ಚಂಡೀಗಢ : ಪಂಜಾಬಿನ ಮಾಜಿ ಮುಖ್ಯಮಂತ್ರಿ ಸುರ್ಜಿತ್ ಸಿಂಗ್ ಬರ್ನಾಲಾ ಅವರು ದೀರ್ಘ ಕಾಲದ ಅಸ್ವಾಸ್ಥ್ಯದ ಬಳಿಕ ಇಂದು ಶನಿವಾರ ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. 1985ರಿಂದ 1987ರ ವರೆಗಿನ ಅವಧಿಯಲ್ಲಿ ಪಂಜಾಬಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಬರ್ನಾಲಾ ಅವರು ತಮಿಳು ನಾಡು, ಉತ್ತರಾಖಂಡ, ಆಂಧ್ರ ಪ್ರದೇಶ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳ ರಾಜ್ಯಪಾಲರಾಗಿಯೂ, ಕೇಂದ್ರ ಸಚಿವರಾಗಿಯೂ, ಸೇವೆ ಸಲ್ಲಿಸಿದ್ದರು.
1925ರ ಅಕ್ಟೋಬರ್ 21ರಂದು ಅತೇಲಿ ಹರಿಯಾಣದಲ್ಲಿ ಜನಿಸಿದ್ದ ಬರ್ನಾಲಾ, 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
1952ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿ ಪರಾಭವಗೊಂಡಿದ್ದ ಬರ್ನಾಲಾ, 1977ರಲ್ಲಿ ಸಂಸತ್ತಿಗೆ ಚುನಾಯಿತರಾಗಿದ್ದರು. ಮೊರಾರ್ಜಿ ದೇಸಾಯಿ ಸರಕಾರದಲ್ಲಿ ಅವರು ಕೃಷಿ ಸಚಿವರಾಗಿದ್ದರು. ಅಮೃತರಸರದಲ್ಲಿನ ಗುರು ನಾನಕ್ ದೇವ್ ಯುನಿವರ್ಸಿಟಿ ಸ್ಥಾಪನೆಗೆ ಅವರು ಕಾರಣೀಭೂತರಾಗಿದ್ದರು.
ಬರ್ನಾಲಾ ಅವರ ಪತ್ನಿ ಸುರ್ಜಿತ್ ಕೌರ್ ಬರ್ನಾಲಾ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.