ಮುಂಬೈ: ಮಾವೋವಾದಿಗಳ ಜತೆ ನಿಕಟ ಸಂಬಂಧ ಹೊಂದಿರುವ ಆರೋಪದಲ್ಲಿ ಜೈಲುಸೇರಿದ್ದ ದೆಹಲಿ ಯೂನಿರ್ವಸಿಟಿಯ ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್ ಮಂಗಳವಾರ (ಮಾರ್ಚ್ 05) ಖುಲಾಸೆಗೊಳಿಸಿದೆ.
ಇದನ್ನೂ ಓದಿ:SSMB29: ರಾಜಮೌಳಿ ಸಿನಿಮಾಕ್ಕೆ ಮಹೇಶ್ ಬಾಬು ಲುಕ್ ಟೆಸ್ಟ್; ಬಹು ಅವತಾರದಲ್ಲಿ ಪ್ರಿನ್ಸ್?
2017ರಲ್ಲಿ ಪ್ರೊ.ಸಾಯಿಬಾಬಾ (54ವರ್ಷ) ಹಾಗೂ ಇತರ ಐವರನ್ನು ಸೆಷನ್ಸ್ ಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು. 2022ರ ಅಕ್ಟೋಬರ್ 14ರಂದು ವಿಕಲಚೇತನ ಸಾಯಿಬಾಬಾ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಆದರೆ ಸುಪ್ರೀಂಕೋರ್ಟ್ ಖುಲಾಸೆಯನ್ನು ರದ್ದುಗೊಳಿಸಿ, ಮರುವಿಚಾರಣೆ ನಡೆಸುವಂತೆ ಹೈಕೋರ್ಟ್ ಗೆ ನಿರ್ದೇಶನ ನೀಡಿತ್ತು.
ಗಾಲಿಕುರ್ಚಿಯಲ್ಲಿ ಓಡಾಡುವ ಸಾಯಿಬಾಬಾ ಪ್ರಸ್ತುತ ನಾಗ್ಪುರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾವೋವಾದಿಗಳಿಗೆ ದೇಶದ ವಿರುದ್ಧ ಚಟುವಟಿಕೆ ನಡೆಸಲು ಹಣಕಾಸು ನೆರವು ನೀಡಿದ್ದಾರೆಂಬ ಆರೋಪದಲ್ಲಿ ಗಡ್ಚಿರೋಲಿ ಸೆಷನ್ಸ್ ಕೋರ್ಟ್ 2017ರಲ್ಲಿ ಸಾಯಿಬಾಬಾ ಮತ್ತು ಐವರನ್ನು ದೋಷಿ ಎಂದು ತೀರ್ಪು ನೀಡಿ, ಶಿಕ್ಷೆ ವಿಧಿಸಿತ್ತು.
ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಾಯಿಬಾಬಾ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸೂಕ್ತ ಸಾಕ್ಷ್ಯಾಧಾರ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.