Advertisement
ಮಂಗಳವಾರ ಎಸ್‌ಐಟಿ ಅಧಿಕಾರಿಗಳು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವರನ್ನು ವಿಚಾರಣೆ ಗೊಳಪಡಿಸಿ ಕೆಲವು ಅನುಮಾನಗಳಿಗೆ ಉತ್ತರ ಪಡೆದು ಕೊಂಡರು. ಈ ಹಿಂದೆ ಶಂಕೆಯ ಮೇರೆಗೆ ವಶಕ್ಕೆ ಪಡೆದ ಕೆಲವರ ಫೋನ್‌ನಿಂದ ಮಂಗಳವಾರ ವಿಚಾರಣೆಗೊಳಗಾದವರಿಗೆ ದೂರವಾಣಿ ಕರೆಗಳು ಹೋಗಿದ್ದವು. ಹೀಗಾಗಿ ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದುಕೊಂಡಿದ್ದೇವೆಂದು ಎಸ್‌ಐಟಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಉಳಿದಂತೆ ಲಂಕೇಶ್ ಪತ್ರಿಕೆಯಲ್ಲಿ ಯಾರ್ಯಾರ ವಿರುದ್ಧ ಲೇಖನ ಪ್ರಕಟಗೊಂಡಿದ್ದವೋ ಎಲ್ಲರನ್ನೂ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಮತ್ತೂಂದೆಡೆ ಗೌರಿ ಹತ್ಯೆಯಲ್ಲಿ ನಕ್ಸಲರ ಕೈವಾಡವಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಗೌರಿ ಲಂಕೇಶ್ ಜತೆ ನಿರಂತರ ಸಂಪರ್ಕದಲ್ಲಿದ್ದವರೂ, ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದು, ಇದಕ್ಕೆ ಒಂದು ಬಣ ವಿರೋಧ ವ್ಯಕ್ತವಾಗಿತ್ತೆಂಬ ಮಾಹಿತಿ ಲಭ್ಯವಾಗಿತ್ತು.
ಹೀಗಾಗಿ ಸಭೆಯಲ್ಲಿ ಗೌರಿ ಹೊರತುಪಡಿಸಿ ಮತ್ಯಾರಾದರೂ ಭಾಗವಹಿಸಿದ್ದರೇ ಅವರನ್ನು ಪತ್ತೆಹಚ್ಚಿ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಬಲಪಂಥೀಯ ಬಣದ ಕೈವಾಡದ ಶಂಕೆಯ ಆಯಾಮದಲ್ಲೂ ತನಿಖೆ ಮುಂದುವರಿದಿದೆ ಎಂದರು. ಗೌರಿಲಂಕೇಶ್ ಹತ್ಯೆ ಸಂಬಂಧಿಸಿದ ಎಫ್ಎಸ್‌ಎಲ್ ವರದಿ ಇನ್ನೂ ಸಿಕ್ಕಿಲ್ಲ. ವರದಿ ಬಂದ ಬಳಿಕ ಮತ್ತಷ್ಟು ಸಾಕ್ಷ್ಯ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.