Advertisement

ಮಾಜಿ ಸಚಿವ ಕಾಗೋಡು ತಿಮ್ಮಪ್ಪರಿಗೆ ಕೋವಿಡ್ : ಬೇರೆಯವರಿಂದ ಮಾಹಿತಿ!

07:23 PM Jan 20, 2022 | Vishnudas Patil |

ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಪಡುವಂತೆ ಕಾಗೋಡು ಪುತ್ರಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಮನವಿ ಮಾಡಿದ್ದಾರೆ.

Advertisement

ಗುರುವಾರ ತುರ್ತಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ನೋಡಲು, ಆರೋಗ್ಯ ವಿಚಾರಿಸಲು ಕಾರ್ಯಕರ್ತರು, ಅಭಿಮಾನಿಗಳು ಮನೆಗೆ ಬರಬಾರದು ಎಂದು ಅವರು ತಿಳಿಸಿದರು.

ಈಚೆಗೆ ಕಾಗೋಡು ತಿಮ್ಮಪ್ಪ ಅವರು ಮೀಸಲು ಅರಣ್ಯಕ್ಕೆ ಸಂಬಂಧಪಟ್ಟಂತೆ ಉಪವಿಭಾಗಾಧಿಕಾರಿಗಳ ಕಚೇರಿ, ಅರಣ್ಯ ಇಲಾಖೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಚಿಕ್ಕನೆಲ್ಲೂರು, ಚಕ್ಕೋಡಿ ಗ್ರಾಮದಲ್ಲಿ ನಡೆದ ಮೀಸಲು ಅರಣ್ಯ ಸಮಾಲೋಚನಾ ಸಭೆಯಲ್ಲಿ ಸಹ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅನೇಕ ಜನರು ಅವರ ಸಂಪರ್ಕದಲ್ಲಿದ್ದರು. ಸಂಪರ್ಕದಲ್ಲಿದ್ದವರಿಗೆ ಕೋವಿಡ್ ಸಂಬಂಧಿ ಯಾವುದಾದರೂ ಲಕ್ಷಣ ಇದ್ದಲ್ಲಿ ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಹೇಳಿದರು.

ಬೇರೆಯವರಿಂದ ಮಾಹಿತಿ

ಕಾಗೋಡು ಮಂಗಳವಾರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಪರೀಕ್ಷಾ ವರದಿಯು ಗುರುವಾರ ಬಂದಿದೆ. ಆದರೆ ಕಾಗೋಡು ತಿಮ್ಮಪ್ಪ ಅವರಿಗೆ ಪಾಸಿಟಿವ್ ಬಂದಿರುವುದನ್ನು ಆರೋಗ್ಯ ಇಲಾಖೆ ತಿಳಿಸಿಲ್ಲ. ಎಪಿಎಂಸಿ ಸದಸ್ಯ ಕೆ.ಹೊಳೆಯಪ್ಪ ಅವರು ಆಸ್ಪತ್ರೆಗೆ ಹೋದಾಗ ವಿಷಯ ಗೊತ್ತಾಗಿ ನಮಗೆ ತಿಳಿಸಿದ್ದಾರೆ. ಮಾಜಿ ಆರೋಗ್ಯ ಸಚಿವರಿಗೆ ಈ ಸ್ಥಿತಿ ಆದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ ಅವರು, ಪಾಸಿಟಿವ್ ಬಂದಾಗ ಆರೋಗ್ಯ ಇಲಾಖೆ ಸಂಬಂಧಪಟ್ಟವರಿಗೆ ತಿಳಿಸಿ, ಎಚ್ಚರಿಸುವ ಕೆಲಸ ಮಾಡಬೇಕು ಎಂದರು.

Advertisement

ಹಿಂದಿನ ಎರಡೂ ಅಲೆಯಲ್ಲೂ ಕಾಗೋಡು ತಿಮ್ಮಪ್ಪ ಅವರಿಗೆ ಕೋವಿಡ್ ಲಕ್ಷಣ ಕಂಡು ಬಂದಿತ್ತು. ಆದರೆ ಗಂಭೀರ ಸ್ವರೂಪದ್ದಾಗಿರಲಿಲ್ಲ. ತಕ್ಷಣ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಈ ಸಾರಿ ಸಹ ಅಂತಹ ಗಂಭೀರವಾದ ಸಮಸ್ಯೆಯಿಲ್ಲ. ಮಾಮೂಲಿ ಜ್ವರ, ಕಫ ಇದ್ದು, ಮನೆಯಲ್ಲೆ ಕ್ವಾರಂಟೈನ್ ಆಗಿದ್ದು, ಶೀಘ್ರ ಗುಣಮುಖರಾಗುತ್ತಾರೆ ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಮಧುಮಾಲತಿ, ಎನ್.ಲಲಿತಮ್ಮ, ವೆಂಕಟೇಶ್ ಮೆಳವರಿಗೆ, ಸಚಿನ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next