ಬೆಂಗಳೂರು:ಭೂಗತಲೋಕದ ಮಾಜಿ ಡಾನ್ ಮುತ್ತಪ್ಪ ರೈ ಇತ್ತೀಚೆಗಷ್ಟೇ ಅನಾರೋಗ್ಯದಿಂದ ಸಾವನ್ನಪ್ಪಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಮುತ್ತಪ್ಪ ರೈ ವಿಧಿವಶರಾಗುವ ಮುನ್ನ ಬರೆದಿಟ್ಟಿದ್ದ ವಿಲ್ ಇದೀಗ ಹೆಚ್ಚು ಸದ್ದು ಮಾಡತೊಡಗಿದೆ.
ಮುತ್ತಪ್ಪ ರೈ ತಮ್ಮ ಜೀವಿತಾವಧಿಯಲ್ಲಿ ಸಂಪಾದಿಸಿದ್ದ ಒಟ್ಟು ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಂಚಿಕೆ ಕುರಿತು ಬರೆದಿಟ್ಟಿದದ 40 ಪುಟಗಳ ವಿಲ್ ನ ಮಾಹಿತಿ ಬಯಲಾಗಿದೆ ಎಂದು ವರದಿ ತಿಳಿಸಿದೆ.
ರೈ ಅವರು ಬರೆದಿಟ್ಟ ವಿಲ್ ಪ್ರಕಾರ, ತಮ್ಮ ಎಲ್ಲಾ ಸ್ವಯಾರ್ಜಿತ ಆಸ್ತಿಯನ್ನು ಪುತ್ರರಾದ ರಾಖಿ ರೈ ಮತ್ತು ರಿಖಿ ರೈಗೆ ಸಮಾನವಾಗಿ ಹಂಚಿದ್ದಾರೆ. ಅಷ್ಟೇ ಅಲ್ಲ ಸುಮಾರು 15ವರ್ಷಗಳಿಂದ ರೈ ಮನೆಯಲ್ಲಿ ಮನೆ ಕೆಲಸ ಮಾಕೊಂಡಿದ್ದ, ತೋಟದ ಕೆಲಸ ಮಾಡಿಕೊಂಡಿದ್ದವರಿಗೂ ಒಂದು ಸೈಟ್ ನೀಡಬೇಕು ಎಂದು ವಿಲ್ ನಲ್ಲಿ ನಮೂದಿಸಿದ್ದಾರೆ. ರೈ ಜತೆ ಅಂದು ಇದ್ದ ಗನ್ ಮ್ಯಾನ್ ಗಳು, ಡ್ರೈವರ್ ಸೇರಿ ಒಟ್ಟು 25 ಮಂದಿ ಇದ್ದಿದ್ದು ಅವರೆಲ್ಲರಿಗೂ ರೈ ತಮ್ಮ ಆಸ್ತಿಯಲ್ಲಿ ಪಾಲು ನೀಡಿರುವುದಾಗಿ ಅಡ್ವೋಕೇಟ್ ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಮುತ್ತಪ್ಪ ರೈ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ರಾಮನಗರ ಸೇರಿದಂತೆ ದೇಶ, ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಸ್ಥಿರಾಸ್ತಿ ಹೊಂದಿದ್ದರು. ರಾಜ್ಯದ ವಿವಿಧೆಡೆ 600ಕ್ಕೂ ಅಧಿಕ ಎಕರೆ ಭೂಮಿ ಇದೆ. ಸಕಲೇಶಪುರದಲ್ಲಿನ 200ಕ್ಕೂ ಅಧಿಕ ಎಕರೆ ಜಾಗ ಮತ್ತು ರೆಸಾರ್ಟ್ ಅನ್ನು ಕಿರಿಯ ಪುತ್ರ ರಿಖಿ ಹೆಸರಿಗೆ ವಿಲ್ ಮಾಡಿದ್ದಾರೆ.
ಎರಡನೇ ಪತ್ನಿ ಅನುರಾಧಗೆ ಈಗಾಗಲೇ ಆಸ್ತಿ ಕೊಟ್ಟಿರುವುದಾಗಿ ವಿಲ್ ನಲ್ಲಿ ನಮೂದಿಸಿದ್ದು, ಸಹಕಾರನಗರದಲ್ಲಿ ಮನೆ ಕಟ್ಟಿಸಿದ್ದು, ಒಂದು ಐಶಾರಾಮಿ ಕಾರು, ಚಿನ್ನಾಭರಣ ಮತ್ತು ಹಣ ನೀಡಿದ್ದಾರೆ. ಅಷ್ಟೇ ಅಲ್ಲ ಜಯ ಕರ್ನಾಟಕ ಸಂಘಟನೆಯನ್ನು ಯಾವುದೇ ತೊಂದರೆ ಇಲ್ಲದ ರೀತಿ ಜಗದೀಶ್ ಮುನ್ನಡೆಸಿಕೊಂಡು ಹೋಗಬೇಕು ಎಂದು ವಿಲ್ ನಲ್ಲಿ ಸೂಚಿಸಿದ್ದು, ತನ್ನ ಮಕ್ಕಳು ಸಂಘಟನೆ ಉಸ್ತುವಾರಿ ನೋಡಿಕೊಳ್ಳಬೇಕೆಂದು ಬರೆದಿರುವುದಾಗಿ ತಿಳಿಸಿದ್ದಾರೆ.