ಕಲಬುರಗಿ: ಮಹತ್ವದ ಇಂಜಿನಿಯರಿಂಗ್, ಬಿಎಸ್ಸಿ ಕೃಷಿ (ಕೃಷಿ ವಿಜ್ಞಾನ) ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಯ ಸಿಇಟಿ ಪರೀಕ್ಷೆ ಗೊಂದಲದ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬಿಎಸ್ಸಿ ಕೃಷಿ, ಪಶು ಸಂಗೋಪನಾ ಹಾಗೂ ತೋಟಗಾರಿಕೆ ಸೇರಿ ಇತರ ಕೋರ್ಸುಗಳಲ್ಲಿ ರೈತರ ಮಕ್ಕಳಿಗೆ ಶೇ. 40ರಷ್ಟು ಮೀಸಲಾತಿ ಸೀಟುಗಳಿಗೆ ಪರೀಕ್ಷೆ ನಡೆಸಲು ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಿಇಟಿಗೆ ಮುಂಚೆ ರೈತರ ಮಕ್ಕಳ ಕೋಟಾದಡಿ ಸೀಟುಗಳಿಗೆ ಈ ಹಿಂದಿನಿಂದಲೂ ಪರೀಕ್ಷೆ ನಡೆಸಿ, ಈ ಫಲಿತಾಂಶದೊಂದಿಗೆ ಸಿಇಟಿ ಫಲಿತಾಂಶ ಆಧರಿಸಿ ರ್‍ಯಾಂಕ್ ಪ್ರಕಟಿಸುತ್ತಾ ಬರಲಾಗುತ್ತಿದೆ. ಆದರೆ ಕಳೆದ ವರ್ಷ ಈ ಪರೀಕ್ಷೆಯನ್ನೇ ರದ್ದುಪಡಿಸಲಾಗಿತ್ತು. ಪ್ರಸಕ್ತ ವರ್ಷ ಪರೀಕ್ಷೆ ನಡೆಸುವುದನ್ನು ಚಾಲ್ತಿಗೆ ತರಲಾಗಿದೆ.
ಬಿಎಸ್ಸಿ ಕೃಷಿ, ಪಶು ಸಂಗೋಪನಾ ಹಾಗೂ ತೋಟಗಾರಿಕಾ ಪದವಿಗಳ ಪ್ರವೇಶಾತಿಯಲ್ಲಿ ಶೇ. 25ರಷ್ಟು ಸಿಇಟಿ ಅಂಕ, ಶೇ. 25ರಷ್ಟು ಪಿಯುಸಿಯಲ್ಲಿನ ವಿಷಯಗಳ ಥೇರಿ ಅಂಕಗಳನ್ನು ಪರಿಗಣಿಸಿದರೆ ಇನ್ನುಳಿದ ಶೇ. 50ರಷ್ಟು ಅಂಕಗಳನ್ನು ರೈತರ ಮಕ್ಕಳಿಗೆ ಪ್ರಾತ್ಯಕ್ಷಿಕವಾಗಿ (ಪ್ರಾಯೋಗಿಕ) ಪರೀಕ್ಷೆ ನಡೆಸಿ ಅಂಕಗಳನ್ನು ನಿಗದಿ ಮಾಡಲಾಗುತ್ತದೆ. ಆದರೆ ಕಳೆದ ವರ್ಷ ಮಾತ್ರ ರೈತರ ಮಕ್ಕಳ ಕೋಟಾ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು.
ಕೊವಿಡ್-19 ಹಿನ್ನೆಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನೇ ನಡೆಸಿರಲಿಲ್ಲ. ಪರೀಕ್ಷೆ ರದ್ದಾದ ಕುರಿತು ಕಳೆದ 2020ರ ಆಗಸ್ಟ್ 21ರಂದು “ಉದಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಪರೀಕ್ಷೆ ರದ್ದಾಗಿರುವುದಕ್ಕೆ ರೈತ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ವರ್ಷದಿಂದ ಮತ್ತೆ ಪರೀಕ್ಷೆ ಜಾರಿಗೆ ತರಲಾಗಿದೆ. ರೈತರ ಮಕ್ಕಳು ನಗರ ಪ್ರದೇಶದಲ್ಲಿ ಓದುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿದ್ದುಕೊಂಡು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಮಕ್ಕಳು ವಿವಿಗಳು ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಕೃಷಿ ಉಪಕರಣಗಳು, ರಸಗೊಬ್ಬರ ಸೇರಿ ಕೃಷಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ಸರಳವಾಗಿ ಹೇಳುತ್ತಾರೆ.
ಆದರೆ ನಗರದಲ್ಲಿದ್ದುಕೊಂಡು ಓದಿದ ಮಕ್ಕಳಿಗೆ ಕಷ್ಟವಾಗುತ್ತದೆ. ರೈತರ ಮಕ್ಕಳಿಗೆ ಅನುಕೂಲವಾಗಲೆಂದೇ ನಿಯಮ ಹಾಗೂ ಕಾನೂನು ಜಾರಿಗೆ ತರಲಾಗಿದೆ. ಆದರೆ ಕಳೆದ ವರ್ಷ ಅನೇಕ ಕಾರಣಗಳನ್ನು ನೀಡಿ ಪರೀಕ್ಷೆ ರದ್ದುಪಡಿಸಲಾಗಿತ್ತು. ಈ ವರ್ಷ ಸಿಇಟಿ ನಡೆಸುವ ಮುಂಚೆಯೇ ರೈತರ ಮಕ್ಕಳ ಕೋಟಾದಡಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಇದರಿಂದ ರಾಜ್ಯಾದ್ಯಂತ ರೈತ ಮಕ್ಕಳಿಗೆ ಸುಮಾರು ಮೂರು ಸಾವಿರ ಬಿಎಸ್ಸಿ ಕೃಷಿ, ಪಶು ಹಾಗೂ ತೋಟಗಾರಿಕಾ ಪದವಿಗಳ ಸೀಟುಗಳು ಸಿಗಲಿವೆ. ಕಳೆದ ವರ್ಷ ರದ್ದಾದ ಮಕ್ಕಳ ಕೋಟಾದ ಸೀಟುಗಳಿಗೆ ಈ ವರ್ಷ ಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ರೈತರು ಹಾಗೂ ಬಿಎಸ್ಸಿ ಕೃಷಿ, ಪಶು ಸಂಗೋಪನಾ ಹಾಗೂ ತೋಟಗಾರಿಕೆ ಪದವಿ ಪ್ರವೇಶಾತಿ ಬಯಸಿರುವ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.