲಾಮಾರಿ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ ಹರಿದು ಬಿಟ್ಟಿರುವ ಮಳೆಯ ನೀರಿನ ಪ್ರವಾಹದಿಂದ ನದಿ ತೀರದ ಚಿಮ್ಮನಚೋಡ, ತಾಜಲಾಪೂರ, ಕನಕಪೂರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಅಣವಾರ, ಪರದಾರ ಮೋತಕಪಳ್ಳಿ, ಗರಗಪಳ್ಳಿ, ಇರಗಪಳ್ಳಿ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ಬೆಳೆಗಳು ಕೊಚ್ಚಿ ಹೋಗಿವೆ. ಹೂವು ಮೊಗ್ಗು ಕಾಯಿ ಬಿಡುವ ಹಂತದಲ್ಲಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಕಳೆದ ವರ್ಷ 2020 ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಅನೇಕ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗಳು ಹಾನಿಯಾಗಿದ್ದವು. ಆದರೆ ಕೃಷಿ ಮತ್ತು ಕಂದಾಯ ಇಲಾಖೆ ಅಧಿ ಕಾರಿಗಳು ನಿಗದಿತ ಸಮಯದಲ್ಲಿ ಬೆಳೆ ಸಮೀಕ್ಷೆ ನಡೆಸದೇ ಇರುವುದರಿಂದ ರೈತರ ಬೆಳೆ ಹಾನಿ ಪರಿಹಾರ ಬಂದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ ದೂರಿದ್ದಾರೆ.

ಬ್ಯಾಂಕಿನಿಂದ ಪಡೆದ ಬೆಳೆ ಸಾಲ ಮರಳಿ ಹೇಗೆ ತುಂಬಬೇಕೆಂಬ ಆತಂಕ ರೈತರಲ್ಲಿ ಕಾಡುತ್ತಿದೆ. ಬೀಜ ಗೊಬ್ಬರ ಕೀಟ ನಾಶಕ ಕಳೆ ಕೀಳುವುದಕ್ಕಾಗಿ ಖರ್ಚು ಮಾಡಿದ ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಐನಾಪೂರ, ಭೂಯ್ನಾರ, ಕೊಟಗಾ, ಹಸರಗುಂಡಗಿ, ಖಾನಾಪೂರ, ಗಡಿಲಿಂಗದಳಿ, ಚೆನ್ನುರ, ಚೆಂಗಟಾ, ಪಂಗರಗಾ ಗ್ರಾಮಗಳಲ್ಲಿ ರಸ್ತೆಗಳಲ್ಲಿ ನಿರ್ಮಿಸಿದ ಸಣ್ಣ ಸೇತುವೆ (ಸಿಡಿ) ಹಾಳಾಗಿ ವಾಹನಗಳು, ಎತ್ತಿನ ಬಂಡಿ, ದನಕರುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಲೋಕೋಪಯೋಗಿ, ಜಿಪಂ ಇಲಾಖೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Advertisement

*ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next