ಬ್ಯಾಡಗಿ: ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಜೂ. 25ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸರಕಾರದ ಮಾರ್ಗಸೂಚಿಯಂತೆ ಎಲ್ಲ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಪಾಲಕರು ಯಾವುದೇ ಆತಂಕವಿಲ್ಲದೆ ಮಕ್ಕಳನ್ನು ಪರೀಕ್ಷೆಗೆ ಕಳಿಸುವಂತೆ ಶಿಕ್ಷಣಾಧಿಕಾರಿ ಬಿ.ಕೆ. ರುದ್ರಮುನಿ ಮನವಿ ಮಾಡಿದರು.
ಪಟ್ಟಣದ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಸವಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಿದ್ಧವಾಗಿದ್ದು, ಇದಕ್ಕೆ ಇಲಾಖೆಯೂ ಅತ್ಯಂತ ಮುತುವರ್ಜಿ ವಹಿಸಿ ಎಲ್ಲ ಸುರಕ್ಷತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸಲು ಸಿದ್ಧವಾಗಿದೆ ಎಂದರು.
7 ಕೇಂದ್ರ 2041 ವಿದ್ಯಾರ್ಥಿಗಳು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ತಾಲೂಕಿನಲ್ಲಿ ಒಟ್ಟು 7 ಕೇಂದ್ರಗಳನ್ನು ಗುರುತಿಸಲಾಗಿದ್ದು, ಅನ್ಯ ಜಿಲ್ಲೆಗಳಿಂದ ಬಂದ 58 ವಿದ್ಯಾರ್ಥಿಗಳು, 970 ಬಾಲಕರು, 1013 ಬಾಲಕಿಯರು ಸೇರಿದಂತೆ ಒಟ್ಟು 2041 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದರು.
ಒಟ್ಟು 154 ಸಿಬ್ಬಂದಿಗಳು: ಪಶ್ನೆ ಪತ್ರಿಕೆ ಪಾಲಕರು, ಆಸನ ಜಾಗೃತ ದಳ, ಮಾರ್ಗಾಧಿಕಾರಿಗಳು, ಮೊಬೈಲ್ ಸ್ವಾಧಿನಾಧಿಕಾರಿ, ಥರ್ಮಲ್ ಸ್ಕ್ಯಾನಿಂಗ್ ನಡೆಸಲು ತಾಲೂಕು ವೈದ್ಯಾಧಿಕಾರಿಗಳ ಸಿಬ್ಬಂದಿ, ಪರೀಕ್ಷಾ ಕೇಂದ್ರದ ಸುತ್ತ ಹೈಡ್ರೋ ಕ್ಲೋರೈಡ್ ಸಿಂಪಡನೆ ಸೇರಿದಂತೆ ಕೆಮ್ಮು ಜ್ವರ ಕಂಡುಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಎರಡು ಕೊಠಡಿಗಳನ್ನು ಕೇಂದ್ರದಲ್ಲಿ ಮೀಸಲಿರಿಸಲಾಗಿದ್ದು, ಒಟ್ಟು 154 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಒಟ್ಟು ಹತ್ತು ಸಾವಿರಕ್ಕೂ ಮಾಸ್ಕ್ ವಿದ್ಯಾರ್ಥಿಗಳಿಗೆ ಸಿದ್ಧವಾಗಿದೆ. ಅಲ್ಲದೇ ಕೇಂದ್ರದಲ್ಲಿ ಸ್ಯಾನಿಟೈಸರ್ ಸಹ ಇಡಲಾಗುತ್ತಿದೆ. ಉಳಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆಗೆ ಸಾರಿಗೆ ವ್ಯವಸ್ಥಾಪಕರಿಗೆ ಮವನಿ ಮಾಡಿಕೊಳ್ಳಲಾಗಿದ್ದು, ಯಾವುದೇ ಆತಂಕ ಭಯವಿಲ್ಲದೇ ಮಕ್ಕಳನ್ನು ಪರೀಕ್ಷೆಗೆ ಕಳಿಸುವಂತೆ ಅವರು ಮನವಿ ಮಾಡಿದರು. ಎಂ.ಎಫ್. ಬಾರ್ಕಿ, ಎನ್. ತಿಮ್ಮಾರೆಡ್ಡಿ, ಸುಭಾಷ ಇದ್ದರು.