ಕೆಲ ವರ್ಷಗಳಿಂದ ಕರ್ನಾಟಕದ ಹಲವು ವಿವಿಗಳು ಕುಲಪತಿಗಳಿಲ್ಲದೇ ಕಳೆಗುಂದಿರುವುದು ಗಮನಿಸಿದಾಗ ಜನರಿಗೆ ನಮ್ಮ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಭ್ರಮನಿರಸನ ಉಂಟಾಗಿರಬಹುದು. ಭಾರತದ ವಿಶ್ವ ವಿದ್ಯಾಲಯಗಳು ಜಾಗತಿಕ ವಿ.ವಿ.ಗಳ ಓಟಕ್ಕೆ ಸರಿಗೂಡಲು ಹೆಣಗುತ್ತಿರುವುದನ್ನು ಗಮನಿಸಿದ್ದೇವೆ. ಪ್ರತಿ ವರ್ಷ ಬಿಡುಗಡೆಯಾಗುವ ವಿಶ್ವದ “ಟಾಪ್ 10′ ಅಥವಾ “ಟಾಪ್ 100′ ವಿವಿಗಳಲ್ಲಿ ಭಾರತದ ಯಾವುದೇ ವಿಶ್ವವಿದ್ಯಾಲಯವೂ ಸ್ಥಾನಪಡೆಯುತ್ತಿಲ್ಲ. ನಮ್ಮ ರಾಜ್ಯದ ಸರ್ಕಾರಿ, “ಡೀಮ್ಡ್ ಟು ಬಿ’ ಮತ್ತು ಖಾಸಗಿ ವಿವಿಗಳೂ ಉದ್ದೇಶಿತ ಫಲಿತ ತಂದುಕೊಡುವಲ್ಲಿ ವಿಫಲವಾಗಿವೆ. ಹೀಗಾಗಲು ಕಾರಣವೇನು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟಾಗ ಸಮಸ್ಯೆಗೆ ವಿದ್ಯಾರ್ಥಿಗಳತ್ತಲೇ ಬೆರಳು ತೋರಿಸುವುದು ತಪ್ಪು ಎಂದು ಅರಿವಾಗುತ್ತದೆ.
ಕುಲಪತಿ ನೇಮಕಾತಿಯಲ್ಲಿ ವಿಚಾರವನ್ನೇ ನೋಡಿ. ಈ ವಿಳಂಬವು ರಾಜ್ಯದ ಶೈಕ್ಷಣಿಕ ಪ್ರಗತಿಗೆ ಅಡ್ಡಗಾಲಾಗಿದೆ. ಆದರೂ ನೂತನ ಸರ್ಕಾರ ಈ ನಿಟ್ಟಿನಲ್ಲಿ ಆಶಾದಾಯಕ ಹೆಜ್ಜೆಯಿಟ್ಟಿದೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಕುಲಪತಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಸಮ್ಮಿಶ್ರ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಚುರುಕುಗೊಂಡಿದೆ. ಒಂದೂವರೆ ವರ್ಷದಿಂದ ಖಾಲಿ ಇದ್ದ ಬೆಂಗಳೂರು ವಿ.ವಿ., ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಹುಬ್ಬಳ್ಳಿಯಲ್ಲಿರುವ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳ ನೇಮಕ ಪೂರ್ಣಗೊಂಡಿದೆ.
ಮೈಸೂರು ವಿ.ವಿ., ಮಂಗಳೂರು ವಿ.ವಿ.ಸೇರಿದಂತೆ ರಾಜ್ಯದ ಮೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಹುದ್ದೆ ಖಾಲಿ ಇದೆ. ಬೆಂಗಳೂರು, ಮೈಸೂರು ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಸಂಬಂಧ ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸತತ ಒಂದು ವರ್ಷಗಳ ಕಾಲ ಶೀತಲ ಸಮರ ನಡೆದೇ ಇತ್ತು. ಸರ್ಕಾರದ ಅವಧಿ ಪೂರ್ಣಗೊಂಡು ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಎರಡು ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರು ಕುಲಪತಿಗಳ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಆದರೆ, 2017ರ ಜನವರಿಯಲ್ಲಿ ಖಾಲಿಯಾಗಿದ್ದ ಮೈಸೂರು ವಿ.ವಿ. ಕುಲಪತಿ ಹುದ್ದೆ ಇಂದಿಗೂ ಭರ್ತಿಯಾಗಿಯೇ ಇಲ್ಲ.
ಮೈಸೂರು ವಿವಿ ಕುಲಪತಿ ಆಯ್ಕೆ ಸಂಬಂಧ ಶೋಧನಾ ಸಮಿತಿ ಹಿಂದಿನ ಸರ್ಕಾರಕ್ಕೆ ಎರಡು ಪಟ್ಟಿಯನ್ನು ಸಲ್ಲಿಸಿತ್ತು. ಆದರೆ, ಆ ಎರಡೂ ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ನಂತರ ಹೊಸದಾಗಿ ಶೋಧನಾ ಸಮಿತಿ ರಚಿಸುವಂತೆ ನೇರವಾಗಿ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ಪತ್ರ ಬರೆದಿದ್ದರು. ಅದರಂತೆ ಹೊಸ ಶೋಧನಾ ಸಮಿತಿ ಈಗ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಕಾಂಗ್ರೆಸ್ ಸರ್ಕಾರವು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ವಿಧೇಯಕ-2017ಅನ್ನು ಸಿದ್ಧಪಡಿಸಿ, ಎರಡು ಸದನದಲ್ಲೂ ಒಪ್ಪಿಗೆ ಪಡೆದು, ರಾಜ್ಯಪಾಲರಿಗೆ ಸಲ್ಲಿಸಿತ್ತು. ರಾಜ್ಯಪಾಲರು ಅದಕ್ಕೆ ಇನ್ನೂ ಸಹಿ ಹಾಕಿಲ್ಲ. ಕಾರಣ, ಕುಲಪತಿ ಆಯ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಇದ್ದ ಪರಮಾಧಿಕಾರವನ್ನು ಈ ವಿಧೇಯಕದಲ್ಲಿ ಮೊಟಕುಗೊಳಿಸಲಾಗಿದೆ. ಈ ವಿಧೇಯಕದ ಚರ್ಚೆಯಿಂದಾಗಿ ಕೆಲವು ವಿವಿಯ ಕುಲಪತಿ ಆಯ್ಕೆಯು ವಿಳಂಬವಾಗಿತ್ತು.
ಕುಲಪತಿ ನೇಮಕಾತಿಯಲ್ಲಿ ಆಗುವ ವಿಳಂಬವು ಬೋಧನೆ ಮತ್ತು ಸಂಶೋಧನೆಯಂಥ ಪ್ರಮುಖ ಸಂಗತಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಹಿಂದೆಲ್ಲ ಕುಲಪತಿ ನೇಮಕ ವಿಚಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಆದರೀಗ ಸೂಕ್ತ ಸಮಯದಲ್ಲಿ ಭರ್ತಿ ಮಾಡದೆ “ಇನ್-ಚಾರ್ಜ್’ನಂಥ ಹಂಗಾಮಿ ವ್ಯವಸ್ಥೆಯಲ್ಲೇ ಮುಂದುವರಿಸುವ ಪರಿಪಾಠವನ್ನು ಶಿಕ್ಷಣ ತಜ್ಞರು, ಮಾಜಿ ಕುಲಪತಿಗಳು ವಿರೋಧಿಸುತ್ತಲೇ ಇದ್ದಾರೆ. ನೇಮಕಾತಿಯಲ್ಲಿ ಯಾರಿಗೆ ಮೇಲುಗೈಯಾಗುತ್ತಿದೆ ಎನ್ನುವುದು ಪ್ರಶ್ನೆಯೇ ಆಗಬಾರದು. ಇಂದಿನ ಬದಲಾವಣೆಯ ಜಗತ್ತಿಗೆ ಸರಿಹೊಂದುವಂಥ ದಿಕ್ಕನ್ನು ವಿ.ವಿ.ಗಳಿಗೆ ದಯಪಾಲಿಸಬಲ್ಲ ಕುಲಪತಿಗಳ ಅಗತ್ಯವಿದೆ. ಆದ್ದರಿಂದ ಅರ್ಹರಿಗೆ ಮನ್ನಣೆ ಸಿಗಲಿ.