Advertisement

ಘನತ್ಯಾಜ್ಯ ಬಳಸಿ ಇಂಧನ ಉತ್ಪಾದಿಸಲು ಮನಪಾ ಚಿಂತನೆ 

06:13 AM Jan 03, 2019 | |

ಮಹಾನಗರ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯ ಬಳಸಿ ಇಂಧನ ಉತ್ಪಾದಿಸಲು ಬೆಂಗಳೂರಿನ ಬಯೋ ಲೀಪ್‌ ಕಂಪೆನಿ ಪ್ರಸ್ತಾವನೆ ಸಲ್ಲಿಸಿದೆ. ಇದನ್ನು ಶೀಘ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಮನಪಾ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ನವೀನ್‌ ಡಿ’ಸೋಜಾ ತಿಳಿಸಿದರು.

Advertisement

ಬುಧವಾರ ಮನಪಾ ಸದಸ್ಯರು ಮತ್ತು ಅಧಿಕಾರಿಗಳ ತಂಡ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿದಿನ ಸುಮಾರು 350 ಟನ್‌ ತ್ಯಾಜ್ಯ ಪಚ್ಚನಾಡಿಗೆ ಬಂದು ಬೀಳುತ್ತಿದೆ. ತ್ಯಾಜ್ಯಗಳನ್ನು ಇಂಧನವಾಗಿ ಪರಿವರ್ತಿಸಿದ್ದಲ್ಲಿ ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ. ಸರಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದಲ್ಲಿ ಪಚ್ಚನಾಡಿಯಲ್ಲಿ ಇಂಧನ ಉತ್ಪಾದನ ಘಟಕ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

ಮನಪಾ ಆಯುಕ್ತ ಮಹಮ್ಮದ್‌ ನಜೀರ್‌ ಮಾತನಾಡಿ, ಈ ಹಿಂದೆ ಸುಮಾರು 10 ಎಕ್ರೆ ಜಾಗದಲ್ಲಿ ಹಾಕಿದ ತ್ಯಾಜ್ಯವನ್ನು ಮಣ್ಣುಹಾಕಿ ಮುಚ್ಚಲಾಗಿದೆ. ಈಗ ಸುಮಾರು 12 ಎಕ್ರೆ ಜಾಗದಲ್ಲಿ ತ್ಯಾಜ್ಯ ಹಾಕಿ ಅದನ್ನು ಮಣ್ಣಿನಿಂದ ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಘನತ್ಯಾಜ್ಯ ಬಳಸಿ ಇಂಧನ ಉತ್ಪಾದಿಸುವ ಘಟಕಕ್ಕೆ ಈ ಹಿಂದೆ ಮಣ್ಣು ಹಾಕಿ ಮುಚ್ಚಲಾದ ಗೊಬ್ಬರವಾಗದ ವಸ್ತುಗಳು ಹಾಗೂ ಪ್ಲಾಸ್ಟಿಕ್‌ಗಳನ್ನು ಕೂಡಾ ಬಳಸಲಾಗುತ್ತದೆ ಎಂದು ತಿಳಿಸಿದರು.

ಡ್ಯಾಂಪಿಂಗ್‌ ಯಾರ್ಡ್‌ಗೆ ಅನಧೀಕೃತ ವಾಹನಗಳಿಂದ ತ್ಯಾಜ್ಯ ತಂದು ಎಸೆಯಲಾಗುತ್ತಿದೆ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಈ ಪ್ರದೇಶಕ್ಕೆ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಅದನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದರು.

ಕಾರ್ಮಿಕರ ಕೊರತೆ
ನಗರದಲ್ಲಿ ತ್ಯಾಜ್ಯ ವಿಂಗಡಣೆಯಾಗದೆ ಹಸಿ ಮತ್ತು ಒಣ ಕಸ ನೇರವಾಗಿ ಬಂದು ಪಚ್ಚನಾಡಿಯ ಸಂಸ್ಕರಣೆ ಘಟಕಕ್ಕೆ ಬರುತ್ತಿದೆ. ಪ್ರಥಮ ಹಂತದಲ್ಲಿ ಯಂತ್ರದ ಮೂಲಕ ಪ್ಲಾಸ್ಟಿಕ್‌ ಮತ್ತು ಮಣ್ಣು , ಹಸಿ ಕಸ ಬೇರ್ಪಡಿಸಲಾಗುತ್ತಿದೆ. ಪ್ರತಿದಿನ 20ರಿಂದ 25 ಟನ್‌ ಗೊಬ್ಬರ ಉತ್ಪಾದಿಸುವ ಘಟಕವಿದೆ. ಆದರೆ ಈಗ 10 ಟನ್‌ ಗೊಬ್ಬರ ಮಾತ್ರ ತಯಾರಾಗುತ್ತಿದೆ. ನಗರದ ಮಾರ್ಕೆಟ್‌ಗಳಿಂದ ಬರುವ ಹಸಿ ಕಸವನ್ನು ಬಳಸಿ ಎರೆಹುಳ ಗೊಬ್ಬರ ತಯಾರಿಸಲಾಗುತ್ತಿದೆ. ಪ್ರತಿ ದಿನ 10ರಿಂದ 15 ಟನ್‌ ಎರೆ ಗೊಬ್ಬರ ಉತ್ಪಾದಿಸಬಹುದಾದ ಘಟಕದಲ್ಲಿ ಈಗ 1 ಟನ್‌ ಮಾತ್ರ ಉತ್ಪಾದನೆಯಾಗುತ್ತಿದೆ. ಹಸಿ ಕಸ ಒಣ ಕಸ ಬೇರ್ಪಡಿಸದೆ ಇರುವುದು ಹಾಗೂ ಕಾರ್ಮಿಕರ ಕೊರತೆ ಇದಕ್ಕೆ ಕಾರಣ ಎಂದು ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿ ತಿಳಿಸಿದರು.

Advertisement

ಉಪ ಮೇಯರ್‌ ಕೆ.ಮಹಮ್ಮದ್‌, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾರ್ಪೊರೇಟರ್‌ಗಳಾದ ಅಪ್ಪಿ, ಮಧುಕಿರಣ್‌, ಅಖೀಲಾ ಆಳ್ವ, ಪ್ರತಿಭಾ ಕುಳಾಯಿ, ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ, ಕಾರ್ಯನಿರ್ವಾಹಕ ಅಭಿಯಂತರ ಗುರುರಾಜ್‌  ಮಳಹಳ್ಳಿ, ಪರಿಸರ ಅಭಿಯಂತರ ಮಧು ಎಸ್‌. ಮನೋಹರ್‌ ಉಪಸ್ಥಿತರಿದ್ದರು.

ಕಂಪೆನಿ, ಮೆಸಾಂ, ಮನಪಾ ಮಧ್ಯೆ ಒಪ್ಪಂದ
ಇಂಧನ ಉತ್ಪಾದಿಸುವ ಘಟಕ ನಿರ್ಮಿಸಲು ಬಯೋಲಿಪ್‌ ಕಂಪೆನಿ ಸುಮಾರು 5 ಎಕ್ರೆ ಜಾಗ ನೀಡಲು ಮನವಿ ಮಾಡಿದೆ. ಬರುತ್ತಿರುವ ಎಲ್ಲ ತ್ಯಾಜ್ಯವನ್ನು ಘಟಕ ನೇರವಾಗಿ ಬಳಸಲಿದೆ. ಉತ್ಪಾದನೆಯಾಗುವ ಇಂಧನ ಬಳಕೆ ಸಂಬಂಧಿಸಿ ಬಯೋಲಿಪ್‌ ಕಂಪೆನಿ, ಮೆಸ್ಕಾಂ ಮತ್ತು ಮನಪಾ ಮಧ್ಯೆ ಒಪ್ಪಂದ ನಡೆಯಲಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next