ಪರೀಕ್ಷೆಗಳು ಮುಂದೂಡಲ್ಪಟ್ಟಾಗ, ಅವಳಿಗಿಂತ ಹೆಚ್ಚು ನನಗೇ ಕಳವಳ ಶುರುವಾಯ್ತು.
Advertisement
“ಅಯ್ಯೋ ದೇವರೇ, ಇನ್ನು ಪರೀಕ್ಷೆ ಮಾಡ್ತಾರೋ, ಇಲ್ವೋ? ಮಾಡ್ತಾರೆ ಅಂದುಕೊಂಡರೂ ಯಾವಾಗ ಮಾಡ್ತಾರೆ?ಪಾಪ, ಅಲ್ಲಿಯವರೆಗೂ ಹಾಡಿದ್ದೇ ಹಾಡೋ ಕಿಸುಬಾಯಿ ದಾಸನ ಹಾಗೆ, ಓದಿದ್ದನ್ನೇ ಓದುತ್ತಾ ಕೂರಬೇಕಲ್ಲ ಮಗಳು ಎಂದು
ಬೇಜಾರು, ಸಂಕಟ! ಅದಕ್ಕೆ ಸರಿಯಾಗಿ, ನ್ಯೂಸ್ ಚಾನೆಲ್ ನವರು ದಿನಕ್ಕೊಂದರಂತೆ ಸುದ್ದಿ ಹಬ್ಬಿಸತೊಡಗಿದರು. “ನೆರೆಯ ರಾಜ್ಯಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು’, “ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ’, “ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾಡದೇ ಮಕ್ಕಳೆಲ್ಲ ಪಾಸ್’… ಹೀಗೆ, ಕೆಲವು ಸತ್ಯ, ಕೆಲವು ಕಪೋಲಕಲ್ಪಿತ ಹೆಡ್‌ಲೈನ್‌ಗಳು ಬೇರೆ!
ಆಗಿನ್ನೂ ನಮ್ಮ ಜಿಲ್ಲೆ ಗ್ರೀನ್‌ಜೋನ್‌ನಲ್ಲಿ ಇತ್ತು! ಆದರೆ, ಯಾವಾಗ ಹೊರರಾಜ್ಯಗಳಿಂದ ಜನರು ಬರತೊಡಗಿದರೋ, ಆ ನಂತರದಲ್ಲಿ ನಮ್ಮಲ್ಲೂ ಕೋವಿಡ್ ಸೋಂಕು ಹೆಚ್ಚಿತು. ಜೊತೆಗೆ ನನ್ನ ಆತಂಕವೂ! ಆ ಕ್ಷಣದಲ್ಲೇ ಪ್ಲೇಟು ಬದಲಿಸಿ, “ದೇವರೇ, ಪರೀಕ್ಷೆ ಮಾಡುವುದು ಬೇಡ. ಪರೀಕ್ಷೆಗಿಂತ ನಮ್ಮ ಮಕ್ಕಳ ಜೀವನ ಮುಖ್ಯ’ ಅಂತ ದೇವರಲ್ಲಿ ಮೊರೆಯಿಟ್ಟೆ. ಬಹುಶಃ ದೇವರಿಗೂ ಗಲಿಬಿಲಿ ಆಗಿರಬೇಕು, ಇವಳಿಗೆ ನಿಜವಾಗಲೂ ಏನು ಬೇಕು ಎಂದು!
Related Articles
“ಅಮ್ಮಾ, ನೀನು ನ್ಯೂಸ್ ನೋಡೋದನ್ನು ನಿಲ್ಲಿಸು. ಚಿಂತೆ ತಾನಾಗಿಯೇ ದೂರ ಹೋಗುತ್ತದೆ’ ಅಂತ ಮಗಳೇ ಉಪದೇಶ
ಮಾಡುವ ಹಾಗಾಯ್ತು.
Advertisement
ಪರೀಕ್ಷೆ ನಡೆಸುವುದು ಖಚಿತ ಅಂತಾದಾಗ ಮತ್ತಷ್ಟು ಆತಂಕ! ಹತ್ತೂವರೆಯ ಪರೀಕ್ಷೆಗೆ ಎಂಟೂವರೆಗೇ ಹಾಜರಿರಬೇಕು. ಅಂದರೆ, ಐದು ಗಂಟೆ ಉಪವಾಸವಿರಬೇಕು. ಮೂರು ತಿಂಗಳು ರಜೆಯಲ್ಲಿ ಹೊಟ್ಟೆ ತುಂಬಾ ತಿಂದು, ಮಧ್ಯದಲ್ಲಿ ಅದೂ ಇದೂ ಬಾಯಾಡಿಸಿ ಅಭ್ಯಾಸವಾದ ಮಗಳು ಹಸಿವಿನಿಂದ ತಲೆ ತಿರುಗಿಬಿದ್ದರೆ? ಪ್ರತಿವರ್ಷ ಮಳೆ ಅಂತ ರಜೆ ಕೊಡುತ್ತಿದ್ದ ಈ ಸಮಯದಲ್ಲಿ ಪರೀಕ್ಷೆ ಮಾಡುತ್ತಿದ್ದಾರಲ್ಲ, ಅದೂ ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಹಾಕಿ ಅಂತೆಲ್ಲಾ ಹಿಂಸೆ ಬೇರೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ, ಕಾಣದ ಕೋವಿಡ್ ಮಕ್ಕಳ ದೇಹ ಹೊಕ್ಕಿಬಿಟ್ಟರೆ… ಇಂಥ ಯೋಚನೆಗಳಿಂದ ಅದೆಷ್ಟು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದೆನೋ ನನಗೇ ಗೊತ್ತಿಲ್ಲ!
ಸದ್ಯ, ನನ್ನ ಆತಂಕಗಳೆಲ್ಲ ಸುಳ್ಳಾಗಿ, ಪರೀಕ್ಷೆಗಳು ಸುಸೂತ್ರವಾಗಿ ಮುಗಿದು ನೆಮ್ಮದಿಯಾಗಿದೆ. ಫಲಿತಾಂಶವೇನೇ ಬರಲಿ! ಈಕೋವಿಡ್ ಕಾಲದಲ್ಲಿ, ಎಲ್ಲಾ ಆತಂಕಗಳ ನಡುವೆ ಪರೀಕ್ಷೆ ಬರೆಯುವುದೇ ಒಂದು ದೊಡ್ಡ ಅಗ್ನಿಪರೀಕ್ಷೆ ! ಈ ಬಾರಿ ಪರೀಕ್ಷೆ
ಬರೆದ ಎಲ್ಲ ಮಕ್ಕಳೂ, ಒಂದರ್ಥದಲ್ಲಿ ವಿಜಯಿಗಳೇ! – ಸವಿತಾ ಮಾಧವ ಶಾಸ್ತ್ರೀ , ಗುಂಡಿ