Advertisement

ಅತಿಯಾದ ನ್ಯಾಯಾಂಗ ಕ್ರಿಯಾಶೀಲತೆ: ಸದನದಲ್ಲಿ ವಿಮರ್ಶೆ

11:37 PM Mar 19, 2021 | Team Udayavani |

ಬೆಂಗಳೂರು: ನ್ಯಾಯಾಂಗ ಕ್ರಿಯಾಶೀಲತೆ ಅತಿಯಾಗಿ ಶಾಸನಸಭೆ ಹಾಗೂ ಜನಪ್ರತಿನಿಧಿಗಳ ಮೇಲೂ ಪ್ರಭುತ್ವ ಸಾಧಿಸಿದೆ ಎಂದು ಸದನದಲ್ಲಿ ಪಕ್ಷಾತೀತವಾಗಿ ಕಟು ವಿಮರ್ಶೆಗೆ ಒಳಗಾಯಿತು.
ನ್ಯಾಯಾಂಗ ಕ್ಷೇತ್ರದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರಮಾಣಪತ್ರ ನೀಡದೆ ಸರಕಾರಿ ನೌಕರರ ಸಹಕಾರ ಗೃಹ ನಿರ್ಮಾಣ ಸಂಘಗಳಲ್ಲಿ ನ್ಯಾಯಾಧೀಶರು ನಿವೇಶನ ಪಡೆದರೂ ಅದು ಅಪರಾಧವಲ್ಲ. ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಯಲ್ಲೂ ಶಾಸಕರು ನ್ಯಾಯಮೂರ್ತಿಗಳ ಪಕ್ಕ ಕುಳಿತುಕೊಳ್ಳಲು ಅವಕಾಶ ಕೊಡದೆ ಕಳ್ಳರಂತೆ ನೋಡುತ್ತಾರೆ. ಅವರೇ ಶ್ರೇಷ್ಠರು, ಅತೀತರು ಎಂಬಂತಾಗಿದೆ ಎಂದು ಮೂರೂ ಪಕ್ಷಗಳ ಸದಸ್ಯರು ವ್ಯಾಖ್ಯಾನ ಮಾಡಿದರು.

Advertisement

ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ ನ್ಯಾಯಾಂಗ ಕ್ಷೇತ್ರದ ಬಗ್ಗೆ ಪ್ರಸ್ತಾವಿಸಿ, ನ್ಯಾಯದಾನದ ಜ್ಯೋತಿ ಆರಿದರೆ ಅಮಾವಾಸ್ಯೆ ಕತ್ತಲಿಗಿಂತ ದೊಡ್ಡ ಕತ್ತಲು ಆವರಿಸುತ್ತದೆ. ನ್ಯಾಯದಾನದ ಆ ದಿವ್ಯಜ್ಯೋತಿ ಆರಿ ಹೋಗುತ್ತದೆಯೇನೋ ಎಂಬ ಆತಂಕ ಉಂಟಾಗಿದೆ ಎಂದರು.

ಆಗ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಇಲ್ಲಿ ಮಾತನಾಡಬಹುದೇ? ನ್ಯಾಯಾಂಗ ನಿಂದನೆ ಆಗುವು ದಿಲ್ಲವೇ? ಎಂದು ಪ್ರಶ್ನಿಸಿದರು. ಅದಕ್ಕೆ ರಮೇಶ್‌ಕುಮಾರ್‌, ಇದು ಶಾಸನಸಭೆ. ಮಾತನಾಡುವ ಅಧಿಕಾರ ಇದೆ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ:ಗಾಳಿಗೆ ಹಾರಿ ಹೋಗುವಂತಿರುವ ಗುಡಿಸಲಿನಲ್ಲಿ ವಾಸ, ಜೀವಕ್ಕೆ ಬೆಲೆ ಇಲ್ಲವೇ?

ಬಿಜೆಪಿಯ ಆರಗ ಜ್ಞಾನೇಂದ್ರ, ನ್ಯಾಯಾಧೀಶರ ವೇತನ, ನ್ಯಾಯಾಲಯ ಸಂಕೀರ್ಣಗಳ ನಿರ್ಮಾಣ ಸೇರಿ ಎಲ್ಲದಕ್ಕೂ ನಾವು ಇಲ್ಲಿ ಬಜೆಟ್‌ ಪಾಸ್‌ ಮಾಡಿಕೊಡುತ್ತೇವೆ. ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ನಮ್ಮನ್ನು ಪಕ್ಕ ಕೂರಿಸಿಕೊಳ್ಳುವುದಿಲ್ಲ. ನಾವು ಕಳ್ಳರಾ? ನಮ್ಮನ್ನು ಪಕ್ಕ ಕೂರಿಸಿಕೊಂಡರೆ ಅವರ ಪ್ರಭಾವದಿಂದ ನಾವು ಒಳ್ಳೆಯವರಾಗಬಹುದಲ್ಲವೇ ಎಂದು ಪ್ರಶ್ನಿಸಿದರು.

Advertisement

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ನ್ಯಾಯಾಧೀಶರದ್ದು ಸಾಂವಿಧಾನಿಕ ಹುದ್ದೆ. ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಯಾವುದೇ ಪ್ರಮಾಣಪತ್ರ ಸಹ ನೀಡದೆ ನಿವೇಶನ ಪಡೆದುಕೊಳ್ಳುತ್ತಾರೆ. ಅಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಪತ್ತೆ ಹಚ್ಚಿದರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದರು.

ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌, ನ್ಯಾಯಾಂಗ ಕ್ಷೇತ್ರದಲ್ಲೂ ಭ್ರಷ್ಟಾಚಾರದ ಆರೋಪಗಳಿವೆ. ನ್ಯಾಯಾಂಗ ವ್ಯವಸ್ಥೆ ಕುಸಿತ ಕಂಡರೆ ಅರಾಜಕತೆ ಉಂಟಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ್‌, ಜೆಡಿಎಸ್‌ನ ಶಿವಲಿಂಗೇ ಗೌಡ, ಬಿಜೆಪಿಯ ಕೆ.ಜೆ.ಬೋಪಯ್ಯ ಅವರು, ಪ್ರಸ್ತುತ ನ್ಯಾಯಾಂಗ ವ್ಯವಸ್ಥೆ ಹಾಗೂ ಹಿಡಿತ ಸಾಧಿಸುತ್ತಿರುವ ಬಗ್ಗೆ ಪ್ರಸ್ತಾವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next