ಹೊಳೆಹೊನ್ನೂರು: ಮೀಸಲಾತಿ ವಿಚಾರದಲ್ಲಿ ಯಡಿಯೂರಪ್ಪ ಅವರ ನಿವಾಸದ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರ ಕೈವಾಡವಿದೆ. ಅವರ ಪಿಎ ಕಾಣಿಸಿಕೊಂಡಿದ್ದು, ಮಾಧ್ಯಮಗಳ ವರದಿಯಿಂದ ಗೊತ್ತಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಯಾರದ್ದೇ ಹೆಸರು ಹೇಳದೆ ಆರೋಪಿಸಿದ್ದಾರೆ.
ಪಟ್ಟಣದ ಭಗೀರಥ ಸಮುದಾಯ ಭವನದಲ್ಲಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಹಾಗೂ ಮಾದಿಗ ಸಮಾಜ ವತಿಯಿಂದ ಆಯೋಜಿಸಲಾಗಿದ್ದ ಸರಕಾರಕ್ಕೆ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಮೀಸಲಾತಿ ವಿಚಾರದಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಕೆಲವೇ ತಿಂಗಳ ಹಿಂದೆ ಬಿಜೆಪಿ ಸರಕಾರ ಇದಕ್ಕೆ ಅನುಮೋದನೆ ನೀಡಿದೆ. ಅಲ್ಲದೆ ಯಾವುದೇ ಸಮಾಜಕ್ಕೆ ತೊಂದರೆಯಾಗದ ರೀತಿಯಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್ ಇದನ್ನು ನಮ್ಮ ಸರಕಾರ ಬಂದರೆ ಈ ಮೀಸಲಾತಿಯನ್ನು ಹಿಂದೆತೆಗೆದುಕೊಳ್ಳುವುದಾಗಿ ಘೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು 10 ರಿಂದ 15 ಕ್ಷೇತ್ರಗಳನ್ನು ಒಗ್ಗೂಡಿಸಿ ಮೋದಿ ಅವರ ಕಾರ್ಯಕ್ರಮವಿರುತ್ತದೆ. ಜಿಲ್ಲೆಯಲ್ಲಿ ಈ ಅದೃಷ್ಟ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಒಲಿಯಬಹುದು. ಆದ್ದರಿಂದ ಕಾರ್ಯಕರ್ತರು ಇಂದಿನಿಂದಲೇ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಅಭಿವೃದ್ಧಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
ದುರುದ್ದೇಶದಿಂದ ಗೊಂದಲ
ಶಾಸಕ ಕೆ.ಬಿ. ಅಶೋಕ ನಾಯ್ಕ ಮಾತನಾಡಿ, ಸಂವಿಧಾನದ ಪ್ರಕಾರ ಹಿಂದುಳಿದ ವರ್ಗಗಳಿಗೆ ಕಳೆದ 60 ವರ್ಷಗಳಿಂದ ಶೇ. 3ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿತ್ತು. ಆದರೆ ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಾಗಿದ್ದರಿಂದ ರಾಜ್ಯ ಸರಕಾರ ಮೀಸಲಾತಿಯನ್ನು ಹೆಚ್ಚು ಮಾಡಿದೆ. ಆದರೆ ಕೆಲವು ನಾಯಕರು ರಾಜಕೀಯ ದುರುದ್ದೇಶದಿಂದ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯ ಎಂದರು.
ಕೆಎಸ್.ಡಿ.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಕ್ಷೇತ್ರದ ಉಸ್ತುವಾರಿ ಮುಕೇಶ್ ಹುಲ್ಲಿ, ಮಹಾದೇವಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಕಲ್ಲಜ್ಜನಾಳ್ ಮಂಜುನಾಥ, ಉಪಾಧ್ಯಕ್ಷ ಸುಬ್ರಮಣಿ, ಜಗದೀಶ್ ಗೌಡ್ರು, ನಾಗಣ್ಣ, ತಿಪ್ಪೇಶಪ್ಪ, ಪಾಲಕ್ಷಪ್ಪ, ಸುಧಾಮಣಿ ಭೋರಯ್ಯ ಇನ್ನಿತರರು ಇದ್ದರು.