ಲ್ಲದೇ ಇದ್ದರೆ “ನಾವು ನೋಡಿಕೊಳ್ಳಬೇಕಾಗುತ್ತದೆ’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
Advertisement
ಶನಿವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಮರಳಿದ ನಂತರ ಪಕ್ಷದ ವಿವಿಧ ಘಟಕಗಳ ಪ್ರಮುಖರ ಜತೆ ಸಭೆ ನಡೆಸಿದ ಶಾ ಅವರಿಗೆ ರಾಜ್ಯ ಘಟಕದ ಚುನಾವಣಾ ಸಿದ್ಧತೆಗಳ ಬಗ್ಗೆ ಸಮಾಧಾನ ಉಂಟಾಗಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಖಡಕ್ಕಾಗಿಯೇ ಪ್ರತಿಕ್ರಿಯಿಸಿದ ಅವರು, “ಯುದ್ಧಕಾಲೇ ಶಸ್ತ್ರಾಭ್ಯಾಸ’ ಬೇಡ ಎಂದು ಹೇಳಿದ್ದಾರೆ. ಕೋರ್ ಕಮಿಟಿ ಸದಸ್ಯರು ಮತ್ತು ವಿಧಾನ ಸಭೆ, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳು, ಮೋರ್ಚಾಗಳ ಅಧ್ಯಕ್ಷರು- ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರು, ರಾಜಕೀಯ ವ್ಯವಹಾರಗಳ ಸಮಿತಿ ಜತೆ ಪ್ರತ್ಯೇಕ ಸಭೆಗಳನ್ನು ನಡೆಸಿ ಎಲ್ಲರಿಗೂ “ಅಗ್ನಿ ಪರೀಕ್ಷೆ’ ಒಡ್ಡಿದ್ದಾರೆ. ಸ್ಥಳೀಯ ರಾಜಕೀಯ ಸನ್ನಿವೇಶಗಳನ್ನು ಆಧರಿಸಿ ಚುನಾವಣಾ ಕಾರ್ಯತಂತ್ರ ರೂಪಿಸುವ ಕೆಲಸ ವಹಿಸಿದ್ದಾರೆ.
ಪದಾಧಿಕಾರಿಗಳಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದ ಅಮಿತ್ ಶಾ ಅವರಿಗೆ ಇದುವರೆಗೆ ಚುನಾವಣೆ ನಿಟ್ಟಿನಲ್ಲಿ ಅವರು ಮಾಡಿರುವ ಕೆಲಸಗಳು ಅತೃಪ್ತಿ ಮೂಡಿಸಿವೆ. ಹೀಗಾಗಿ ಗೆಲ್ಲಲು ಪೂರಕವಾದ ಕಾರ್ಯತಂತ್ರಗಳನ್ನು ರೂಪಿಸಲು ಮತ್ತೂಂದು ಅವಕಾಶ ನೀಡಿರುವ ಅವರು, ತಮ್ಮ ಮುಂದಿನ ಭೇಟಿ ವೇಳೆ ಹೇಳಿದ ಕೆಲಸ ಪೂರೈಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈಗೊಂಡಿರುವ ಕ್ರಮಗಳ ಕುರಿ ತಂತೆ ಅಮಿತ್ ಶಾ ಅವರ ಪ್ರಶ್ನೆಗೆ ಉತ್ತರಿಸಲು ಸಭೆಯಲ್ಲಿ ಹಲವರು ತಡಬಡಾಯಿಸಿದರು. ಇದರಿಂದ ಬೇಸರಗೊಂಡ ಶಾ, “ಯುದ್ಧಕಾಲೇ ಶಸ್ತ್ರಾಭ್ಯಾಸ’ ಎನ್ನುವಂತೆ ಚುನಾವಣೆ ದಿನ ಸಮೀಪಿಸಿದಾಗ ಜನರ ಬಳಿ ತೆರಳುವುದಲ್ಲ. ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು. ಚುನಾವಣೆಗೆ ನಾಲ್ಕೈದು ತಿಂಗಳು ಇದೆ ಎನ್ನುವಾಗಲೇ ಜನರನ್ನು ತಲುಪಿರಬೇಕು. ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದಕ್ಕಿಂತ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು ಎಂಬ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Related Articles
ಬಿಜೆಪಿ ಜಿಲ್ಲಾ ಘಟಕಗಳ ಕಾರ್ಯವೈಖರಿಯನ್ನೂ ಪರಿಶೀಲಿಸಿರುವ ಅಮಿತ್ ಶಾ ಅವರು, ಜಿಲ್ಲಾ ಧ್ಯಕ್ಷರು ತಮ್ಮ ಜಿಲ್ಲೆಯ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾರ್ಯತಂತ್ರ ಗಳನ್ನು ರೂಪಿಸಬೇಕು ಎಂಬ ಸೂಚನೆ ನೀಡಿದ್ದಾರೆ. ಅಲ್ಲದೆ, ಮುಂದಿನ ಬಾರಿ ರಾಜ್ಯಕ್ಕೆ ಆಗಮಿಸಿದಾಗ ಜಿಲ್ಲಾಧ್ಯಕ್ಷರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಪರಿಶೀಲಿಸುತ್ತೇನೆ. ಅಷ್ಟರೊಳಗೆ ಅವರದ್ದೇ ಆದ ಕಾರ್ಯತಂತ್ರಗಳನ್ನು ರೂಪಿಸಿ ಸಿದ್ಧವಾಗಿರುವಂತೆ ಸೂಚಿಸಿ ಎಂದು ಜಿಲ್ಲಾ ಉಸ್ತುವಾರಿ ಮತ್ತು ವಿಭಾಗ ಉಸ್ತುವಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Advertisement
ಶಾ ಇಂದಿನ ಕಾರ್ಯಕ್ರಮಗಳು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ಸೋಮವಾರ ತೆರೆ ಬೀಳಲಿದೆ. ಬೆಳಗ್ಗೆ 8.30ರಿಂದ ಸಂಜೆಯವರೆಗೆ ವಿವಿಧ ವಿಭಾಗಗಳ ಸಭೆ ನಡೆಸಲಿರುವ ಅವರು, ಸಂಜೆ 7.30ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಬೆಳಗ್ಗೆ 8.30ಕ್ಕೆ ಗೌಪ್ಯ ಸ್ಥಳದಲ್ಲಿ ಸಂಘ ಪರಿವಾರದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ 11.30ಕ್ಕೆ ಬಿಜೆಪಿಯ ವಿವಿಧ ಪ್ರಕಲ್ಪ ಮತ್ತು ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ಮಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದ 11 ಕ್ಷೇತ್ರಗಳ ಉಸ್ತುವಾರಿಗಳೊಂದಿಗೆ ಮುಂಬರುವ ಲೋಕಸಭೆ ಚುನಾವಣೆ ಕುರಿತಂತೆ ಮಾತುಕತೆ ನಡೆಸುವರು. ಇದಾದ ಬಳಿಕ ಸಂಜೆ 3.30ಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮ ನಿರ್ವಹಣೆ ಕುರಿತು, 4.30ಕ್ಕೆ ಇತ್ತೀಚೆಗೆ ಬಿಜೆಪಿ ಸೇರಿದ ವಿವಿಧ ಮುಖಂಡರೊಂದಿಗೆ, ಸಂಜೆ 5.30ಕ್ಕೆ ಬಿಜೆಪಿ ಆಜೀವನ್ ಸಹಯೋಗಿಗಳೊಂದಿಗೆ, 6 ಗಂಟೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರೊಂದಿಗೆ ಹಾಗೂ 6.30ಕ್ಕೆ ಹಿಂದುಳಿದ ವರ್ಗಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸುವರು. ಬಳಿಕ ದೆಹಲಿಗೆ ವಾಪಸಾಗುವರು.
ಹೊಸಬರೊಂದಿಗೆ ಇಂದು ಸಭೆ: ಅನ್ಯ ಪಕ್ಷ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ಪ್ರಮುಖ ಮುಖಂಡರನ್ನು ಸೋಮವಾರ ಅಮಿತ್ ಶಾ ಭೇಟಿ ಮಾಡಲಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಪಕ್ಷದಲ್ಲಿ ಸಕ್ರಿಯವಾಗಿ ಡಗಿಸಿಕೊಳ್ಳುವ ಕುರಿತು ಮಾತುಕತೆ ನಡೆಸಲಿದ್ದಾರೆ. ಸಂಜೆ 4.30ಕ್ಕೆ ಈ ಭೇಟಿ ನಿಗದಿಯಾಗಿದ್ದು, ಇತ್ತೀಚೆಗೆ ಪಕ್ಷ ಸೇರಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಕುಮಾರ್ ಬಂಗಾರಪ್ಪ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಾಬಲ್ಯ ಹೊಂದಿರುವ ಸುಮಾರು 15 ಮಂದಿಯನ್ನು ಸಭೆಗೆ ಆಹ್ವಾನಿಸಲಾಗಿದೆ.
ಸಂಘ ಪರಿವಾರದ ಮುಖಂಡರ ಜತೆ ಇಂದು ಸಭೆಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಬೆಳಗ್ಗೆ ಸಂಘ ಪರಿವಾರದ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಿದ್ದು, ಪಕ್ಷ ಮತ್ತು ಸಂಘ ಪರಿವಾರದ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬೆಳಗ್ಗೆ 8.30ರಿಂದ ಸುಮಾರು ಎರಡೂವರೆ ಗಂಟೆ ಕಾಲ ಸಂಘ ಪರಿವಾರದ ಪ್ರಮುಖರೊಂದಿಗೆ ಅಮಿತ್ ಶಾ ಸಮಾಲೋಚನೆ ನಡೆಸಲಿದ್ದಾರೆ. ಸಭೆ ನಡೆಯುವ ಸ್ಥಳವನ್ನು ಗೌಪ್ಯವಾಗಿಡಲಾಗಿದ್ದು, ಸಭೆಗೆ ಆಗಮಿಸಲಿರುವವರಿಗೆ ಮಾತ್ರ ಮಾಹಿತಿ ನೀಡಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸಂಘ ಪರಿವಾರ ಮತ್ತು ಬಿಜೆಪಿ ಒಟ್ಟಾಗಿ ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರದ ಮುಖಂಡರು ಮತ್ತು ಬಿಜೆಪಿ ನಾಯಕರ ಮಧ್ಯೆ ಸಮನ್ವಯದ ಕೊರತೆ ಎದುರಾಗಿದೆ. ಅಲ್ಲದೆ, ಪರಿವಾರದಿಂದ ಬಿಜೆಪಿಗೆ ಬಂದಿರುವ ಬಿ.ಎಲ್.ಸಂತೋಷ್ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಇತ್ತೀಚೆಗೆ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಇದುವರೆಗೆ ಇದ್ದ ಈ ಎಲ್ಲಾ ಸಮಸ್ಯೆಗಳಿಗೆ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ರವಿಶಂಕರ್ ಗುರೂಜಿ “ಸತ್ಸಂಗ’ದಲ್ಲಿ ಶಾ
ಬೆಂಗಳೂರು: ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾನುವಾರ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗದಲ್ಲಿ ಭಾಗವಹಿಸಿದರು. ಸಂಜೆ 7 ಗಂಟೆ ಸುಮಾರಿಗೆ ಸತ್ಸಂಗದಲ್ಲಿ ಸೇರಿದ್ದ 50 ಸಾವಿರಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಭಾರತವು ಇಂದು ವಿಶ್ವದಲ್ಲೇ ಬಲಿಷ್ಠ ಹಾಗೂ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ದೇಶದ ಆರ್ಥಿಕ ಶಕ್ತಿ ವೇಗವಾಗಿ ಬೆಳೆಯುತ್ತಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂತರ, ಧಾರ್ಮಿಕ ಮುಖಂಡರ ಮಾರ್ಗದರ್ಶನ ಅತಿ ಅವಶ್ಯಕ’ ಎಂದರು. ದೇಶದ ನವ ನಿರ್ಮಾಣದಲ್ಲಿ ಸಾಧು, ಸಂತರ ಪಾತ್ರ ಹಾಗೂ ಮಾಡಬೇಕಾದ ಮಾರ್ಗದರ್ಶನ ಬಗ್ಗೆ ವಿವರಿಸಿದರು. ರವಿಶಂಕರ ಗುರೂಜಿಯವರು ಮಾಡುತ್ತಿರುವ ಸಾಮಾಜಿಕ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರವಿಶಂಕರ್ ಗುರೂಜಿಯವರು ಬಿಜೆಪಿ ನಾಯಕರಿಗೆ ಆಶೀರ್ವಾದ ಮಾಡಿ, “ಬಲಿಷ್ಠ ಹಾಗೂ ಸಮೃದ್ಧ ರಾಷ್ಟ್ರದ ಪರಿಕಲ್ಪನೆಯಡಿ ಸೇವೆ ಸಲ್ಲಿಸುತ್ತಿರುವ ನಾಯಕರಿಗೆ ಸುದೀರ್ಘ ಜೀವನ ಪ್ರಾಪ್ತಿಯಾಗಲಿ’ ಎಂದು ಶುಭ ಹಾರೈಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಕೇಂದ್ರ ಸಚಿವ ಅನಂತ ಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.